
ನವದೆಹಲಿ (ಅ.01) ಪಿಪಿಸಿಸಿ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಸಮಸ್ಯೆಗಳು ತೀವ್ರ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ನಾಯಕರ ಬಹಿರಂಗ ಹೇಳಿಕೆ, ಅಸಮಾಧಾನಗಳು ಹೆಚ್ಚಾಗುತ್ತಿದೆ. ಇದರಿಂದ ಜನರಿಗೆ ಕಾಂಗ್ರೆಸ್ ಮೇಲಿನ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತ ಅರಿತ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಇದೀಗ ಪಿಪಿಸಿಸಿ ಕಾಂಗ್ರೆಸ್ ಅಧ್ಯಕ್ಷರನ್ನೇ ಬದಲಿಸಲು ಹೈಕಮಾಂಡ್ ಮುಂದಾಗಿದೆ. ಹೌದು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಭಿನ್ನಮತ ತೀವ್ರಗೊಂಡ ಹಿನ್ನಲೆಯಲ್ಲಿ ರಾಜ್ಯಾಧ್ಯಕ್ಷರಿಗೆ ರಾಜೀನಾಮೆ ನೀಡಲು ಸೂಚಿಸಲಾಗಿದೆ. ಈ ಸೂಚನೆ ಬೆನ್ನಲ್ಲೇ ಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಂಸದರು ಹೆಸರು ಕೇಳಿಬರುತ್ತಿದೆ.
ಪಂಜಾಬ್ ಕಾಂಗ್ರೆಸ್‌ನಲ್ಲಿ ತಳಮಳ ಹೆಚ್ಚಾಗಿದೆ. ಭಿನ್ನಮತಗಳು ಸ್ಫೋಟಗೊಳ್ಳುತ್ತಿದೆ. 2027ರ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಪಕ್ಷವನ್ನು ಗಟ್ಟಿಗೊಳಿಸಿ ಅಧಿಕಾರಕ್ಕೆ ತರಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಹೀಗಾಗಿ ಈಗಲೇ ಪಕ್ಷದೊಳಗೆ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. ಕಾಂಗ್ರೆಸ್ ಪಂಜಾಬ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾಗೆ ರಾಜೀನಾಮೆ ನೀಡಲು ಸೂಚಿಸಲಾಗಿದೆ ಎಂದು ವರದಿಯಾಗಿದೆ. ಅಮರಿಂದರ್ ಸಿಂಗ್ ರಾಜಾಗೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಸೂಚಿಸಲಾಗಿದೆ ಎಂದು ವರದಿಯಾಗುತ್ತಿದ್ದಂತೆ ಇತ್ತ ಸ್ವತಃ ಅಮರಿಂದರ್ ಸಿಂಗ್ ರಾಜಾ ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಅಮರಿಂದರ್ ಸಿಂಗ್ ರಾಜಾ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಹೊಸ ನಾಯಕನಿಗೆ ಜವಾಬ್ದಾರಿ ನೀಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಮಾಜಿ ಸಚಿವ, ಹಾಲಿ ಸಂಸದ ವಿಜಯ್ ಇಂದರ್ ಸಿಂಗ್ಲಾ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಸಿಖ್ ಬಹುಮತದ ರಾಜ್ಯದಲ್ಲಿ ಹಿಂದೂ ನಾಯಕನಿಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಲು ಹೈಕಮಾಂಡ್ ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಜುಲೈ 1 ರಂದು ವಿಜಯ್ ಇಂದರ್ ಸಿಂಗ್ಲಾರನ್ನು ಪಕ್ಷದ ಚುನಾವಣಾ ನಿರ್ವಹಣಾ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ರೇಸ್‌ನಲ್ಲಿ ವಿಜಯ್ ಇಂದರ್ ಸಿಂಗ್ಲಾ ಹೆಸರಿನ ಜೊತೆಗೆ ಮಾಜಿ ಒಲಿಂಪಿಯನ್, ಜಲಂಧರ್ ಕಂಟೋನ್ಮೆಂಟ್ ಶಾಸಕ ಪ್ರಗತ್ ಸಿಂಗ್, ಮಾಜಿ ಶಾಸಕ ರಾಣಾ ಕೆಪಿ ಸಿಂಗ್, ರಾಜಾ ಸಾನ್ಸಿಯ ಶಾಸಕ ಸುಕ್ಬಿಂದರ್ ಸಿಂಗ್ ಸರ್ಕಾರಿಯಾ, ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ, ಗುರುದಾಸ್‌ಪುರ ಸಂಸದ ಸುಖ್ಜಿಂದರ್ ಸಿಂಗ್ ರಾಂಧವ ಹೆಸರುಗಳು ಕೇಳಿಬರುತ್ತಿದೆ.
ಶೀಘ್ರದಲ್ಲೇ ಪಂಜಾಬ್ ರಾಜ್ಯಕ್ಕೆ ಹೊಸ ಕಾಂಗ್ರೆಸ್ ಅಧ್ಯಕ್ಷರ ಘೋಷಣೆಯಾಗಲಿದೆ. ಈ ಕುರಿತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಜನರಲ್ ಸೆಕ್ರಟರಿ ಕೆಸಿ ವೇಣುಗೋಪಾಲ್, ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಸಚಿನ್ ಪೈಲೆಟ್ ಸೇರಿದಂತೆ ಪ್ರಮುಖರು ಸಭೆ ನಡೆಸಿದ್ದಾರೆ. ಇದೀಗ ಪಂಜಾಬ್‌ನಲ್ಲಿ ಬಣ ರಾಜಕೀಯಗಳನ್ನು ಶಮನಗೊಳಿಸುವುದು ಹೈಕಮಾಂಡ್ ತಲೆನೋವಾಗಿ ಪರಿಣಿಮಿಸಿದೆ. ಹಾಲಿ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಹಾಗೂ ಚರಣಜಿತ್ ಸಿಂಗ್ ಚನ್ನಿ ಬಣಗಳ ನಡುವೆ ಗುದ್ದಾಟ ತೀವ್ರಗೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ