
ನವದೆಹಲಿ (ಫೆ.21): ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲ, ಅವರು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದ ಕುರಿತಾಗಿ ರಾಹುಲ್ ಗಾಂಧಿ ವಿವಾದಾತ್ಮಕವಾಗಿ ಮಾತನಾಡಿದ್ದಾರೆ. ಭಾರತ್ ಜೋಡೋ ನ್ಯಾಯ ಯಾತ್ರೆ ಉತ್ತರ ಪ್ರದೇಶದಲ್ಲಿ ಸಾಗುತ್ತಿದ್ದು, ಮಂಗಳವಾರ ಈ ಯಾತ್ರೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ವಾರಣಾಸಿಯಲ್ಲಿ ಜನರು ಮದ್ಯಪಾನ ಮಾಡಿ ರಸ್ತೆಯಲ್ಲಿ ಮಲಗಿದ್ದನ್ನು ನಾನು ನೋಡಿದ್ದೇನೆ ಎಂದು ಹೇಳಿದ್ದಾರೆ. ಆ ಮೂಲಕ ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದ ಬಗ್ಗೆ ಹರಿಹಾಯ್ದಿದ್ದಾರೆ. ತಮ್ಮ ಹಿಂದಿನ ಲೋಕಸಭಾ ಕ್ಷೇತ್ರ ಅಮೇಠಿಯಲ್ಲಿ ನ್ಯಾಯ್ ಯಾತ್ರೆಯನ್ನು ಉದ್ದೇಶಿಸಿದ ಮಾತನಾಡಿದ ರಾಹುಲ್ ಗಾಂಧಿ, ರಾತ್ರಿಯ ವೇಳೆ ಮದ್ಯ ಸೇವಿಸುವ ಮೂಲಕ ಉತ್ತರ ಪ್ರದೇಶದ ಭವಿಷ್ಯ ನರ್ತಿಸುತ್ತಿರುವಂತೆ ನನಗೆ ಕಾಣುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನಾನು ವಾರಣಾಸಿಗೆ ಹೋಗಿದ್ದೆ. ಅಲ್ಲಿ ರಾತ್ರಿಯ ವೇಳೆ ಜೋರಾದ ಸಂಗೀತವನ್ನು ಹಾಕಿರುವುದನ್ನು ನೋಡಿದ್ದೆ. ಮದ್ಯ ಸೇವಿಸಿ ರಸ್ತೆಯಲ್ಲಿಯೇ ಬಿದ್ದಿರುವ ವ್ಯಕ್ತಿಗಳನ್ನು ನೋಡಿದೆ. ರಾತ್ರಿಯ ವೇಳೆ ಮದ್ಯ ಸೇವೆಸಿ ಉತ್ತರ ಪ್ರದೇಶದ ಭವಿಷ್ಯ ಡಾನ್ಸ್ ಮಾಡುತ್ತಿರುವುದನ್ನು ನೋಡಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಒಂದೆಡೆ ಇಲ್ಲಿ ಶ್ರೀರಾಮನ ಮಂದಿರವಿದೆ. ಇದನ್ನು ಪ್ರಧಾನಿ ಮೋದಿ ನೋಡಬಹುದು. ಅಂಬಾನಿ ಮತ್ತು ಅದಾನಿ ಕೂಡ ನೋಡಬಹುದು. ದೇಶದ ಎಲ್ಲಾ ಕೋಟ್ಯಧಿಪತಿಗಳು ಕೂಡ ನೋಡಬಹುದು. ಆದರೆ, ಅಲ್ಲಿ ಒಬ್ಬನೇ ಒಬ್ಬ ಹಿಂದುಳಿದ ವ್ಯಕ್ತಿ ಅಥವಾ ದಲಿತ ವ್ಯಕ್ತಿಯನ್ನು ನೋಡಲು ಸಾಧ್ಯವಿಲ್ಲ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವೆ ಹಾಗೂ ಉತ್ತರ ಪ್ರದೇಶದ ಅಮೇಠಿಯ ಸಂಸದೆ ಸ್ಮೃತಿ ಇರಾನಿ, ರಾಹುಲ್ ಗಾಂಧಿಯ ಆಕ್ಷೇಪಾರ್ಹ ಹೇಳಿಕೆಯನ್ನು ಟೀಕೆ ಮಾಡಿದ್ದು ಮಾತ್ರವಲ್ಲದೆ, ಅವರು ಬೆಳೆದು ಬಂದ ರೀತಿಯನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. "ರಾಹುಲ್ ಗಾಂಧಿಯವರ ಮಾತುಗಳು ಉತ್ತರ ಪ್ರದೇಶದ ಬಗ್ಗೆ ಅವರ ಮನಸ್ಸಿನಲ್ಲಿ ಎಷ್ಟು ವಿಷವಿದೆ ಎನ್ನುವುದನ್ನು ತೋರಿಸುತ್ತದೆ. ಅವರು ವಯನಾಡಿನಲ್ಲಿ ಉತ್ತರ ಪ್ರದೇಶದ ಮತದಾರರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ. ಅವರು ರಾಮ ಮಂದಿರದಲ್ಲಿ 'ಪ್ರಾಣ ಪ್ರತಿಷ್ಠಾ' ಸಮಾರಂಭದ ಆಹ್ವಾನವನ್ನು ತಿರಸ್ಕರಿಸಿದರು. ಇಂದು (ಮಂಗಳವಾರ) , ಅವರು ವಾರಣಾಸಿ ಮತ್ತು ಉತ್ತರ ಪ್ರದೇಶದ ಯುವ ಜನರ ಬಗ್ಗೆ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದಾರೆ' ಎಂದಿದ್ದಾರೆ. "ಕಾಂಗ್ರೆಸ್ ಭವಿಷ್ಯವು ಕತ್ತಲೆಯಲ್ಲಿದೆ, ಆದರೆ ಉತ್ತರ ಪ್ರದೇಶದ ಭವಿಷ್ಯವು ಅಭಿವೃದ್ಧಿಯತ್ತ ಸಾಗುತ್ತಿದೆ. ಸೋನಿಯಾ ಗಾಂಧಿ ಅವರಿಗೆ ನನ್ನ ಒಂದೇ ಒಂದು ಸಲಹೆ ಏನೆಂದರೆ, ಅವರು ತಮ್ಮ ಮಗನಿಗೆ ಉತ್ತಮ ಸಂಸ್ಕಾರವನ್ನು ನೀಡಲು ಸಾಧ್ಯವಾಗದಿದ್ದರೆ, ಕನಿಷ್ಠ ಯಾವುದೇ ವಿಚಾರದಲ್ಲೂ ಪ್ರತಿಕ್ರಿಯೆ ನೀಡಬೇಡಿ ಎನ್ನುವುದನ್ನಾದರೂ ತಿಳಿಸಿ ಎಂದಿದ್ದಾರೆ.
ಬೆಂಗಳೂರಲ್ಲಿ ಅಮಿತ್ ಶಾ ಟೀಕಿಸಿದ್ದ ಕೇಸಿನಲ್ಲಿ ರಾಹುಲ್‌ಗೆ ಬೇಲ್
ಉತ್ತರ ಪ್ರದೇಶದ ಸಚಿವ ದಿನೇಶ್ ಪ್ರತಾಪ್ ಸಿಂಗ್ ಕೂಡ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಟೀಕೆ ಮಾಡಿದ್ದು, ಅವರು ಈ ಕುರಿತಾಗಿ ದೇಶದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. “ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಕೊಂಡೊಯ್ಯಲು ಕೇಂದ್ರವು ಪ್ರಯತ್ನಿಸುತ್ತಿರುವಾಗ ಇಂತಹ ಹೇಳಿಕೆಗಳನ್ನು ಕೇಳಲು ಬೇಸರವಾಗಿದೆ, ನಮ್ಮ ಸಂಸ್ಕೃತಿ ಸಾರ್ವಜನಿಕ ಮದ್ಯಪಾನಕ್ಕೆ ಅವಕಾಶ ನೀಡುವುದಿಲ್ಲ, ನನ್ನ ಕುಟುಂಬದಲ್ಲಿ ಯಾರೂ ಸಾರ್ವಜನಿಕವಾಗಿ ಮದ್ಯ ಸೇವಿಸುವುದಿಲ್ಲ ಎಂದು ನಾನು ಹೇಳಬಲ್ಲೆ, ಆದರೆ ಇದನ್ನು ರಾಹುಲ್ ಹೇಳಬಹುದೇ? ಗಾಂಧಿ ಇದನ್ನು ಹೇಳುತ್ತಾರಾ? ಅಂತಹ ಹೇಳಿಕೆಗಳಿಗಾಗಿ ಅವರು ಕ್ಷಮೆಯಾಚಿಸಬೇಕು" ಎಂದಿದ್ದಾರೆ.
ರಾಹುಲ್ ಗಾಂಧಿಗಿಲ್ಲ ಮಾಹಿತಿ, ಸ್ವಾಮಿನಾಥನ್ ವರದಿಯ ಎಂಎಸ್‌ಪಿ ಬೇಡಿಕೆ ತಿರಸ್ಕರಿಸಿತ್ತು ಯುಪಿಎ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ