
ನವದೆಹಲಿ[ಜ.14]: ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿ ಜೈಲು ಸೇರಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೆಹಲಿಯ ತೀಸ್ ಹಜಾರಿ ಕೋರ್ಟ್ ದೆಹಲಿ ಪೊಲೀಸರಿಗೆ ಛಾಟಿ ಬೀಸಿದೆ. ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರನ್ನು ಬಂಧಿಸಿದ ದೆಹಲಿ ಪೊಲೀಸರಿಗೆ ಪ್ರತಿಭಟನೆ ಸಾಂವಿಧಾನಿಕ ಹಕ್ಕು ಎಂದು ತಿಳಿಸಿದೆ.
'ತಿಹಾರ್‌ನಲ್ಲಿರುವ 'ರಾವಣ' ಆಜಾದ್‌ಗೆ ಚಿಕಿತ್ಸೆ ನೀಡದಿದ್ದರೆ, ಜೀವಕ್ಕೆ ಅಪಾಯ'
ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹಜಾರಿ ಕೋರ್ಟ್ ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಕಾಮಿನಿ ಲಾ, ದೆಹಲಿ ಪೊಲೀಸರ ಪರ ವಾದಿಸುತ್ತಿದ್ದ ಪಂಕಜ್ ಭಾಟಿಯಾರಿಗೆ 'ಧರಣಿ ನಡೆಸಿದರೆ ತಪ್ಪೇನು? ಪ್ರತಿಭಟನೆ ನಡೆಸುವುದರಲ್ಲಿ ತಪ್ಪೇನಿದೆ?' ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ 'ಪ್ರತಿಭಟನೆ ನಡೆಸುವುದು ವ್ಯಕ್ತಿಯೊಬ್ಬನ ಸಾಂವಿಧಾನಿಕ ಹಕ್ಕು' ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತೀಯ ನಾಗರಿಕರಿಗೆ ಪ್ರತಿಭಟಿಸುವ ಹಕ್ಕು ಇದೆ ಎಂದು ದೆಹಲಿ ಪೊಲೀಸರಿಗೆ ಒತ್ತಿ ತಿಳಿಸಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಕಾಮಿನಿ ಲಾ 'ಜಮಾ ಮಸೀದಿ ಪಾಕಿಸ್ತಾನದಲ್ಲಿರುವಂತೆ ನೀವು ವರ್ತಿಸುತ್ತಿದ್ದೀರಿ. ಅದು ಪಾಕಿಸ್ತಾನದಲ್ಲಿದ್ದರೂ ಅಲ್ಲಿಗೆ ತೆರಳಿ ಪ್ರತಿಭಟಿಸಬಹುದು. ಯಾಕೆಂದರೆ ಪಾಕಿಸ್ತಾನವೂ ಭಾರತದ ಭಾಗವಾಗಿತ್ತು' ಎಂದಿದ್ದಾರೆ.
ಹೀಗಿರುವಾಗ ಪ್ರತಿಭಟನೆಗೆ ಪೂರ್ವಾನುಮತಿ ಪಡೆಯಬೇಕಿತ್ತು ಎಂದು ವಾದಿಸಿದ ದೆಹಲಿ ಪರ ವಕೀಲರಿಗೆ ಸ್ಪಷ್ಟನೆ ನೀಡಿದ ಕಾಮಿನಿ ಲಾ, 'ಖುದ್ದು ಸುಪ್ರೀಂ ಕೋರ್ಟ್ ಸೆಕ್ಷನ್ 144 ಹೇರಿಕೆ 'ನಿಂದನೆ' ಎಂದು ಪದೇ ಪದೇ ಹೇಳಿದೆ' ಎಂದಿದ್ದಾರೆ. ಸದ್ಯ ಈ ಜಾಮೀನು ಅರ್ಜಿ ವಿಚಾರಣೆಯನ್ನು ಜನವರಿ 15ಕ್ಕೆ ಮುಂದೂಡಿಸದ್ದಾರೆ.
ಪೌರತ್ವ ಕಾಯ್ದೆ ವಿರೋಧ: ಭೀಮ್ ಆರ್ಮಿ 'ರಾವಣ' ಆಜಾದ್ ಅರೆಸ್ಟ್!
'ರಾವಣ' ಎಂದೇ ಕರೆಯಲಾಗುವ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ 2019ರ ಡಿಸೆಂಬರ್ 21ರಿಂದ ಜೈಲಿನಲ್ಲಿದ್ದಾರೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ಕಾಯ್ದೆ ವಿರೋಧಿಸಿ ಜಮಾ ಮಸೀದಿಯಿಂದ ಜಂತರ್ ಮಂತರ್ ವರೆಗೆ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಅವರು ಭಾಗವಹಿಸಿದ್ದರು. ಹೀಗಿರುವಾಗ ಅವರನ್ನು ದರ್ಯಾಗಂಜ್ ಪ್ರದೇಶದಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ