
ಚಂಡೀಗಢ: ಜಾಮೀನು ಮೇಲೆ ಬಿಡುಗಡೆಯಾಗುವ ಕುಖ್ಯಾತ ಮಾದಕವಸ್ತು ಕಳ್ಳ ಸಾಗಣೆದಾರರ ಮೇಲೆ ನಿಗಾ ಇಡಲು ಜಿಪಿಎಸ್ ಆಧಾರಿತ ಕಾಲ್ಕಡಗ ಬಳಕೆಗೆ ಪಂಜಾಬ್ ಪೊಲೀಸ್ ಇಲಾಖೆ ಚಿಂತನೆ ನಡೆಸುತ್ತಿದೆ.
ಕಾನೂನು ವಿರೋಧಿ ಚಟುವಟಿಕೆ ತಡೆ ಕಾಯ್ದೆಯಡಿ ಬಂಧಿತ ಆರೋಪಿಗಳ ಮೇಲೆ ನಿಗಾ ಇಡಲು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈಗಾಗಲೇ ಈ ರೀತಿಯ ಜಿಪಿಎಸ್ ಆಧರಿತ ಕಾಲ್ಕಡಗ ಬಳಸುತ್ತಿದ್ದಾರೆ. ಇದೇ ಮಾದರಿಯ ಪ್ರಯೋಗ ಪಂಜಾಬ್‌ನಲ್ಲಿ ಡ್ರಗ್ಸ್ ಕಳ್ಳಸಾಗಣೆದಾರರ ಮೇಲೆ ಮಾಡುವ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ರೀತಿಯ ಜಿಪಿಎಸ್ ಆಧರಿತ ಕಾಲ್ಕಡಗ ಬಳಕೆ ಪ್ರಸ್ತಾಪ ನಮ್ಮ ಮುಂದಿದೆ. ಈ ಕುರಿತು ಕಾನೂನು ರೀತಿಯಲ್ಲಿ ಪರಿಶೀಲಿಸುತ್ತಿದ್ದೇವೆ. ಸಂಬಂಧಿಸಿದ ನ್ಯಾಯಾಲಯಗಳ ಅನುಮತಿ ಪಡೆದು ಇಂಥ ಕಾಲ್ಕಡಗಗಳನ್ನು ನಟೋರಿಯಸ್ ಕಳ್ಳಸಾಗಣೆದಾರರ ಮೇಲೆ ನಿಗಾ ಇಡಲು ಬಳಸಲಾಗುವುದು. ಈ ಮೂಲಕ ಅವರ ಓಡಾಟದ ಮೇಲೆ ಕಣ್ಣಿಡಲಾಗುವುದೆಂದು ಪೊಲೀಸ್ ಮುಖ್ಯಸ್ಥ ತಿಳಿಸಿದ್ದಾರೆ.
ಖಾಸಗಿತನದ ಹಕ್ಕನ್ನು ಗಮನದಲ್ಲಿಟ್ಟುಕೊಂಡು ಆಯ್ದ ಆರೋಪಿಗಳ ಮೇಲಷ್ಟೇ ಈ ರೀತಿಯ ಜಿಪಿಎಸ್ ಟ್ರ್ಯಾಕರ್ ಹಾಕಲು ಪೊಲೀಸ್ ಇಲಾಖೆ ಚಿಂತನೆ ನಡೆಸುತ್ತಿದೆ. ಸಣ್ಣ ಪ್ರಮಾಣದ ಮಾದಕ ವಸ್ತು ಬಳಕೆದಾರರನ್ನು ಇದರಿಂದ ಹೊರಗಿಡಲಾಗುವುದು. ಅವರನ್ನು ಮಾದಕವಸ್ತು ವ್ಯಸನ ಮುಕ್ತ ಕೇಂದ್ರಗಳಿಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.
ಪಾಕ್ ಗಡಿಯ 6 ರಾಜ್ಯಗಳಲ್ಲಿ ಅಣಕು ಕವಾಯತು
ಜೈಪುರ/ಚಂಡೀಗಢ: ಭಾರತ ಮತ್ತು ಪಾಕಿಸ್ತಾನದ ನಡುವೆ ಸಮರ ವಿರಾಮ ಘೋಷಣೆಯಾಗಿದ್ದರೂ ಉದ್ವಿಗ್ನತೆ ಮುಂದುವರೆದಿರುವ ಹೊತ್ತಿನಲ್ಲಿ, ವೈರಿರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯಗಳಲ್ಲಿ ಶನಿವಾರ 2ನೇ ಸುತ್ತಿನ ಅಣಕು ಕವಾಯತು ನಡೆಸಲಾಗಿದೆ.
ರಾಜಸ್ಥಾನ, ಪಂಜಾಬ್, ಹರ್ಯಾಣ, ಕಾಶ್ಮೀರ, ಗುಜರಾತ್, ಚಂಡಿಗಢ ರಾಜ್ಯಗಳಲ್ಲಿ, ಜನರನ್ನು ಯುದ್ಧಸನ್ನದ್ಧರಾಗಿಸುವ ಸಲುವಾಗಿ ‘ಆಪರೇಷನ್ ಶೀಲ್ಡ್’(ಕವಚ) ಹೆಸರಿನಲ್ಲಿ ಸೈರನ್ ಮೊಳಗಿದಾಗ, ವಾಯುದಾಳಿ, ಡ್ರೋನ್ ದಾಳಿ ನಡೆದಾಗ ಹೇಗೆ ಪ್ರತಿಕ್ರಿಯಿಸಬೇಕು ಮತ್ತು ರಕ್ಷಿಸಿಕೊಳ್ಳಬೇಕು ಎಂಬ ಬಗ್ಗೆ ಜನರಿಗೆ ತರಬೇತಿ ನೀಡಲಾಯಿತು. ಶಾಲೆಗಳಲ್ಲೂ ಈ ಡ್ರಿಲ್ ನಡೆಸಿ ವಿದ್ಯಾರ್ಥಿಗಳಿಗೆ ಕಲಿಸಿಕೊಡಲಾಯಿತು.
ಪಾಕ್ ಉದ್ಧಟತನಕ್ಕೆ ಭಾರತ ಈಗಾಗಲೇ ತಕ್ಕ ಉತ್ತರ ನೀಡಿದೆಯಾದರೂ, ’ಆಪರೇಷನ್ ಸಿಂದೂರ ಇನ್ನೂ ನಿಂತಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆಮತ್ತೆ ಹೇಳುತ್ತಿರುವ ಹೊತ್ತಿನಲ್ಲೇ ಈ ಕವಾಯತು ನಡೆದಿರುವುದು ಮಹತ್ವ ಪಡೆದುಕೊಂಡಿದೆ.
ಕಳೆದ ಬಾರಿ ದೇಶದ ಹಲವು ರಾಜ್ಯಗಳಲ್ಲಿ ಮೇ 7ರಂದು ಮಾಕ್ ಡ್ರಿಲ್ ನಡೆಸುವಂತೆ ನಿರ್ದೇಶಿಸಲಾಗಿತ್ತು. ಅದರ ಹಿಂದಿನ ತಡರಾತ್ರಿಯೇ ‘ಆಪರೇಷನ್ ಸಿಂದೂರ’ ನಡೆಸಿ ಪಾಕ್‌ಗೆ ಶಾಕ್ ಕೊಡಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ