* ವಿಮಾನ ಪ್ರವೇಶ ಸುಗಮ, ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿರೋಧವೇ ಇಲ್ಲ
* ಎರಡೇ ದಿನದಲ್ಲಿ ಉಕ್ರೇನ್‌ನ ಸದ್ದನ್ನು ರಷ್ಯಾ ಅಡಗಿಸಿದ್ದೇಗೆ?
* ರಾಡಾರ್ ಗುರಿಯಾಗಿಸಿಕೊಂಡು ದಾಳಿ ನಡೆಸಿದ ರಷ್ಯಾ ಕ್ಷಿಪಣಿಗಳು
ಮಾಸ್ಕೋ(ಫೆ.26): ಪ್ರಬಲ ಪ್ರತಿರೋಧ ನಿರೀಕ್ಷಿಸಲಾಗಿದ್ದ ರಷ್ಯಾ- ಉಕ್ರೇನ್ ಯುದ್ಧದಲ್ಲಿ ಅದಕ್ಕೆ ಆಸ್ಪದವೇ ಇಲ್ಲದಂತೆ ಕೇವಲ ಎರಡು ದಿನಗಳಲ್ಲಿ ಮಹತ್ತರ ಬೆಳವಣಿಗೆಗಳು ಘಟಿಸಿವೆ. ಉಕ್ರೇನ್‌ನ ಬಹುಭಾಗಗಳ ಮೇಲೆ ದಾಳಿ ಮಾಡಿರುವ ರಷ್ಯಾ, ತನ್ನ ಯೋಧರನ್ನು ಆ ದೇಶದೊಳಕ್ಕೆ ನುಗ್ಗಿಸಿದೆ. ಇದೆಲ್ಲಾ ಸಾಧ್ಯವಾಗಿದ್ದು ಹೇಗೆ?
ಉಕ್ರೇನ್ ಅನ್ನು ಬೆದರಿಸಲು ಗಡಿಯಲ್ಲಿ ಹಲವು ದಿನಗಳಿಂದ 1 ಲಕ್ಷಕ್ಕೂ ಅಧಿಕ ಯೋಧರನ್ನು ರಷ್ಯಾ ಜಮಾವಣೆ ಮಾಡಿತ್ತು. ಆ ದೇಶದ ಮೂರೂ ಭಾಗಗಳಲ್ಲಿ ತನ್ನ ಯೋಧರು, ಶಸ್ತ್ರಾಸ್ತ್ರ, ಯುದ್ಧ ವಿಮಾನಗಳನ್ನು ನಿಯೋಜನೆ ಮಾಡಿತ್ತು. ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಗುರುವಾರ ಬೆಳಗ್ಗೆ ರಣಕಹಳೆ ಮೊಳಗಿಸುತ್ತಿದ್ದಂತೆ ಯುದ್ಧ ವಿಮಾನಗಳು, ಯುದ್ಧ ನೌಕೆಗಳಿಂದ ಹಾರಿದ ಕ್ಷಿಪಣಿಗಳು ಉಕ್ರೇನ್‌ನಲ್ಲಿನ ರಾಡಾರ್, ವಿಮಾನ ಕಣ್ಗಾವಲು ವ್ಯವಸ್ಥೆಗಳನ್ನು ನಾಶಪಡಿಸಿದವು. ಗುರುವಾರ ಆರಂಭದಲ್ಲಿ ನಡೆದ ದಾಳಿಗಳೆಲ್ಲಾ ರಾಡಾರ್ ಅನ್ನೇ ಗುರಿಯಾಗಿಸಿಕೊಂಡಿದ್ದವು. ಬಳಿಕ ಯುದ್ಧ ವಿಮಾನಗಳು, ಕಾಪ್ಟರ್‌ಗಳ ಸಂಚಾರ ಬಹಳ ಸುಲಭವಾಯಿತು. ಯೋಧರ ನಿಯೋಜನೆಯೂ ಸಾಧ್ಯವಾಯಿತು.
ಇದೇ ವೇಳೆ, ಗಡಿಯ ಚೆಕ್‌ಪೋಸ್ಟ್‌ಗಳಲ್ಲಿ ರಷ್ಯಾ ಯೋಧರಿದ್ದ ವಾಹನಗಳು ಬರುತ್ತಿದ್ದಂತೆ ಉಕ್ರೇನ್‌ನಿಂದ ಯಾವುದೇ ಪ್ರತಿರೋಧ ಬರಲಿಲ್ಲ. ಯೋಧರು ಚೆಕ್‌ಪೋಸ್ಟ್ ತೆರೆದು ಸುಮ್ಮನಾದರು. ಹೀಗಾಗಿ ರಷ್ಯಾ ಯೋಧರು ಬಹಳ ಸುಲಭವಾಗಿ ಉಕ್ರೇನ್ ಹೊಕ್ಕರು. ಮತ್ತೊಂದು ಕಡೆ, ಉಕ್ರೇನ್‌ನಿಂದ ಪ್ರತಿದಾಳಿ ನಡೆದಾಗ ರಷ್ಯಾದ ಕಾಪ್ಟರ್, ವಿಮಾನಗಳಿಗೆ ಹಾನಿ ಆಯಿತಾದರೂ, ಪ್ರತಿ ದಾಳಿ ನಡೆಸಿ ಅದನ್ನೂ ಅಡಗಿಸಲಾಯಿತು.
ವಿಶ್ವದ ಪ್ರಮುಖ ದೇಶಗಳು ತನ್ನ ಬೆನ್ನಿಗೆ ಇವೆ ಎಂದು ನಂಬಿ ರಷ್ಯಾ ವಿರುದ್ಧ ಗುಟುರು ಹಾಕುತ್ತಿದ್ದ ಉಕ್ರೇನ್ ಈಗ ರಣಭೂಮಿಯಲ್ಲಿ ಏಕಾಂಗಿಯಾಗಿ ತನ್ನನ್ನು ತಾನು ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಆದರೆ ಬಲಾಢ್ಯ ರಷ್ಯಾ ಎದುರು ಉಕ್ರೇನ್ ಎಂಬುದು ಏನೇನೂ ಅಲ್ಲ ಎಂದು ಯುದ್ಧ ತಜ್ಞರು ಹೇಳುತ್ತಾರೆ.
ಉಕ್ರೇನ್ ರಾಜಧಾನಿ ಕೀವ್ ಬಹುತೇಕ ಕೈವಶ
ಉಕ್ರೇನ್ ಮೇಲೆ ದಾಳಿ ಆರಂಭಿಸಿದ ಎರಡೇ ದಿನಕ್ಕೆ ದೇಶದ ರಾಜಧಾನಿ ಕೀವ್ ಅನ್ನು ಬಹುತೇಕ ವಶಪಡಿಸಿಕೊಳ್ಳುವಲ್ಲಿ ರಷ್ಯಾ ಯಶಸ್ವಿಯಾಗಿದೆ. ರಷ್ಯಾದ ಯುದ್ಧ ಟ್ಯಾಂಕ್‌ಗಳು ಹಾಗೂ ಯೋಧರು ಕೀವ್ ನಗರವನ್ನು ಎಲ್ಲಾ ದಿಕ್ಕುಗಳಿಂದ ಸುತ್ತುವರೆದಿದ್ದು, ಯಾವುದೇ ಕ್ಷಣದಲ್ಲಿ ಒಳನುಗ್ಗಿ ಸರ್ಕಾರದ ಪ್ರಮುಖ ಕೇಂದ್ರಗಳನ್ನು ಸಂಪೂರ್ಣ ವಶಕ್ಕೆ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ. ಸದ್ಯ ಕೀವ್ ಮೇಲೆ ಆಗಸ, ಭೂಮಿ ಹಾಗೂ ಸಮುದ್ರ ಮೂರೂ ಕಡೆಗಳಿಂದ ರಷ್ಯಾ ದಾಳಿ ನಡೆಸುತ್ತಿದೆ.
ರಷ್ಯಾದ ಯೋಧರು ಹಾಗೂ ಮಿಲಿಟರಿ ವಾಹನಗಳು ಒಳಗೆ ನುಗ್ಗಬಾರದೆಂದು ಉಕ್ರೇನ್ ಸೇನೆ ಕೀವ್‌ನ ಸುತ್ತಮುತ್ತ ಇರುವ ಪ್ರಮುಖ ಸೇತುವೆಗಳನ್ನು ಹಾಗೂ ಸಂಪರ್ಕಗಳನ್ನು ಧ್ವಂಸಗೊಳಿಸಿದೆ. ಆದರೆ, ಒಮ್ಮೆಲೇ 10,000 ಪ್ಯಾರಾಟ್ರೂಪರ್‌ಗಳನ್ನು ಆಗಸದಿಂದ ಕೀವ್ ನಗರದೊಳಗೆ ಇಳಿಸಿ ಉಕ್ರೇನ್ ಸರ್ಕಾರವನ್ನು ವಶಕ್ಕೆ ತೆಗೆದುಕೊಳ್ಳಲು ರಷ್ಯಾ ಯೋಜನೆ ರೂಪಿಸಿದೆ ಎಂದು ಅಮೆರಿಕದ ಗುಪ್ತಚರ ದಳ ತಿಳಿಸಿದೆ.
ಇಡೀ ಉಕ್ರೇನ್ ಮೇಲೆ ದಾಳಿ ಇಲ್ಲ:
ಇಡೀ ಉಕ್ರೇನ್ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಸಾವುನೋವಿಗೆ ಕಾರಣವಾಗುವ ಉದ್ದೇಶ ರಷ್ಯಾಕ್ಕಿಲ್ಲ. ಅಷ್ಟೊಂದು ಶ್ರಮವನ್ನು ರಷ್ಯಾ ತೆಗೆದುಕೊಳ್ಳುವುದಿಲ್ಲ. ಬದಲಿಗೆ ನೇರವಾಗಿ ಉಕ್ರೇನ್‌ನ ಅಧ್ಯಕ್ಷ, ಸಚಿವರು ಹಾಗೂ ಸಂಸದರಿಂದ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿಸಿ, ಉಕ್ರೇನ್‌ನಲ್ಲಿ ತಾನು ಹೇಳಿದಂತೆ ಕೇಳುವ ಸರ್ಕಾರ ಸ್ಥಾಪನೆ ಮಾಡಿ ಅಧಿಕಾರ ಚಲಾಯಿಸುವ ಹವಣಿಕೆಯಲ್ಲಿ ರಷ್ಯಾ ಇದೆ ಎಂದು ಹೇಳಲಾಗಿದೆ.
ವಿಮಾನ ನಿಲ್ದಾಣ ವಶ:
ಈ ನಡುವೆ ಶುಕ್ರವಾರ ಸಂಜೆ ವೇಳೆಗೆ ಕೀವ್‌ನ ಹೊರವಲಯದಲ್ಲಿರುವ ಆಯಕಟ್ಟಿನ ಹೋಸ್ಟೋಮೆಲ್ ವಿಮಾನ ನಿಲ್ದಾಣವನ್ನು ರಷ್ಯಾ ತನ್ನ ವಶಕ್ಕೆ ತೆಗೆದುಕೊಂಡಿದೆ. ಹೀಗಾಗಿ ಯಾವುದೇ ಭಾಗದಿಂದ ತನ್ನ ಸೇನೆಯನ್ನು ಇಲ್ಲಿಗೆ ಏರ್‌ಲಿಫ್ಟ್ ಮಾಡಿ ಕರೆತರುವುದು ರಷ್ಯಾಕ್ಕೆ ಈಗ ಭಾರೀ ಸುಲಭವಾಗಿದೆ.
ಕ್ರಿಮಿಯಾಕ್ಕೆ ರಷ್ಯಾ ಕಾರಿಡಾರ್ ನಿರ್ಮಾಣ:
ಕೀವ್ ನಗರದ ಹೊರ ಸಂಪರ್ಕಗಳನ್ನು ಸಂಪೂರ್ಣ ಕಡಿತಗೊಳಿಸಿ, ಕ್ರಿಮಿಯಾ ಹಾಗೂ ಟ್ರಾನ್ಸ್‌ಡ್ನೀಸ್ಟ್ರಿಯಾಕ್ಕೆ ಲ್ಯಾಂಡ್ ಕಾರಿಡಾರ್ ನಿರ್ಮಿಸಲು ರಷ್ಯಾ ಸಂಚು ರೂಪಿಸಿದೆ. ದಕ್ಷಿಣದ ತುದಿಯಲ್ಲಿ ಸಮುದ್ರ ದಂಡೆಯ ಗುಂಟ ಕ್ರಿಮಿಯಾ ಮತ್ತು ಟ್ರಾನ್ಸ್‌ಡ್ನೀಸ್ಟ್ರಿಯಾಕ್ಕೆ ರಸ್ತೆ ನಿರ್ಮಿಸುವ ಸಾಧ್ಯತೆಯಿದೆ ಎಂದು ಉಕ್ರೇನ್ ಆರೋಪಿಸಿದೆ.
ರಷ್ಯಾದ ಮುಂದಿನ ಪ್ಲಾನ್ ಏನು?
ಮೊದಲಿಗೆ ಉಕ್ರೇನ್‌ನ ರಾಜಧಾನಿ ಕೀವ್ ನಗರವನ್ನು ಸಂಪೂರ್ಣ ಸುತ್ತುವರಿಯುವುದು. ಎಲ್ಲಾ ದಿಕ್ಕುಗಳಿಂದ ಕೀವ್ ಮೇಲೆ ದಾಳಿ ನಡೆಸುವುದು. ನಂತರ ವಿಮಾನಗಳ ಮೂಲಕ 10 ಸಾವಿರ ಪ್ಯಾರಾಟ್ರೂಪರ್ ಯೋಧರನ್ನು ನಗರದೊಳಗೆ ಇಳಿಸುವುದು. ಅವರು ಕೀವ್‌ನಲ್ಲಿ ಅಡಗಿರುವ ಉಕ್ರೇನ್ ಅಧ್ಯಕ್ಷ ವೋಲೋದಿಮಿರ್ ಜೆಲೆನ್‌ಸ್ಕಿ, ಸಚಿವರು ಹಾಗೂ ಸಂಸದರನ್ನು ವಶಕ್ಕೆ ತೆಗೆದುಕೊಳ್ಳಬೇಕು. ಜೊತೆಗೆ, ಸರ್ಕಾರದ ಎಲ್ಲಾ ಪ್ರಮುಖ ಕಚೇರಿಗಳನ್ನು ವಶಪಡಿಸಿಕೊಳ್ಳಬೇಕು. ಅಲ್ಲಿ ಜೆಲೆನ್‌ಸ್ಕಿ ಹಾಗೂ ಸಚಿವರಿಂದ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿಸಲಾಗುತ್ತದೆ. ನಂತರ ತಾನು ಹೇಳಿದಂತೆ ಕೇಳುವ ಸರ್ಕಾರವನ್ನು ಉಕ್ರೇನ್‌ನಲ್ಲಿ ರಷ್ಯಾ ಸ್ಥಾಪಿಸುತ್ತದೆ. ಅಲ್ಲಿಗೆ ಯುದ್ಧ ಕೊನೆಗೊಳ್ಳುತ್ತದೆ.