
ಇತ್ತೀಚೆಗೆ ಉತ್ತರಾಖಂಡದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದ ವೇದಿಕೆಯನ್ನು 'ಶುದ್ಧೀಕರಣ' ಮಾಡಿದ್ದ ಘಟನೆ ಬಗ್ಗೆ ಉಲ್ಲೇಖಿಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಶನಿವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿಯವರು, ಖರ್ಗೆ ಭಾಷಣ ಮಾಡಿದ ಬಳಿಕ ಶುದ್ಧೀಕರಣ ಮಾಡಿದ ಘಟನೆ ಉಲ್ಲೇಖಿಸಿ, ಈ ಪದ್ಧತಿ ಅಸ್ಪೃಶ್ಯತೆಗೆ ಇನ್ನೊಂದು ಹೆಸರು. ಸಂವಿಧಾನದ ಪ್ರಕಾರ ಇದು ಅಪರಾಧ ಎಂದರು.
ದೇಶದಲ್ಲಿ ಸಂವಿಧಾನದ ಸಿದ್ಧಾಂತ ಮತ್ತು ಬಿಜೆಪಿ-ಆರ್‌ಎಸ್‌ಎಸ್ ಸಿದ್ಧಾಂತದ ನಡುವೆ ರಾಜಕೀಯ ಸ್ಪರ್ಧೆ ನಡೆಯುತ್ತಿದೆ. ರಾಜಸ್ಥಾನದಲ್ಲಿ ನಮ್ಮ ಸಿಎಲ್‌ಪಿ ನಾಯಕರು ದೇವಸ್ಥಾನಕ್ಕೆ ಭೇಟಿ ನೀಡಿದರೆ, ಬಿಜೆಪಿ ನಾಯಕರು ಅಲ್ಲಿ 'ಶುದ್ಧೀಕರಣ' ಮಾಡುತ್ತಾರೆ. ಇಡೀ ಜೀವನವನ್ನು ದೇಶ ಮತ್ತು ಸಂವಿಧಾನಕ್ಕೆ ಮುಡಿಪಾಗಿಟ್ಟಿರುವ ಕಾಂಗ್ರೆಸ್ ಅಧ್ಯಕ್ಷ ಖರ್ಗೆಯವರು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಭಾಷಣ ಮಾಡಲು ಹೋದರೆ, ಅಲ್ಲಿಯೂ ಶುದ್ಧೀಕರಣ ಮಾಡ್ತಾರೆ. ಇದೆಲ್ಲ ಮಾಡ್ತಿರೋರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರೇ ಎಂದು ಆರೋಪಿಸಿದರು.
ಈ ರೀತಿ ಒಬ್ಬ ದಲಿತ ಮುಖಂಡ ಭಾಷಣ ಮಾಡಿದ ಬಳಿಕ ಸ್ಥಳವನ್ನು ಶುದ್ಧೀಕರಣ ಮಾಡೋದು ಭಾರತದ ಸಂವಿಧಾನದ ಪ್ರಕಾರ ಇದೊಂದು ಕ್ರಿಮಿನಲ್ ಚಟುವಟಿಕೆ. 'ಶುದ್ಧೀಕರಣ' ಎನ್ನುವುದು ಅಸ್ಪೃಶ್ಯತೆಗೆ ಇರುವ ಇನ್ನೊಂದು ಹೆಸರು. ಅಸ್ಪೃಶ್ಯತೆಯನ್ನು ಕಾನೂನುಬಾಹಿರಗೊಳಿಸಲಾಗಿದೆ, ಆದರೂ ಬಿಜೆಪಿ ಸದಸ್ಯರು ಅದನ್ನು ಬಹಿರಂಗವಾಗಿ ಆಚರಿಸುತ್ತಿದ್ದಾರೆ. ಈ ಶುದ್ಧೀಕರಣದ ಮೂಲಕ ದಲಿತರು ಅಶುದ್ಧರು, ಅವರನ್ನು ಮುಟ್ಟಬಾರದು ಎಂಬ ಸಂದೇಶವನ್ನು ಸಾರಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಇಂದು ನಡೆಯುತ್ತಿರುವ ದೊಡ್ಡ ರಾಜಕೀಯ ಸಂಘರ್ಷ ಎರಡು ವಿರೋಧಿ ಸಿದ್ಧಾಂತಗಳ ನಡುವೆ ಇದೆ. ದೇಶದಲ್ಲಿ ಎರಡು ಸಿದ್ಧಾಂತಗಳ ನಡುವೆ ಹೋರಾಟ ನಡೆಯುತ್ತಿದೆ. ಒಂದೆಡೆ ಭಾರತದ ಸಂವಿಧಾನ, ಅಂಬೇಡ್ಕರ್, ಗಾಂಧಿ, ಜವಾಹರಲಾಲ್ ನೆಹರು ಮತ್ತು ಸರ್ದಾರ್ ಪಟೇಲ್ ಅವರ ಸಂವಿಧಾನವಿದೆ. ಇನ್ನೊಂದೆಡೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಸಿದ್ಧಾಂತವಿದೆ. ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ರಾಜಕೀಯ ಈ ಎರಡು ಸಿದ್ಧಾಂತಗಳ ನಡುವೆ ಇದೆ ಎಂದರು.
ಜಾತಿ ಆಧಾರಿತ ತಾರತಮ್ಯದ ಘಟನೆಗಳನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಸಾಂವಿಧಾನಿಕ ರಕ್ಷಣೆಗಳ ಹೊರತಾಗಿಯೂ ದಲಿತರು ದೈನಂದಿನ ಜೀವನದಲ್ಲಿ ತಾರತಮ್ಯವನ್ನು ಎದುರಿಸುತ್ತಲೇ ಇದ್ದಾರೆ. ಸಾವಿರಾರು ವರ್ಷಗಳಿಂದ ಈ ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ಮತ್ತು ಹಿಂಸೆ ನಡೆಯುತ್ತಿದೆ. ಸಂವಿಧಾನವು ಇದನ್ನು ಕಾನೂನುಬಾಹಿರಗೊಳಿಸಿದ್ದರೂ, ಇಂದಿಗೂ ಶಾಲೆಗಳಲ್ಲಿ ದಲಿತ ಮಕ್ಕಳ ಕೈಯಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ, ಕಸ ಗುಡಿಸಿ ನೆಲ ಒರೆಸಲಾಗುತ್ತಿದೆ. ಇದು ಮುಂದಿನ ಪೀಳಿಗೆಯ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಯೋಚಿಸಿ. ಮಕ್ಕಳು ತಮ್ಮ ಸಹಪಾಠಿಗಳಲ್ಲಿ ಕೆಲವರು ಕಸ ಗುಡಿಸುವುದನ್ನು ನೋಡುತ್ತಾರೆ, ಹಾಗೆಯೇ ಕಸ ಗುಡಿಸುವ ಮಕ್ಕಳು ತಾವು ಮಾಡಬೇಕಾದ ಕೆಲಸವನ್ನು ಇತರರು ಮಾಡಬೇಕಾಗಿಲ್ಲ ಎಂಬುದನ್ನು ನೋಡುತ್ತಾರೆ. ಇದು ಭಾರತದ ವಾಸ್ತವ' ಎಂದು ಅವರು ವಿಷಾದಿಸಿದರು.
ಸಾಮಾನ್ಯ ಮೂಲಭೂತ ಸೌಕರ್ಯ ಬಳಕೆಯಲ್ಲೂ ಜಾತಿ ತಾರತಮ್ಯವನ್ನು ಕಾಣಬಹುದು. ಹಳ್ಳಿಯ ಬಾವಿಯಿಂದ ನೀರು ಸೇದಲು ದಲಿತರಿಗೆ ಅವಕಾಶ ನೀಡುವುದಿಲ್ಲ; ಸಾಮಾನ್ಯ ಬಾವಿಯನ್ನು ಬಳಸದಂತೆ ನಿರ್ಬಂಧಿಸಿದ್ದರಿಂದ ಅವರು ತಮ್ಮದೇ ಆದ ಖಾಸಗಿ ಬಾವಿಗಳನ್ನು ತೋಡಬೇಕಾಯಿತು. ಟೀ ಅಂಗಡಿಗಳಲ್ಲಿ, ಎರಡು ಬಗೆಯ ಕಪ್‌ಗಳನ್ನು ಬಳಸುವುದನ್ನು ನೀವು ನೋಡುತ್ತೀರಿ, ಒಂದು ತೊಳೆದು ಮರುಬಳಕೆ ಮಾಡಬಹುದಾದ ಗಾಜಿನ ಕಪ್, ಇನ್ನೊಂದು ಒಮ್ಮೆ ಬಳಸಿ ಬಿಸಾಡುವ ಪೇಪರ್ ಅಥವಾ ಪ್ಲಾಸ್ಟಿಕ್ ಕಪ್. ಪ್ಲಾಸ್ಟಿಕ್ ಅಥವಾ ಪೇಪರ್ ಕಪ್‌ಗಳು ದಲಿತರಿಗಾಗಿ, ಗಾಜಿನ ಕಪ್‌ಗಳು ಇತರರಿಗಾಗಿ ಇವೆ. ಇದು ಭಾರತದ ವಾಸ್ತವ. ಇದು ಉತ್ತರ ಪ್ರದೇಶದ ವಾಸ್ತವ, ಉತ್ತರ ಭಾರತದ ವಾಸ್ತವ, ಮತ್ತು ಇದನ್ನು ನೀವು ನಗರಗಳು ಮತ್ತು ಹಳ್ಳಿಗಳಲ್ಲಿ ಈಗಲೂ ನೋಡಬಹುದು ಎಂದರು.
ಹಲ್ದ್ವಾನಿ ವಿವಾದವೇನು?
2027ರ ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಆಗಸ್ಟ್ 8 ರಂದು ರಾಮಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ರ‍್ಯಾಲಿಯಿಂದ ಹಲ್ದ್ವಾನಿ ವಿವಾದಕ್ಕೆ ಕಾರಣವಾಯ್ತು ಈ ರ‍್ಯಾಲಿ ನಂತರ ಬಲಪಂಥೀಯ ಗುಂಪಿನ ಸದಸ್ಯರು ಆ ಸ್ಥಳದಲ್ಲಿ ಶುದ್ಧೀಕರಣದ ಆಚರಣೆಯನ್ನು ನಡೆಸಿದರು ಇದು ಕಾಂಗ್ರೆಸ್ ನಾಯಕರ ಟೀಕೆಗೆ ಕಾರಣವಾಯಿತು.
ಖರ್ಗೆಯವರು ಕೂಡ ಈ ವಿಷಯವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿ, ಈ ಆಚರಣೆಯನ್ನು ತಮ್ಮ ದಲಿತ ನಾಯಕನ ಗುರುತಿಗೆ ತಳಕು ಹಾಕಿದರು ಮತ್ತು ತಮ್ಮನ್ನು 'ಅಸ್ಪೃಶ್ಯ ಎಂದು ಬಿಂಬಿಸುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದರು. ತಾವು ಆ ಸ್ಥಳದಲ್ಲಿ ಮಾಡಿದ ಭಾಷಣದಲ್ಲಿ ಯಾವುದೇ ಸಮುದಾಯ ಅಥವಾ ಧರ್ಮವನ್ನು ಉಲ್ಲೇಖಿಸಿಲ್ಲ ಎಂದು ಖರ್ಗೆ ಹೇಳಿದ್ದರು. ಆದರೆ ನನ್ನ ಭಾಷಣದ ನಂತರ, ಬಿಜೆಪಿಗೆ ಸಂಬಂಧಿಸಿದ ಜನರು ಆ ವೇದಿಕೆಯನ್ನು 'ಶುದ್ಧೀಕರಣ' ಮಾಡಿದರು. ನೀವು ಇದನ್ನು ಪತ್ರಿಕೆಗಳಲ್ಲಿ ಓದಿರಬಹುದು. ಪ್ರಜಾಪ್ರಭುತ್ವದಲ್ಲಿ ಈ ರೀತಿ ನಡೆಯಬೇಕೇ? ನೀವು ಸಂವಿಧಾನವನ್ನು ಹೇಗೆ ರಕ್ಷಿಸುತ್ತಿದ್ದೀರಿ? ಎಂದು ಖರ್ಗೆ ಪ್ರಶ್ನಿಸಿದ್ದರು.
ನಂತರ ಅವರು ಎಕ್ಸ್ (X) ನಲ್ಲಿ ಈ ಘಟನೆಯನ್ನು ರಾಜಕೀಯಗೊಳಿಸಲು ಬಯಸುವುದಿಲ್ಲ ಎಂದು ಹೇಳಿದ್ದರು. ಆದರೆ, ಈ ಆಚರಣೆ ನಡೆಸಿದವರ ವಿರುದ್ಧ ಅಸ್ಪೃಶ್ಯತಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದರು. (ANI)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ