'ನಡ್ಡಾ ಯಾರ್ರೀ? ಅವರಿಗೇಕೆ ನಾವು ಉತ್ತರಿಸಬೇಕು?'

By Suvarna NewsFirst Published Jan 20, 2021, 1:41 PM IST
Highlights

ರಾಹುಲ್‌-ನಡ್ಡಾ ‘ಚೀನಾ ಸಮರ’| ನೆಹರು ಚೀನಾಗೆ ಸಾವಿರಾರು ಕಿ.ಮೀ. ಕೊಟ್ಟಿದ್ದು ಸುಳ್ಳಾ? ರಾಹುಲ್‌ ಉತ್ತರಿಸಲಿ: ನಡ್ಡಾ| ನಡ್ಡಾ ಯಾರ್ರೀ? ಅವರಿಗೇಕೆ ನಾವು ಉತ್ತರಿಸಬೇಕು?: ರಾಹುಲ್‌ ತಿರುಗೇಟು

 ನವದೆಹಲಿ(ಜ.20):ಅರುಣಾಚಲ ಪ್ರದೇಶದ ಭಾಗವನ್ನು ಚೀನಾ ಅತಿಕ್ರಮಿಸಿಕೊಂಡು ಹಳ್ಳಿ ನಿರ್ಮಿಸಿದೆ ಎಂಬ ವಿಚಾರವು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ನಡುವೆ ನೇರಾನೇರ ವಾಕ್ಸಮರಕ್ಕೆ ನಾಂದಿ ಹಾಡಿದೆ. ‘ಅರುಣಾಚಲ ಸಾವಿರಾರು ಕಿ.ಮೀ. ಪ್ರದೇಶವನ್ನು ಚೀನಾಗೆ ಬಳುವಳಿ ಕೊಟ್ಟಿದ್ದು ಪಂ. ನೆಹರು’ ಎಂದು ನಡ್ಡಾ ಆರೋಪಿಸಿದ್ದರೆ, ‘ಯಾರ್ರೀ ಜೆ.ಪಿ. ನಡ್ಡಾ? ಅವರಿಗೇಕೆ ನಾನು ಉತ್ತರಿಸಬೇಕು?’ ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.

ಬೆಳಗ್ಗೆ ಟ್ವೀಟ್‌ ಮಾಡಿದ್ದ ರಾಹುಲ್‌ ಗಾಂಧಿ, ‘ನಾನು ದೇಶವು ತಲೆಬಾಗಲು ಬಿಡುವುದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆ ಜ್ಞಾಪಿಸಿಕೊಳ್ಳಿ’ ಎಂದು ಟ್ವೀಟ್‌ ಮಾಡಿದ್ದರು. ‘ಇದು ಮೋದಿ ಅವರ 56 ಇಂಚಿನ ಎದೆ’ ಎಂದು ಪಕ್ಷದ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಟೀಕಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ನಡ್ಡಾ, ‘ಚೀನಾ ವಿಷಯದಲ್ಲಿ ರಾಹುಲ್‌, ಅವರ ವಂಶಸ್ಥರು ಸುಳ್ಳು ಹೇಳಿಕೆ ನಿಲ್ಲಿಸಬೇಕು. ಚೀನೀಯರಿಗೆ ಪಂ. ನೆಹರು ಅವರು ಸಾವಿರಾರು ಕಿ.ಮೀ. ಭೂಮಿಯನ್ನು ನೀಡಿದ್ದರು ಎಂಬುದನ್ನು ರಾಹುಲ್‌ ನಿರಾಕರಿಸುತ್ತಾರಾ? ಕಾಂಗ್ರೆಸ್‌ ಏಕೆ ಚೀನಾಗೆ ಶರಣಾಗುತ್ತದೆ? ಇದಕ್ಕೆ ಈಗಷ್ಟೇ ರಜೆ ಮುಗಿಸಿ ಬಂದ ರಾಹುಲ್‌ ಉತ್ತರಿಸಬೇಕು’ ಎಂದು ಪ್ರಶ್ನಿಸಿದ್ದರು.

ಇದಕ್ಕೆ ಸುದ್ದಿಗಾರರ ಮುಂದೆ ಪ್ರತಿಕ್ರಿಯಿಸಿದ ರಾಹುಲ್‌, ‘ಯಾರ್ರೀ ಅದು (ನಡ್ಡಾ)? ನಾನೇಕೆ ಅವರಿಗೆ ಉತ್ತರಿಸಬೇಕು? ಅವರೇನು ನನ್ನ ಪ್ರಾಧ್ಯಾಪಕರಾ? ನಾನು ದೇಶಕ್ಕೆ ಉತ್ತರಿಸುವೆ’ ಎಂದು ತಿರುಗೇಟು ನೀಡಿದರು.

click me!