
ನವದೆಹಲಿ: 'ನಾಯಕನಾದವನು ಕೇವಲ ಪ್ರಶಂಸೆ ಪಡೆಯಲಷ್ಟೇ ಸೀಮಿತವಾಗಬಾರದು, ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕು. ಭಾರತ-ಪಾಕ್‌ಸಮರ ನಿಲ್ಲಿಸಿದ್ದು ತಾನು ಎಂದು ಟ್ರಂಪ್ ಪದೇ ಪದೇ ನೀಡುತ್ತಿರುವ ಹೇಳಿಕೆಯು ಪ್ರಧಾನಿ ಮೋದಿ ಅವರ ಬೇಜವಾಬ್ದಾರಿಗೆ ಸಾಕ್ಷಿ' ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ ಕಿಡಿಕಾರಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಅವರು, 'ಶತ್ರುವು ಸೋಲುವ ಸ್ಥಿತಿಯಲ್ಲಿದ್ದಾಗ ಏಕೆ ಆಪರೇಷನ್ ಸಿಂದೂರ ಅರ್ಧಕ್ಕೇ ನಿಲ್ಲಿಸಲಾಯಿತು? ಈ ರೀತಿ ಗೆಲ್ಲುವ ಯುದ್ಧವನ್ನು ಅರ್ಧಕ್ಕೇ ನಿಲ್ಲಿಸಿದ್ದು ಇದೇ ಮೊದಲು ಅಲ್ಲವೆ' ಎಂದು ಖಾರವಾಗಿ ಪ್ರಶ್ನಿಸಿದರು.
ಅಮಿತ್ ಶಾಗೆ ತರಾಟೆ: 'ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ 2008 ರ ದೆಹಲಿಯ ಬಾಟ್ಲಾ ಹೌಸ್ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರಿಗಾಗಿ ಕಣ್ಣೀರಿಟ್ಟಿದ್ದರು' ಎಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪ್ರಿಯಾಂಕಾ ತಿರುಗೇಟು ನೀಡಿದ್ದು, 'ಅಮಿತ್ ಶಾ ನನ್ನ ತಾಯಿಯ ಕಣ್ಣೀರನ್ನು ಅಣಕಿಸಿದರು, ನನ್ನ ತಾಯಿಯ ಕಣ್ಣೀರು ಬಂದಿದ್ದು ಅವರ ಪತಿ ಕೇವಲ 44 ವರ್ಷದವರಿದ್ದಾಗ ಭಯೋತ್ಪಾದಕರಿಂದ ಹುತಾತ್ಮರಾಗಿದ್ದಕ್ಕೆ, ಅದಕ್ಕಾಗಿಯೇ ಪಹಲ್ಗಾಮ್‌ನಲ್ಲಿ ಕೊಲ್ಲಲ್ಪಟ್ಟ 26 ಜನರ ನೋವು ನನಗೆ ಅರ್ಥವಾಗುತ್ತದೆ ಎಂದು ಪ್ರಿಯಾಂಕಾ ಹೇಳಿದರು.
ಖರ್ಗೆ ಬಗ್ಗೆ ಆಕ್ಷೇಪಾರ್ಹ ನುಡಿ: ನಡ್ಡಾ ಕ್ಷಮೆಯಾಚನೆ
ನವದೆಹಲಿ: ಆಪರೇಷನ್ ಸಿಂದೂರ ವಿಚಾರವಾಗಿ ರಾಜ್ಯಸಭೆಯಲ್ಲಿ ನಡೆದ ಚರ್ಚೆ ವೇಳೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಭಾ ನಾಯಕ ಜೆ.ಪಿ.ನಡ್ಡಾ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪ್ರಧಾನಿ ಮೋದಿ ಬಗ್ಗೆ ಖರ್ಗೆ 'ಮಾನಸಿಕ ಸ್ಥಿಮಿತ' ಕಳೆದುಕೊಂಡು ಮಾತನಾಡಿದ್ದಾರೆ ಎಂದು ಆರೋಪಿಸಿದ ನಡ್ಡಾ ನಂತರ ತಮ್ಮ ಹೇಳಿಕೆಗೆ ಕ್ಷಮೆಯನ್ನೂ ಕೋರಿದರು.
ಖರ್ಗೆ ಮಾತು ಮುಗಿಸಿದ ಬಳಿಕ ಎದ್ದು ನಿಂತ ನಡ್ಡಾ, 'ನೀವು ಪಕ್ಷದೊಂದಿಗೆ ಎಷ್ಟು ಬೆರೆತು ಬಿಟ್ಟಿದ್ದೀರೆಂದರೆ ನಿಮಗೆ ದೇಶದ ವಿಚಾರ ಗೌಣವಾಗಿ ಬಿಡುತ್ತದೆ. ಮಾತನಾಡುವಾಗ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತೀರಿ' ಎಂದರು. ಇದಕ್ಕೆ ಖರ್ಗೆ, 'ನಾನು ಗೌರವಿಸುವ ಎರಡು ಮೂರು ಸಚಿವರಲ್ಲಿ ನಡ್ಡಾ ಕೂಡ ಒಬ್ಬರು. ಆದರೆ, ಅವರು ನನ್ನನ್ನು ಮಾನಸಿಕ ಅಸ್ವಸ್ಥ ಎಂದು ಕರೆದಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಅವರು ಇದಕ್ಕಾಗಿ ಕ್ಷಮೆ ಕೋರಬೇಕು' ಎಂದು ಆಗ್ರಹಿಸಿದರು.
ಆಗ ನಡ್ಡಾ, 'ಈಗಾಗಲೇ ನಾನು ಬಳಸಿದ ಪದ ವಾಪಸ್ ಪಡೆದಿದ್ದೇನೆ, ಈ ಕುರಿತು ಖರ್ಗೆ ಭಾವನೆಗೆ ನೋವಾಗಿದ್ದರೆ ಕ್ಷಮೆಯನ್ನೂ ಕೋರುತ್ತೇನೆ' ಎಂದರು.
ಪಾಕ್ ದಾಳಿಯಲ್ಲಿ ಅನಾಥ ಆದ 22 ಮಕ್ಕಳ ಶಿಕ್ಷಣಕ್ಕೆ ರಾಹುಲ್ ಆರ್ಥಿಕ ನೆರವು
ರಜೌರಿ/ಜಮ್ಮು: ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಆಪರೇಷನ್ ಸಿಂದೂರ ವೇಳೆ ಪಾಕಿಸ್ತಾನದ ಗುಂಡಿನ ದಾಳಿಯಲ್ಲಿ ಪೋಷಕರನ್ನು ಕಳೆದುಕೊಂಡ 22 ಮಕ್ಕಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಆರ್ಥಿಕ ನೆರವು ನೀಡಿದ್ದಾರೆ. ರಾಹುಲ್ ಪರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತಾರಿಕ್ ಹಮೀದ್, ಪೂಂಚ್‌ನ ಶಿಕ್ಷಣ ವಂಚಿತ ಸಂತ್ರಸ್ತರ ಮಕ್ಕಳಿಗೆ ರಾಹುಲ್ ನೀಡಿದ ಆರ್ಥಿಕ ನೆರವನ್ನು ಹಸ್ತಾಂತರಿಸಿದರು. 'ಪೂಂಚ್‌ಗೆ ರಾಹುಲ್ ಭೇಟಿ ನೀಡಿ ಪೋಷಕರನ್ನು ಕಳೆದುಕೊಂಡ ಶಾಲೆಗೆ ಹೋಗುವ ಮಕ್ಕಳ ಪಟ್ಟಿ ತಯಾರಿಸಲು ಹೇಳಿದ್ದರು. ಅದರಂತೆ 22 ಮಕ್ಕಳ ಪಟ್ಟಿ ನೀಡಿದ್ದೆವು. ಇಂತಹ ಇನ್ನಷ್ಟು ಮಕ್ಕಳು ಸೇರ್ಪಡೆಯಾಗಬಹುದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ