
ನವದೆಹಲಿ (ಸೆ.6): ಸನಾತನ ಧರ್ಮದ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೆ, ಹಿಂದುಗಳ ನರಮೇಧ ಮಾಡಿ ಎನ್ನುವ ಅರ್ಥದಲ್ಲಿ ಮಾತನಾಡಿದ್ದ ತಮಿಳುನಾಡು ಸಚಿವ, ನಟ ಹಾಗೂ ಸಿಎಂ ಎಂಕೆ ಸ್ಟ್ಯಾಲಿನ್ ಅವರ ಪುತ್ರ ಉದಯನಿಧಿ ಸ್ಟ್ಯಾಲಿನ್ ಅವರ ಹೇಳಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಡೆಯಿಂದ ಮೊದಲ ಪ್ರತಿಕ್ರಿಯೆ ಬಂದಿದೆ ಎಂದು ವರದಿಯಾಗಿದೆ. ಸನಾತನ ಧರ್ಮಕ್ಕೆ ಅವಮಾನವಾಗಿರುವ ಕುರಿತಂತೆ ತನ್ನ ಎಲ್ಲಾ ಕ್ಯಾಬಿನೆಟ್ ಸಚಿವರಿಗೆ ಸೂಚನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಈ ಅವಹೇಳನಕ್ಕೆ ಸರಿಯಾದ ರೀತಿಯಲ್ಲಿ ಉತ್ತರ ನೀಡಿ ಎಂದು ಸೂಚನೆ ನೀಡಿದ್ದಾರೆ. ಈ ವಿಚಾರದ ಬಗ್ಗೆ ನಮ್ಮ ಪ್ರತಿಕ್ರಿಯೆ ಖಂಡಿಯಾ ಇರಬೇಕು. ಯಾವುದೇ ಕಾರಣಕ್ಕೂ ಇದನ್ನು ಸಣ್ಣ ವಿಚಾರವೆಂದು ಸುಮ್ಮನೆ ಬಿಡಬಾರದು. ಸರಿಯಾದ ಫ್ಯಾಕ್ಟ್‌ಗಳನ್ನು ಇರಿಸಿಕೊಂಡು. ಸಂವಿಧಾನದ ಅಡಿಯಲ್ಲಿ ಏನು ಹೇಳಿದ್ದಾರೆ ಎನ್ನುವುದನ್ನು ತಿಳಿದುಕೊಂಡು ಇದಕ್ಕೆ ಉತ್ತರ ನೀಡಿ ಎಂದು ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಸಂಪುಟ ಸಭೆಯಲ್ಲಿ ಸನಾತನ ಧರ್ಮಕ್ಕೆ ಮಾಡಿರುವ 'ಅವಮಾನ' ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಚರ್ಚೆ ನಡೆಸಿದ್ದು, ವಿವಾದಾತ್ಮಕ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವಂತೆ ಸಚಿವರಿಗೆ ಸೂಚನೆ ನೀಡಿದ್ದಾರೆ. ಸನಾತನ ಧರ್ಮದ ವಿರುದ್ಧ ನೀಡಿರುವ ಹೇಳಿಕೆಗಳನ್ನು ಖಂಡಿಸಲೇಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. "ಸನಾತನ ಧರ್ಮದ ಮೇಲೆ ದಾಳಿ ಮಾಡುವವರನ್ನು ಬಲವಾಗಿ ಎದುರಿಸಬೇಕು" ಎಂದು ಪ್ರಧಾನಮಂತ್ರಿಯವರು ಸಭೆಯಲ್ಲಿ ಹೇಳಿದರು. ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ನಂತರ ಮತ್ತು ಅದನ್ನು "ಡೆಂಗೆ ಮತ್ತು ಮಲೇರಿಯಾ" ಗೆ ಹೋಲಿಸಿ ಅದರ ನಿರ್ಮೂಲನೆಗೆ ಕರೆ ನೀಡಿದ ನಂತರ ಮೋದಿ ಈ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ.
"ಇತಿಹಾಸಕ್ಕೆ ಹೋಗಬೇಡಿ, ಆದರೆ ಸಂವಿಧಾನದ ಪ್ರಕಾರ ಸತ್ಯಗಳಿಗೆ ಅಂಟಿಕೊಳ್ಳಿ. ಸಮಸ್ಯೆಯ ಸಮಕಾಲೀನ ಪರಿಸ್ಥಿತಿಯ ಬಗ್ಗೆಯೂ ಮಾತನಾಡಿ" ಎಂದು ಪ್ರಧಾನಿ ಮೋದಿ ತಮ್ಮ ಸಚಿವರಿಗೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ. ಇಂಡಿಯಾ ಮತ್ತು ಭಾರತ ವಿವಾದದ ಬಗ್ಗೆ ಪ್ರತಿಕ್ರಿಯಿಸದಂತೆ ಸಚಿವರಿಗೆ ಸಲಹೆ ನೀಡಿದ ಪ್ರಧಾನಿ, ಅಧಿಕೃತ ವ್ಯಕ್ತಿ ಮಾತ್ರ ಈ ವಿಷಯದ ಬಗ್ಗೆ ಮಾತನಾಡಬೇಕು ಎಂದು ತಿಳಿಸಿದ್ದಾರೆ.
ಉದಯನಿಧಿ ಸ್ಟ್ಯಾಲಿನ್ ಕಾಮೆಂಟ್‌ಗಳ ವಿಚಾರ ರಾಜಕೀಯ ಜಿದ್ದಾಜಿದ್ದಿಯಾಗಿ ಮಾರ್ಪಟ್ಟಿದೆ. ಸ್ಟ್ಯಾಲಿನ್ ನೀಡಿರುವ ಈ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಯಾಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂದು ಬಿಜೆಪಿ ಪ್ರಶ್ನೆ ಮಾಡಿದೆ. ಇದೇ ವೇಳೆ ಮಾತನಾಡಿದ ಉದಯನಿಧಿ ಸ್ಟ್ಯಾಲಿನ್ ತಾನು ಹೇಳಿದ್ದರಲ್ಲಿ ಯಾವ ರೀತಿಯ ತಪ್ಪೂ ಇಲ್ಲ ಎಂದಿದ್ದಲ್ಲದೆ, ಇದನ್ನು ಬೇಕಾದರೆ ಮತ್ತೊಮ್ಮೆ, ಮಗದೊಮ್ಮೆ ಹೇಳುತ್ತೇನೆ ಎಂದಿದ್ದರು.
ರಾಹುಲ್ ಗಾಂಧಿ ಉತ್ತರ ಭಾರತದ ಪಪ್ಪು ಆದ್ರೆ ಉದಯನಿಧಿ ದಕ್ಷಿಣ ಭಾರತದ ಪಪ್ಪು: ಅಣ್ಣಾಮಲೈ ವ್ಯಂಗ್ಯ
ಇದೇ ವಿಚಾರವಾಗಿ ಇಂಡಿ ಒಕ್ಕೂಟವನ್ನೂ ಟೀಕೆ ಮಾಡಿರುವ ಬಿಜೆಪಿ, ಹಿಂದೂ ಧರ್ಮವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದೇ ಈ ವಿರೋಧ ಪಕ್ಷದವರ ಪ್ರಮುಖ ಅಜೆಂಡಾ ಎಂದು ಆಕ್ರೋಶ ವ್ತಕ್ತಪಡಿಸಿದೆ.ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಹೇಳಿಕೆಯು ಸನಾತನ ಧರ್ಮವನ್ನು ಅನುಸರಿಸುವ 80 ಪ್ರತಿಶತದಷ್ಟು ಜನಸಂಖ್ಯೆಯ "ಜನಾಂಗೀಯ ಹತ್ಯೆ"ಯ ಕರೆಯಾಗಿದೆ ಎಂದು ಹೇಳಿದರು.
ಉದಯನಿಧಿ ಸ್ಟ್ಯಾಲಿನ್ ಟೀಕೆಯನ್ನು ಹಿಟ್ಲರ್ ಮಾತಿಗೆ ಹೋಲಿಸಿದ ಬಿಜೆಪಿ!
ವಿರೋಧದಿಂದ ವಿಚಲಿತರಾಗದ ಉದಯನಿಧಿ ಅವರು ನಂಬಿಕೆಯಲ್ಲಿನ ಕೆಲವು ಆಚರಣೆಗಳನ್ನು "ನಿರ್ಮೂಲನೆ ಮಾಡುವ" ಬಗ್ಗೆ ಮಾತನಾಡಿದ್ದಾರೆ ಮತ್ತು ಅವರ ವಿರುದ್ಧ ಧ್ವನಿ ಎತ್ತುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ