
ನವದೆಹಲಿ(ಜು.29): ತನ್ನ ಬತ್ತಳಿಕೆಗೆ ವಿಶ್ವದ ಅತ್ಯಾಧುನಿಕ ಯುದ್ಧ ವಿಮಾನವಾದ ರಫೇಲ್ ಹೊಂದುವ ಭಾರತೀಯ ವಾಯುಪಡೆಯ ಕನಸು ಕೊನೆಗೂ ನನಸಾಗಿದೆ. ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ನಿರ್ಮಿತ ಒಂದು ಸೀಟಿನ 3 ಮತ್ತು 2 ಸೀಟಿನ 3 ವಿಮಾನಗಳು ಬುಧವಾರ ಹರ್ಯಾಣದ ಅಂಬಾಲಾ ವಾಯುನೆಲೆಗೆ ಆಗಮಿಸಿದ್ದು, ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ಆರ್‌ಕೆಎಸ್ ಭದೌರಿಯ ಬಹು ನಿರೀಕ್ಷಿತ ರಫೇಲ್ ವಿಮಾನಗಳನ್ನು ಬರಮಾಡಿಕೊಂಡಿದ್ದಾರೆ.
"
ರಫೇಲ್ ಭಾರತವನ್ನು ತಲುಪಿದ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಐದು ರಫೇಲ್ ಯುದ್ಧ ವಿಮಾನಗಳು ಹರಿಯಾಣಕ್ಕೆ ತಲುಪಿವೆ. ಈ ಮೂಲಕ ಭಾರತೀಯ ಸೇನೆಯ ಇತಿಹಾಸದಲ್ಲೇ ಹೊಸ ಶಕೆ ಆರಂಭವಾಗಲಿದೆ ಎಂದು ರಾಜನಾಥ ಸಿಂಗ್ ಟ್ವೀಟ್ ಮಾಡಿದ್ದಾರೆ.
4 ವರ್ಷಗಳ ಹಿಂದೆ ಭಾರತ ಸರ್ಕಾರ 59000 ಕೋಟಿ ರು. ವೆಚ್ಚದಲ್ಲಿ 36 ರಫೇಲ್ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಪೈಕಿ ಮೊದಲ 5 ವಿಮಾನ ಇದೀಗ ಹಸ್ತಾಂತರವಾಗಿದೆ. ಉಳಿದ ಎಲ್ಲಾ ವಿಮಾನಗಳು 2021ರ ಅಂತ್ಯದೊಳಗೆ ಭಾರತಕ್ಕೆ ಬರಲಿವೆ.
"
ರಫೇಲ್ ವಿಶೇಷಗಳು
- ಜಗತ್ತಿನ ಅತ್ಯಾಧುನಿಕ ಯುದ್ಧವಿಮಾನಗಳ ಪೈಕಿ ಫ್ರಾನ್ಸ್‌ನ ರಫೇಲ್ ಕೂಡ ಒಂದಾಗಿದ್ದು, ಸಾಕಷ್ಟುವಿಧದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ.
- ಯುರೋಪ್‌ನಲ್ಲಿ ಏರ್-ಟು-ಏರ್ ಮತ್ತು ಸ್ಕಾಲ್ಪ್ ಕ್ರೂಸ್ ಮಿಸೈಲ್‌ಗಳನ್ನು ಈ ವಿಮಾನಗಳಿಗೆ ಅಳವಡಿಸಿ ಬಳಕೆ ಮಾಡಲಾಗುತ್ತದೆ.
- ಈಗ ಭಾರತಕ್ಕೆ ಬರುತ್ತಿರುವ 5 ರಫೇಲ್‌ಗಳ ಪೈಕಿ ಮೂರು ಸಿಂಗಲ್ ಸೀಟರ್ ಮತ್ತು ಎರಡು ಡಬಲ್ ಸೀಟರ್ ವಿಮಾನಗಳಾಗಿವೆ.
- ಭಾರತಕ್ಕಾಗಿ ಡಸಾಲ್ಟ್ ತಯಾರಿಸಿರುವ ರಫೇಲ್‌ನಲ್ಲಿ ಸಾಕಷ್ಟುಬದಲಾವಣೆ ಮಾಡಲಾಗಿದ್ದು, ಇಸ್ರೇಲಿ ಹೆಲ್ಮೆಟ್ ಮೌಂಟೆಡ್ ಡಿಸ್‌ಪ್ಲೇ, ರಾಡಾರ್ ವಾರ್ನಿಂಗ್, ಲೋ ಬ್ಯಾಂಡ್ ಜಾಮರ್, 10 ತಾಸುಗಳ ವಿಮಾನ ಹಾರಾಟ ಡೇಟಾ ಮುದ್ರಣ, ಇನ್‌ಫ್ರಾರೆಡ್ ಸರ್ಚಿಂಗ್ ಮತ್ತು ಟ್ರಾಕಿಂಗ್ ಸಿಸ್ಟಮ್‌ಗಳಿವೆ.
- ಹರ್ಯಾಣದ ಅಂಬಾಲಾದ ಜೊತೆಗೆ ಪಶ್ಚಿಮ ಬಂಗಾಳದ ಹಾಸಿಮಾರಾದಲ್ಲೂ ರಫೇಲ್‌ಗಳನ್ನು ನಿಯೋಜಿಸಲಾಗುತ್ತದೆ. ಈ ವಿಮಾನಗಳನ್ನು ನಿಲ್ಲಿಸುವ ಶೆಲ್ಟರ್, ಹ್ಯಾಂಗರ್ ಮತ್ತು ನಿರ್ವಹಣೆ ಸೌಕರ್ಯಗಳಿಗಾಗಿ ಭಾರತೀಯ ವಾಯುಪಡೆ ಸುಮಾರು 400 ಕೋಟಿ ರು. ಖರ್ಚು ಮಾಡಿದೆ.
- ಭಾರತ ಖರೀದಿಸಿರುವ 36 ರಫೇಲ್‌ಗಳ ಪೈಕಿ 30 ವಿಮಾನಗಳು ಫೈಟರ್ ಜೆಟ್‌ಗಳಾಗಿದ್ದು, 6 ತರಬೇತಿ ವಿಮಾನಗಳಾಗಿವೆ. ತರಬೇತಿ ವಿಮಾನಗಳು 2 ಸೀಟರ್ ಮತ್ತು ಯುದ್ಧ ವಿಮಾನಗಳು 1 ಸೀಟರ್ ಆಗಿರುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ