
ನವದೆಹಲಿ : ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನದ ಆರೋಪ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಆರೋಪಕ್ಕೆ ಪೂರಕವಾಗಿ ಶನಿವಾರ ಲಾಪತಾ ವೋಟ್ (ಕಾಣೆಯಾದ ಮತ) ಎಂಬ ಶೀರ್ಷಿಕೆಯಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.
ವೀಡಿಯೋದಲ್ಲಿ, ಪೊಲೀಸ್ ಠಾಣೆಗೆ ತೆರಳಿದ ಒಬ್ಬ ಬಡ ವ್ಯಕ್ತಿಯೊಬ್ಬ, ‘ನನ್ನ ಮತ ಕಳವಾಗಿದೆ. ಅಷ್ಟೇ ಅಲ್ಲ ಲಕ್ಷಾಂತರ ಮತಗಳು ಕಳವಾಗಿವೆ’ ಎಂದು ದೈನ್ಯವಾಗಿ ಹೇಳಿಕೊಳ್ಳುತ್ತಾನೆ. ಇದನ್ನು ಕೇಳಿ ಚಕಿತರಾಗುವ ಪೊಲೀಸರು, ‘ನಮ್ಮ ಮತವೂ ಕಳವಾಗಿದೆಯೇ?’ ಎಂದು ಕೇಳುತ್ತಾರೆ.
ಈ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ‘ಗುಟ್ಟಾಗಿ ಕಳ್ಳತನ ಇನ್ನು ಸಾಧ್ಯವಿಲ್ಲ. ಸಾರ್ವಜನಿಕರು ಎಚ್ಚರಗೊಂಡಿದ್ದಾರೆ’ ಎಂದಿದ್ದಾರೆ.
ಅವರ ಪೋಸ್ಟ್ ಅನ್ನು ಕಾಂಗ್ರೆಸ್ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದು, ‘ನಿಮ್ಮ ಮತದ ಕಳ್ಳತನ ನಿಮ್ಮ ಹಕ್ಕಿನ ಕಳ್ಳತನವೂ ಆಗಿದೆ. ಮತಗಳವಿನ ವಿರುದ್ಧ ಒಟ್ಟಾಗಿ ಧ್ವನಿ ಎತ್ತೋಣ ಮತ್ತು ನಮ್ಮ ಹಕ್ಕುಗಳನ್ನು ರಕ್ಷಿಸೋಣ’ ಎಂದು ಕರೆ ನೀಡಿದೆ.
ಇಂದಿನಿಂದ ರಾಹುಲ್ ‘ಮತ ಅಧಿಕಾರ ಯಾತ್ರೆ’
ಪಟನಾ : ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ವಿರುದ್ಧ ಕಾಂಗ್ರೆಸ್ ಆಯೋಜಿಸಿರುವ 15 ದಿನಗಳ ‘ಮತ ಅಧಿಕಾರ ಯಾತ್ರೆ’ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಹಾರದ ಸಾಸಾರಾಂನಲ್ಲಿ ಭಾನುವಾರ ಚಾಲನೆ ನೀಡಲಿದ್ದಾರೆ.ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ರಾಜ್ಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್, ‘ಭಾನುವಾರ ರಾಹುಲ್ ಗಾಂಧಿ ಸಾಸಾರಾಂನಲ್ಲಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಬಿಹಾರದ ವಿಪಕ್ಷ ನಾಯಕ ತೇಜಸ್ವಿ ಯಾದವ್ ಹಾಗೂ ಇಂಡಿಯಾ ಕೂಟದ ಹಲವು ನಾಯಕರು ಭಾಗವಹಿಸಲಿದ್ದಾರೆ. ಯಾತ್ರೆಯು ಸೆ.1ರಂದು ಮುಕ್ತಾಯವಾಗಲಿದೆ. ಯಾತ್ರೆಯ 15 ದಿನವೂ ರಾಹುಲ್ ಬಿಹಾರದಲ್ಲೇ ವಾಸ್ತವ್ಯ ಹೂಡುವ ನಿರೀಕ್ಷೆ ಇದೆ. ಯಾತ್ರೆಯು ರಾಜ್ಯದ 25 ಜಿಲ್ಲೆಗಳನ್ನು ಒಳಗೊಳ್ಳಲಿದೆ’ ಎಂದರು.
ಬಿಹಾರದಲ್ಲಿ ಮತದಾರ ಪಟ್ಟಿಯನ್ನು ಚುನಾವನಾ ಆಯೋಗ ಪರಿಷ್ಕರಿಸಿ 65 ಲಕ್ಷ ‘ಅನರ್ಹ’ ಮತದಾರರನ್ನು ಈವರೆಗೆ ತೆಗೆದು ಹಾಕಿದೆ. ಆದರೆ ಇದು ಬಿಜೆಪಿ ವಿರೋಧಿ ಮತದಾರರನ್ನು ತೆಗೆದುಹಾಕುವ ಕುತಂತ್ರ ಎಂಬುದು ವಿಪಕ್ಷಗಳ ಆರೋಪ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ