
ನವದೆಹಲಿ: ಭಾರತೀಯ ರಾಜಕೀಯ ಇತಿಹಾಸದ ಅತ್ಯಂತ ಕಪ್ಪು ಚುಕ್ಕೆಗಳಲ್ಲಿ ಒಂದಾದ ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಅವರ ಭೀಕರ ಹತ್ಯೆ ಘಟನೆಯ ಕುರಿತು, ಅವರ ಧರ್ಮಪತ್ನಿ ಹಾಗೂ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ತಮ್ಮ ನೂತನ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ಪುಸ್ತಕದಲ್ಲಿ ಅತ್ಯಂತ ಭಾವನಾತ್ಮಕ ಹಾಗೂ ರೋಚಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ರಾಜೀವ್ ಗಾಂಧಿಯವರ ಹತ್ಯೆಗೂ ಕೇವಲ ಎರಡು ತಿಂಗಳ ಮುಂಚೆಯೇ ಅವರ ಪುತ್ರ ರಾಹುಲ್ ಗಾಂಧಿ (Rahul Gandhi) ಅವರಿಗೆ ತಂದೆಯ ಭದ್ರತೆ ಕುರಿತು ತೀವ್ರ ಆತಂಕವಿತ್ತು ಎಂಬ ಸತ್ಯವನ್ನು ಸೋನಿಯಾ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ವಿ.ಪಿ. ಸಿಂಗ್ ನೇತೃತ್ವದ ಸರ್ಕಾರವು ರಾಜೀವ್ ಗಾಂಧಿ ಅವರಿಗೆ ನೀಡಲಾಗಿದ್ದ ಎಸ್‌ಪಿಜಿ (SPG) ಭದ್ರತೆಯನ್ನು ಹಿಂಪಡೆದಿತ್ತು. ಇದರ ಬೆನ್ನಲ್ಲೇ ತಂದೆಯ ಭದ್ರತೆ ವಿಚಾರವಾಗಿ ತೀವ್ರ ಆತಂಕಗೊಂಡಿದ್ದ ರಾಹುಲ್ ಗಾಂಧಿ (ಆಗ ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದರು), ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ಮಾತನಾಡುತ್ತಾ, "ಪಪ್ಪನ ಭದ್ರತೆ ಕುರಿತು ಮುತುವರ್ಜಿ ವಹಿಸದಿದ್ದರೇ ನಾನು ಅಂತ್ಯಕ್ರಿಯೆಗೆ ಬರಬೇಕಾಗುತ್ತೆ!" ಎಂದು ಕಳವಳ ವ್ಯಕ್ತಪಡಿಸಿದ್ದರು. ಆ ನಂತರ ಮೇ 21, 1991 ರಂದು ತಮಿಳುನಾಡಿನ ಶ್ರೀಪೆರಂಬದೂರ್‌ನಲ್ಲಿ ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ ರಾಜೀವ್ ಗಾಂಧಿ ಹತ್ಯೆಯಾದಾಗ, ರಾಹುಲ್ ಗಾಂಧಿ ಅಂದು ಆಡಿದ ಮಾತುಗಳು ಸೋನಿಯಾ ಗಾಂಧಿಯವರನ್ನು ತೀವ್ರವಾಗಿ ಕಾಡಿದ್ದವು.
ಮೇ 21, 1991ರಂದು ಅಂದಿನ ದಿನವೂ ಎಂದಿನಂತೆಯೇ ಇತ್ತು. ಮಗಳು ಪ್ರಿಯಾಂಕಾ ಗಾಂಧಿ ತಮ್ಮ ಸ್ನೇಹಿತರೊಬ್ಬರ ಹುಟ್ಟುಹಬ್ಬದ ಪಾರ್ಟಿಗೆ ತೆರಳಲು ಸಿದ್ಧರಾಗುತ್ತಿದ್ದರು, ರಾಹುಲ್ ಅಮೆರಿಕದಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿದ್ದರು. ರಾಜೀವ್ ಗಾಂಧಿ ತಮಿಳುನಾಡಿನ ಪ್ರಚಾರಕ್ಕೆ ತೆರಳಿದ್ದರು. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಪ್ರಿಯಾಂಕಾ ಓಡೋಡಿ ಬರುವ ಶಬ್ದ ಕೇಳಿಸಿತು. ಕೈಯಲ್ಲಿದ್ದ ಪುಸ್ತಕ ಮುಚ್ಚಿಟ್ಟ ಸೋನಿಯಾ ಅವರಿಗೆ ಪ್ರಿಯಾಂಕಾಳ ಕಣ್ಣಲ್ಲಿದ್ದ ನೀರು ಮತ್ತು ಮಂಕಾಗಿದ್ದ ಮುಖ ಅನಾಹುತದ ಸೂಚನೆ ನೀಡಿತು.
"ಬಾಂಬ್ ಸ್ಫೋಟಗೊಂಡಿದೆ, ಅನೇಕರು ಮೃತಪಟ್ಟಿದ್ದಾರೆ ಎಂದು ಫೋನ್ ಕರೆ ಬಂದಿದೆ. ಈಗಲೇ ಮದ್ರಾಸ್‌ಗೆ ಹೊರಡಲು ಸಿದ್ಧರಾಗಿ' ಎಂದು ಪ್ರಿಯಾಂಕಾ ಗಡಿಬಿಡಿಯಲ್ಲಿ ತಾಯಿಗೆ ತಿಳಿಸಿದಳು. 'ಮದ್ರಾಸ್‌ಗೆ ಏಕೆ? ರಾಜೀವ್ ಅಲ್ಲಿದ್ದರೇ? ಯಾವ ಬಾಂಬ್?' ಎಂದು ಸೋನಿಯಾಗೆ ಏನನ್ನೂ ಅರ್ಥೈಸಿಕೊಳ್ಳಲು ಸಾಧ್ಯವಾಗಲಿಲ್ಲ. ಪ್ರಿಯಾಂಕಾಳ ದನಿಯಲ್ಲಿನ ಭೀತಿಯೇ ದೊಡ್ಡ ದುರಂತ ನಡೆದುಹೋಗಿದೆ ಎಂಬುದನ್ನು ಸಾರಿ ಹೇಳುತ್ತಿತ್ತು.
ಸ್ತಬ್ಧರಾಗಿ ನಿಂತ ಸೋನಿಯಾ ಅವರನ್ನು ಪ್ರಿಯಾಂಕಾ ತಬ್ಬಿಕೊಂಡಾಗ, ಆಕೆಯ ವೇಗದ ಹೃದಯ ಬಡಿತ ಅನುಭವಕ್ಕೆ ಬಂತು. ತಕ್ಷಣವೇ ಪಕ್ಷದ ಹಿರಿಯರಿಗೆ ಕರೆ ಮಾಡಿ ವಿಚಾರಿಸಿದಾಗ ರಾಜೀವ್ ಗಾಂಧಿ ಹತ್ಯೆಯಾಗಿರುವ ಕಹಿ ಸತ್ಯ ಹೊರಬಂತು. ಧೃತಿಗೆಟ್ಟು ಮಗಳ ತೋಳಲ್ಲೇ ಕುಸಿದುಬಿದ್ದ ಸೋನಿಯಾಗೆ, 'ನಾನೂ ಏಕೆ ಅವರೊಂದಿಗೆ ಪ್ರಚಾರಕ್ಕೆ ಹೋಗಲಿಲ್ಲ?' ಎಂಬ ಅಪರಾಧ ಪ್ರಜ್ಞೆ ಮತ್ತು ನೋವು ಸದಾ ಕಾಡತೊಡಗಿತು.
ರಾಜೀವ್ ಗಾಂಧಿಯವರ ಹತ್ಯೆ ಘಟನೆಯಲ್ಲಿ ಧನು ಎಂಬ ಮಾನವ ಬಾಂಬ್ ಮಹಿಳೆ ತಮಿಳುನಾಡಿನ ಶ್ರೀಪೆರಂಬದೂರ್‌ನಲ್ಲಿ ಹಾರ ಹಾಕುವ ನೆಪದಲ್ಲಿ ತನ್ನ ಸೊಂಟಕ್ಕೆ ಕಟ್ಟಿಕೊಂಡಿದ್ದ ಬಾಂಬ್ ಸ್ಫೋಟಿಸಿಕೊಂಡು, ರಾಜೀವ್ ಸೇರಿದಂತೆ 14 ಜನರ ಪ್ರಾಣಪಕ್ಷಿ ಹಾರಿಹೋಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ