ಬಂಗಲೆ ತೆರವಿಗೆ ಮೋದಿ ಬಳಿ ಸಮಯ ಕೋರಿಲ್ಲ| ಪ್ರಿಯಾಂಕಾ ಸ್ಪಷ್ಟನೆ| ಲೋಧಿ ಎಸ್ಟೇಟ್‌ನಲ್ಲಿರುವ ಸರ್ಕಾರಿ ಬಂಗಲೆ
ನವದೆಹಲಿ(ಜು.15): ಇಲ್ಲಿನ ಲೋಧಿ ಎಸ್ಟೇಟ್‌ನಲ್ಲಿರುವ ಸರ್ಕಾರಿ ಬಂಗಲೆಯನ್ನು ಆ.1ರ ಒಳಗಾಗಿ ತೆರವು ಮಾಡುತ್ತೇನೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಗುಡುಗಿದ್ದಾರೆ.
ಇನ್ನೆರಡು ತಿಂಗಳು ಇದೇ ಬಂಗಲೆಯಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಬೇಕೆಂಬ ಪ್ರಿಯಾಂಕಾ ಗಾಂಧಿ ಕೋರಿಕೆಯನ್ನು ಪ್ರಧಾನಿ ಮೋದಿ ಮನ್ನಿಸಿದ್ದಾರೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದೊಂದು ಸುಳ್ಳುಸುದ್ದಿ. ನಾನು ಸರ್ಕಾರದ ಬಳಿ ಅಂತಹ ಯಾವುದೇ ಮನವಿ ಮಾಡಿಲ್ಲ. ಬಂಗಲೆ ತೆರವುಗೊಳಿಸುವಂತೆ ಜು.1ರಂದು ನೋಟಿಸ್ ನೀಡಿಲಾಗಿತ್ತು. ಅದರಂತೆ ಆಗಸ್ಟ್ 1ರ ಒಳಗಾಗಿ ಸರ್ಕಾರಿ ಬಂಗಲೆಯನ್ನು ತೆರವು ಮಾಡುವೆ’ ಎಂದಿದ್ದಾರೆ.
ಈ ನಡುವೆ ತೆರವಿಗೆ ಸೂಚಿಸಿರುವ ಬಂಗಲೆಯನ್ನು ಬೇರೊಬ್ಬ ಕಾಂಗ್ರೆಸ್ ಸಂಸದರಿಗೆ ನೀಡುವಂತೆ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಕೋರಿದ್ದರು. ಈ ಮೂಲಕ ಪರೋಕ್ಷವಾಗಿ ಪ್ರಿಯಾಂಕಾ ಅದೇ ಬಂಗಲೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದರು ಎಂದು ಕೇಂದ್ರ ಸಚಿವ ಹರದೀಪ್ ಪುರಿ ಹೇಳಿದ್ದಾರೆ. ಆದರೆ ಈ ಆರೋಪವನ್ನೂ ಪ್ರಿಯಾಂಕಾ ತಳ್ಳಿಹಾಕಿದ್ದಾರೆ.