ಟ್ರೆಂಡ್‌ ಸೆಟ್ಟರ್‌ ಮೋದಿ : ರಾಜಕೀಯ, ಆಡಳಿತದಲ್ಲಿ ಹೊಸ ಸಂಪ್ರದಾಯ ಸೃಷ್ಟಿಸಿದ ನೇತಾರ

By Kannadaprabha NewsFirst Published Sep 17, 2021, 2:42 PM IST
Highlights
  • ಪ್ರಧಾನಿ ನರೇಂದ್ರ ಮೋದಿ ಏನೇ ಮಾಡಿದರೂ ಟ್ರೆಂಡ್‌ ಸೃಷ್ಟಿಯಾಗುತ್ತದೆ
  • ಹೆಚ್ಚು ಜನರು ಸಕ್ರಿಯವಾಗಿರುವ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅವರೇ ಸದ್ಯದ ಮಟ್ಟಿಗೆ ಜಾಗತಿಕ ನಾಯಕ
  • ದೇಶ- ವಿದೇಶಗಳಲ್ಲಿಯೂ ಮೋದಿ ಫೇಮಸ್‌. ಭಾರತದಲ್ಲಿ ಅವರ ರಾರ‍ಯಲಿಗಳಿಗೆ ಕಿಕ್ಕಿರಿದು ಜನರು ಸೇರಿದಂತೆ ವಿದೇಶಿ ರಾರ‍ಯಲಿಗಳಿಗೂ ಸಹಸ್ರಾರು ಜನ ನೆರೆಯುತ್ತಾರೆ

ಪ್ರಧಾನಿ ನರೇಂದ್ರ ಮೋದಿ ಏನೇ ಮಾಡಿದರೂ ಟ್ರೆಂಡ್‌ ಸೃಷ್ಟಿಯಾಗುತ್ತದೆ. ಉದಾಹರಣೆಗೆ ಹೆಚ್ಚು ಜನರು ಸಕ್ರಿಯವಾಗಿರುವ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅವರೇ ಸದ್ಯದ ಮಟ್ಟಿಗೆ ಜಾಗತಿಕ ನಾಯಕ. ದೇಶ- ವಿದೇಶಗಳಲ್ಲಿಯೂ ಮೋದಿ ಫೇಮಸ್‌. ಭಾರತದಲ್ಲಿ ಅವರ ರಾರ‍ಯಲಿಗಳಿಗೆ ಕಿಕ್ಕಿರಿದು ಜನರು ಸೇರಿದಂತೆ ವಿದೇಶಿ ರಾರ‍ಯಲಿಗಳಿಗೂ ಸಹಸ್ರಾರು ಜನ ನೆರೆಯುತ್ತಾರೆ. ಅವರ ಮನ್‌ ಕೀ ಬಾತ್‌ ಕಾರ್ಯಕ್ರಮ ಜನರ ಧ್ವನಿಯಾಗಿ ರೂಪುಗೊಂಡಿದೆ. ಈ ಹಿಂದಿನ ಪ್ರಧಾನಿಗಳಿಗೆ ಹೋಲಿಸಿದರೆ ಮೋದಿ ಅತ್ಯಂತ ವಿಭಿನ್ನ.

ಸೋಷಿಯಲ್‌ ಮೀಡಿಯಾ ಐಕಾನ್‌

ಪ್ರಧಾನಿ ನರೇಂದ್ರ ಮೋದಿ ಕೇವಲ ಮಾಸ್‌ ಲೀಡರ್‌ ಅಷ್ಟೇ ಅಲ್ಲ ಸೋಷಿಯಲ್‌ ಮೀಡಿಯಾ ಐಕಾನ್‌ ಕೂಡಾ ಹೌದು. ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಮೋದಿ ಫೇಸ್‌ಬುಕ್‌ನಲ್ಲಿ ಜಾಗತಿಕವಾಗಿ ಅತ್ಯಂತ ಜನಪ್ರಿಯ ನಾಯಕರ ಪೈಕಿ ಒಬ್ಬರಾಗಿದ್ದಾರೆ. ಫೇಸ್‌ಬುಕ್‌ನಲ್ಲಿ ಅವರು 4.6 ಕೋಟಿಗೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. ಜೊತೆಗೆ ತಮ್ಮ ಫೇಸ್‌ಬುಕ್‌ ಖಾತೆಯನ್ನು ಹಲವು ಸಂದರ್ಭಗಳಲ್ಲಿ ತಾವೇ ಸ್ವತಃ ನಿರ್ವಹಣೆ ಮಾಡುತ್ತಾರೆ.

ಟ್ವೀಟರ್‌ ಅನ್ನು ಕೂಡ ಅತ್ಯಂತ ಕ್ರಿಯಾಶೀಲವಾಗಿ ಬಳಕೆ ಮಾಡುತ್ತಿದ್ದಾರೆ. ಟ್ವೀಟರ್‌ನಲ್ಲಿ ಮೋದಿ 7 ಕೋಟಿ ಹಿಂಬಾಲಕರನ್ನು ಹೊಂದಿದ್ದು, ಅತಿ ಹೆಚ್ಚು ಫಾಲೋವ​ರ್‍ಸ್ಗಳನ್ನು ಹೊಂದಿರುವ ಸಕ್ರಿಯ ರಾಜಕಾರಣಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಮಾಮಾ ಟ್ವೀಟರ್‌ನಲ್ಲಿ 12.9 ಕೋಟಿ ಹಿಂಬಾಲಕರನ್ನು ಹೊಂದಿದ್ದರೂ ಅವರೀಗ ಸಕ್ರಿಯ ರಾಜಕಾರಣಿ ಅಲ್ಲ.

ಪ್ರಧಾನಿ ಮೋದಿ ಜನ್ಮ ದಿನ : ಬಿಜೆಪಿಯಿಂದ 20 ದಿನ ಉತ್ಸವ!

ಅದೇ ರೀತಿ ಇನ್‌ಸ್ಟಾಗ್ರಾಮ್‌ ಹಾಗೂ ಯೂಟ್ಯೂಬ್‌ನಲ್ಲಿಯೂ ಮೋದಿ ಸೈ ಎನಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಮೋದಿ ಅವರಿಗೆ 5.9 ಕೋಟಿ ಹಿಂಬಾಲಕರಿದ್ದಾರೆ. ಯೂಟ್ಯೂಬ್‌ನಲ್ಲಿ 91 ಲಕ್ಷ ಚಂದಾದಾರರನ್ನು ಸಂಪಾದಿಸಿದ್ದಾರೆ. ತಾವು ಪಾಲ್ಗೊಂಡ ಕಾರ್ಯಕ್ರಮಗಳ ಫೋಟೋ ಹಾಗೂ ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್‌, ಯೂಟ್ಯೂಬ್‌ನಲ್ಲಿಯೂ ಅಪ್‌ಲೋಡ್‌ ಮಾಡುತ್ತಾರೆ.

ಯೋಗಕ್ಕೆ ಜಾಗತಿಕ ಮನ್ನಣೆ
 
ಮೋದಿ ಅವರಿಗೆ ಯೋಗಾಭ್ಯಾಸದಲ್ಲಿ ಅಪಾರ ಆಸಕ್ತಿ. ಪ್ರತಿದಿನ ಮುಂಜಾನೆ ಯೋಗಾಸನಕ್ಕಾಗಿ ಕನಿಷ್ಠ ಅರ್ಧಗಂಟೆಯನ್ನಾದರೂ ಮೀಸಲಿಡುತ್ತಾರೆ. ಮುಂಜಾನೆ 5 ಗಂಟೆಗೇ ಎದ್ದೇಳುವ ಅವರು ಯೋಗ, ಪ್ರಾಣಾಯಾಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಯೋಗ ಮತ್ತು ಪ್ರಾಣಾಯಾಮವೇ ತಮ್ಮ ಆರೋಗ್ಯದ ಗುಟ್ಟು ಎಂದು ಹಲವಾರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಜೂ.21 ಅನ್ನು ಅಂತಾರಾಷ್ಟ್ರೀಯ ಯೋಗದಿನವನ್ನಾಗಿ ಆಚರಿಸುತ್ತಿರುವುದಕ್ಕೆ ಮೋದಿ ಅವರೇ ಪ್ರಮುಖ ಕಾರಣ. ವಿಶ್ವ ಸಂಸ್ಥೆಯಲ್ಲಿ ಯೋಗದ ಮಹತ್ವವನ್ನು ವಿವರಿಸಿ ಜೂ.21 ಅನ್ನು ಅಂತಾರಾಷ್ಟ್ರೀಯ ಯೋಗದಿನವನ್ನಾಗಿ ಆಚರಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು. ಇದರ ಫಲವಾಗಿ 2015ರಿಂದ ಪ್ರತಿ ವರ್ಷ ಜೂ.21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಅಷ್ಟೇ ಅಲ್ಲ, ಯೋಗ ದಿನದಂದು ಸಾರ್ವಜನಿಕರೊಂದಿಗೆ ಯೋಗಾಭ್ಯಾಸ ಮಾಡುವ ಮೂಲಕವೂ ಇತರರಿಗೆ ಮಾದರಿ ಆಗಿದ್ದಾರೆ. ಜೊತೆಗೆ ಜನರಿಗೆ ಯೋಗದ ಬಗ್ಗೆ ಸ್ಛೂರ್ತಿ ತುಂಬಲು ಯೋಗಾಸನದ ಭಂಗಿಯಲ್ಲಿ ಮೋದಿ ಅವರನ್ನು ತೋರಿಸುವ ಅನಿಮೇಟೆಡ್‌ ಸರಣಿಗಳು ಕೂಡ ಬಿಡುಗಡೆ ಆಗಿದ್ದು, ಜನರನ್ನು ಆಕರ್ಷಿಸಿವೆ.

ಪ್ರತಿ ತಿಂಗಳೂ ಮನ್‌ ಕೀ ಬಾತ್‌
 
ಮೊಬೈಲ್‌, ಟೀವಿ ಭರಾಟೆ ನಡುವೆಯೂ ರೇಡಿಯೋಗಳ ಮೂಲಕವೂ ಜನರನ್ನು ತಲುಪಬಹುದು ಎಂಬುದನ್ನು ತೋರಿಸಿಕೊಟ್ಟನಾಯಕ ಮೋದಿ. ಮನ್‌ ಕೀ ಬಾತ್‌ ಕಾರ್ಯಕ್ರಮದ ಮೂಲಕ ಮೋದಿ ತಮ್ಮ ಮನದಾಳದ ಮಾತುಗಳನ್ನು ಜನತೆಯ ಮುಂದೆ ಹೇಳಿಕೊಳ್ಳುತ್ತಾರೆ. ಯಾವುದೇ ಕಟ್ಟುಪಾಡುಗಳು, ಬಿಗುಮಾನ ಇಲ್ಲದೆ ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ಈ ಕಾರ್ಯಕ್ರಮದಲ್ಲಿ ಮೋದಿ ಮೆಲುಕು ಹಾಕುತ್ತಾರೆ. ಧನಾತ್ಮಕ ಸಂಗತಿಗಳನ್ನು ಹೇಳುವ ಮೂಲಕ, ನಮ್ಮ ಜೊತೆಯಲ್ಲೇ ಇದ್ದರೂ ಎಲೆ ಮರೆಯ ಕಾಯಿಯಂತಿರುವ ಸಾಧಕರನ್ನು ಪರಿಚಯಿಸಿ ಜನತೆಗೆ ಸ್ಛೂರ್ತಿ ತುಂಬುವ ಕೆಲಸವನ್ನು ಮನ್‌ ಕೀ ಬಾತ್‌ ಕಾರ್ಯಕ್ರಮದ ಮೂಲಕ ಮಾಡುತ್ತಾ ಬಂದಿದ್ದಾರೆ. ಪ್ರತಿ ತಿಂಗಳ ಕೊನೆಯ ಭಾನುವಾರದಂದು ಈ ಕಾರ್ಯಕ್ರಮ ದೂರದರ್ಶನ ಮತ್ತು ಆಲ್‌ ಇಂಡಿಯಾ ರೇಡಿಯೋ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. 2014ರ ಅ.3ರಂದು ಆರಂಭವಾದ ಈ ಕಾರ್ಯಕ್ರಮ ಇದುವರೆಗೆ 80 ಕಂತುಗಳನ್ನು ಪೂರೈಸಿದೆ. ಮೋದಿ ತಮ್ಮ 2ನೇ ಅವಧಿಯಲ್ಲಿಯೂ ಮನ್‌ ಕೀ ಬಾತ್‌ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಜನರು ಮತ್ತೊಮ್ಮೆ ರೇಡಿಯೋ ಮುಂದೆ ಕೂರುವಂತೆ ಮಾಡಿದ್ದು ಮನ್‌ ಕೀ ಬಾತ್‌. ಇಂದಿಗೂ ಈ ಕಾರ್ಯಕ್ರಮ ತನ್ನ ಜನಪ್ರಿಯತೆಯನ್ನು ಹಾಗೆ ಉಳಿಸಿಕೊಂಡಿದೆ.

ಒಲಿಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌  ಕ್ರೀಡಾಪಟುಗಳಿಗೆ ಪ್ರೋತ್ಸಾಹ

ಟೋಕಿಯೋ ಒಲಿಂಪಿಕ್ಸ್‌ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಈ ಕ್ರೀಡಾಪಟುಗಳಿಗೆ ಸ್ಛೂರ್ತಿದಾಯಕ ಮಾತುಗಳಿಂದ ಪ್ರೋತ್ಸಾಹಿಸಿದ್ದು ಪ್ರಧಾನಿ ನರೇಂದ್ರ ಮೋದಿ. ಪದಕ ಗೆದ್ದ ಕ್ರೀಡಾಪಟುಗಳಿಗೆ ಖುದ್ದು ತಾವೇ ಫೋನ್‌ ಮಾಡಿ ಅಭಿನಂದನೆ ಸಲ್ಲಿಸಿದರು. ಸೋತ ಕ್ರೀಡಾಪಟುಗಳಿಗೂ ಬೆನ್ನುತಟ್ಟಿದರು. ನೀರಜ್‌ ಚೋಪ್ರಾ ಜಾವೆಲಿನ್‌ ಥ್ರೋನಲ್ಲಿ ಚಿನ್ನದ ಪದಕ ಗೆದ್ದಾಗ, ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದಾಗ ತಾವೇ ಸ್ವತಃ ಪೋನ್‌ ಮಾಡಿ ಅಭಿನಂದನೆ ಸಲ್ಲಿಸಿದರು. ಭಾರತದ ಮಹಿಳಾ ಹಾಕಿ ತಂಡ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸೋತಾಗಲೂ ಮೋದಿ ಫೋನ್‌ ಮಾಡಿ ತಂಡದ ಸದಸ್ಯರನ್ನು ಪ್ರೋತ್ಸಾಹಿಸಿದರು. ಇದು ಆಟಗಾರರ ಮನೋಬಲವನ್ನು ಹೆಚ್ಚಿಸಿತು. ಅದೇ ರೀತಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಎಲ್ಲಾ ಆಟಗಾರರಿಗೆ ಮೋದಿ ಟ್ವೀಟ್‌ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದರು. ಜೊತೆಗೆ ಒಲಿಂಪಿಕ್ಸ್‌ ಮತ್ತು ಪ್ಯಾರಾಲಿಂಪಿಕ್ಸ್‌ ಕ್ರೀಡಾಪಟುಗಳಿಗೆ ಪ್ರಧಾನಿ ನಿವಾಸದಲ್ಲಿ ಚಹಾಕೂಟವನ್ನು ಆಯೋಜಿಸಿ, ಸಾಧಕರನ್ನು ಸನ್ಮಾನಿಸಿದರು.

ಪಿ.ವಿ. ಸಿಂಧುಗೆ ಐಸ್‌ಕ್ರೀಮ್‌ ಟ್ರೀಟ್‌!

ಟೋಕಿಯೋ ಒಲಿಂಪಿಕ್ಸ್‌ನಿಂದ ಮರಳಿದ ಬಳಿಕ ನಿಮ್ಮ ಜೊತೆ ಐಸ್‌ಕ್ರೀಮ್‌ ತಿನ್ನುವುದಾಗಿ ಬ್ಯಾಡ್ಮಿಂಟನ್‌ ತಾರೆ ಪಿ.ವಿ. ಸಿಂಧೂಗೆ ಮೋದಿ ಮಾತು ಕೊಟ್ಟಿದ್ದರು. ತಮ್ಮ ಮಾತಿನಂತೆ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಗೆದ್ದ ಪಿ.ವಿ. ಸಿಂಧೂಗೆ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಐಸ್‌ಕ್ರೀಮ್‌ ಟ್ರೀಟ್‌ ನೀಡಿದರು. ಚಿನ್ನದ ಪದಕ ಗೆದ್ದ ನೀರಜ್‌ ಚೋಪ್ರಾ ಮತ್ತು ಪಿ.ವಿ. ಸಿಂಧುಗೆ ತಾವೇ ಸ್ವತಃ ಐಸ್‌ ಕ್ರೀಮ್‌ ಹಾಗೂ ಕೂರ್ಮಾವನ್ನು ನೀಡಿ ಗಮನಸೆಳೆದರು.

ತೆರೆಮರೆಯ ಸಾಧಕರಿಗೆ  ಪದ್ಮ ಪ್ರಶಸ್ತಿಯ ಗೌರವ

ಸಾಮಾನ್ಯವಾಗಿ ಪದ್ಮ ಪ್ರಶಸ್ತಿಗಳೆಂದರೆ ಅದು ಖ್ಯಾತನಾಮರು, ಸೆಲೆಬ್ರಿಟಿಗಳಿಗೆ ಮಾತ್ರವೇ ಸೀಮಿತ ಎಂಬ ಭಾವನೆ ಹಿಂದೆ ಇತ್ತು. ಆದರೆ, ಮೋದಿ ಸರ್ಕಾರ ಎಲೆ ಮರೆಯ ಕಾಯಿಗಳನ್ನು ಗುರುತಿಸಿ ಅವರಿಗೆ ಪದ್ಮ ಪ್ರಶಸ್ತಿಗಳನ್ನು ನೀಡುವ ಸಂಪ್ರದಾಯವನ್ನು ಆರಂಭಿಸಿತು. ಈ ಮೂಲಕ ಪದ್ಮ ಪ್ರಶಸ್ತಿಗಳನ್ನು ಜನ ಸಾಮಾನ್ಯರ ಪ್ರಶಸ್ತಿಯನ್ನಾಗಿ ರೂಪಿಸಿದ್ದು ಮೋದಿ ಸರ್ಕಾರದ ಹೆಗ್ಗಳಿಕೆ. ಇದು ಅದೆಷ್ಟೋ ಸಾಧಕರಿಗೆ ಪ್ರೇರಣೆಯಾಯಿತು. ಇದಕ್ಕೆ ಕರ್ನಾಟಕದ ಉದಾಹರಣೆಯನ್ನೇ ನೀಡುವುದಾದರೆ, ಉತ್ತರ ಕನ್ನಡ ಜಿಲ್ಲೆಯ ಜಾನಪದ ಹಾಡುಗಾರ್ತಿ ಸುಕ್ರಿ ಬೊಮ್ಮ ಗೌಡ, ಸಾಲು ಮರದ ತಿಮ್ಮಕ್ಕ ಅವರಿಗೆ ಪದ್ಮಶ್ರೀ ಪ್ರಶಸ್ತಿಗಳು ಸಂದಿರುವುದೇ ಸಾಕ್ಷಿ. ಎಲೆ ಮರೆಯ ಕಾಯಿಗಳನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಸರ್ಕಾರ ಸಾರ್ವಜನಿಕರಿಂದಲೇ ಪದ್ಮ ಪ್ರಶಸ್ತಿಗಳಿಗೆ ಅರ್ಜಿಯನ್ನು ಆಹ್ವಾನಿಸುತ್ತಿದೆ.

ವಿದೇಶಗಳಲ್ಲೂ ರಾರ‍ಯಲಿ, ರೋಡ್‌ ಶೋ

- ಅಮೆರಿಕ, ಆಸ್ಪ್ರೇಲಿಯಾ, ಯುಎಇ ಸೇರಿ ಅನೇಕ ದೇಶಗಳಲ್ಲಿ ಮೋದಿ ಹವಾ

ನರೇಂದ್ರ ಮೋದಿ ದೇಶ- ವಿದೇಶಗಳಲ್ಲಿಯೂ ತಮ್ಮ ರಾರ‍ಯಲಿಗಳ ಮೂಲಕ ಛಾಪು ಮೂಡಿಸಿದ್ದಾರೆ. ಪ್ರಧಾನಿ ಆಗುವುದಕ್ಕೂ ಮುನ್ನ ಅಮೆರಿಕ ಮೋದಿ ಅವರಿಗೆ ವೀಸಾ ನೀಡಲು ನಿರಾಕರಿಸಿತ್ತು. ಆದರೆ, 2014ರಲ್ಲಿ ಮೋದಿ ಭಾರತದ ಪ್ರಧಾನಿ ಆದ ಬಳಿಕ ಕೈಗೊಂಡ ಮೊದಲ ಅಮೆರಿಕ ಪ್ರವಾಸದ ವೇಳೆ ಮ್ಯಾಡಿಸನ್‌ ಸ್ಕೇ್ವರ್‌ನಲ್ಲಿ 50 ಸಾವಿರಕ್ಕೂ ಅಧಿಕ ಅನಿವಾಸಿ ಭಾರತೀಯರನ್ನು ಉದ್ದೇಶಿ ಭಾಷಣ ಮಾಡುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದರು. ಬಳಿಕ 2019ರಲ್ಲಿ ಹೂಸ್ಟನ್‌ನಲ್ಲಿ ಇದೇ ರೀತಿಯ ಇನ್ನೊಂದು ರಾರ‍ಯಲಿಯನ್ನು ಮೋದಿ ಆಯೋಜಿಸಿದ್ದರು. ಈ ‘ಹೌಡಿ ಮೋದಿ’ ರಾರ‍ಯಲಿ ಐತಿಹಾಸಿಕವಾಗಿತ್ತು. ಈ ರಾರ‍ಯಲಿಗೆ ಸೇರಿದ್ದ ಜನರನ್ನು ಕಂಡು ಅಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ನಿಬ್ಬೆರಗಾಗಿದ್ದರು. ಮೋದಿ ವಿದೇಶಿ ಪ್ರವಾಸ ಕೈಗೊಂಡಾಗಲೆಲ್ಲಾ ಅನಿವಾಸಿ ಭಾರತೀಯರ ಜೊತೆ ರೋಡ್‌ ಶೋ ಇಲ್ಲವೇ ಒಂದಿಲ್ಲೊಂದು ರೀತಿಯ ಕಾರ್ಯಕ್ರಮಗಳು ಆಯೋಜನೆಗೊಂಡಿರುತ್ತವೆ. ಆಸ್ಪ್ರೇಲಿಯಾ ಹಾಗೂ ಯುಎಇ ಪ್ರವಾಸದ ವೇಳೆಯೂ ಮೋದಿ ರೋಡ್‌ ಶೋ, ಸಾರ್ವಜನಿಕ ಭಾಷಣದ ಮೂಲಕ ಗಮನ ಸೆಳೆದಿದ್ದರು.

ಎಲೆಕ್ಷನ್‌ ಮಾಸ್ಕ್‌, ​ಸೆಲ್ಫೀ ಟ್ರೆಂಡ್‌

ಚುನಾವಣಾ ರಾರ‍ಯಲಿಗಳಲ್ಲಿ ಮೋದಿ ತಮ್ಮ ಮಾತಿನ ಮೂಲಕ ಮೋಡಿ ಮಾಡಿದಂತೆ ಅವರ ಮುಖವನ್ನು ಹೋಲುವ ಫೇಸ್‌ ಮಾಸ್ಕ್‌ಗಳು ಕೂಡ ಜನರನ್ನು ಮೋಡಿ ಮಾಡಿವೆ. ಮೋದಿ ಅಭಿಮಾನಿಗಳು ಮೋದಿ ಅವರ ಚಹರೆಯನ್ನೇ ಹೋಲುವ ಮುಖವಾಡ ಧರಿಸಿ ರಾರ‍ಯಲಿಯಲ್ಲಿ ಪಾಲ್ಗೊಳ್ಳುವುದು ಒಂದು ಟ್ರೆಂಡ್‌ ಎನಿಸಿಕೊಂಡಿದೆ. ಅಭಿಮಾನಿಗಳಿಗೆ ಇದು ಎಷ್ಟರ ಮಟ್ಟಿಗೆ ಕ್ರೇಜ್‌ ಸೃಷ್ಟಿಸಿದೆಯೆಂದರೆ ಜನರು ಮೋದಿ ಅವರ ಮುಖವಾಡ ಧರಿಸಿ ​ಸೆಲ್ಛಿ ತೆಗೆದುಕೊಳ್ಳುತ್ತಾರೆ. ಸ್ವತಃ ಮೋದಿ ಅವರಿಗೂ ​ಸೆಲ್ಫಿ ತೆಗೆದುಕೊಳ್ಳುವುದೆಂದರೆ ಇಷ್ಟ. ಚುನಾವಣೆ ಪ್ರಚಾರದ ಸಂದರ್ಭಗಳಲ್ಲಿ ಕಮಲದ ಹೂವಿನ ಚಿಹ್ನೆಯೊಂದಿಗೆ ಮೋದಿ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಜನರೊಂದಿಗೆ ಬೆರೆತು ​ಸೆಲ್ಫೀ ತೆಗೆದುಕೊಳ್ಳುತ್ತಾರೆ. ಮತದಾನ ಬಳಿಕ ​ಸೆಲ್ಫಿ ತೆಗೆದು ಮತದಾನ ಮಾಡಲು ಇತರರಿಗೂ ಹುರಿದುಂಬಿಸುತ್ತಾರೆ.

ಜನಸಂಪರ್ಕಕ್ಕೆ ನಮೋ ಆ್ಯಪ್‌

ಸಾಮಾನ್ಯವಾಗಿ ಸೇವೆ ಒದಗಿಸುವ ಖಾಸಗಿ ಕಂಪನಿಗಳು ಅಥವಾ ಸರ್ಕಾರಿ ಇಲಾಖೆಗಳು ಮೊಬೈಲ್‌ ಆ್ಯಪ್‌ ಹೊಂದುತ್ತವೆ. ಆದರೆ ನರೇಂದ್ರ ಮೋದಿ ಅವರು ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರತ್ಯೇಕ ಆ್ಯಪ್‌ ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳ ಹೊರತಾಗಿಯೂ ‘ನರೇಂದ್ರ ಮೋದಿ ಆ್ಯಪ್‌’ ಮೂಲಕವೂ ಪ್ರಧಾನಿ ಜನರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಂತೆ ಆ್ಯಪ್‌ ಮೂಲಕವೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಅಲ್ಲದೇ ನಾಗರಿಕರಿಂದ ಸಲಹೆಯನ್ನೂ ಆ್ಯಪ್‌ ಮೂಲಕ ಪಡೆಯುತ್ತಾರೆ. ತಮ್ಮ ಮಹತ್ವಾಕಾಂಕ್ಷಿ ಮನ್‌ ಕೀ ಬಾತ್‌ ಮಾಸಿಕ ರೇಡಿಯೋ ಭಾಷಣ ಕಾರ್ಯಕ್ರಮಕ್ಕೂ ಈ ಆ್ಯಪ್‌ಮೂಲಕ ಸಲಹೆ ಪಡೆದುಕೊಳ್ಳುತ್ತಾರೆ. ನರೇಂದ್ರ ಮೋದಿ ವೆಬ್‌ ಸೈಟ್‌ ಮೂಲಕವೂ ನಿರಂತರ ಸಂಪರ್ಕದಲ್ಲಿ ಇರುತ್ತಾರೆ.

ವಿದೇಶಿ ಗಣ್ಯರಿಗೆ ಅಪ್ಪುಗೆಯ ಸ್ವಾಗತ

- ಗುಜರಾತ್‌, ತಮಿಳುನಾಡು, ಉತ್ತರಪ್ರದೇಶದಲ್ಲೂ ಆತಿಥ್ಯ

ಸಾಮಾನ್ಯವಾಗಿ ವಿದೇಶಿ ಗಣ್ಯರು ಬಂದರೆ ಸರ್ಕಾರದ ಪ್ರತಿನಿಧಿಗಳು ಅವರನ್ನು ಬರಮಾಡಿಕೊಳ್ಳುತ್ತಾರೆ. ಆದರೆ, ಮೋದಿ ಹಾಗಲ್ಲ, ತಾವೇ ಸ್ವತಃ ವಿಮಾನ ನಿಲ್ದಾಣಕ್ಕೆ ತೆರಳಿ ಗಣ್ಯರನ್ನು ಬರ ಮಾಡಿಕೊಳ್ಳುತ್ತಾರೆ. ಆತ್ಮೀಯವಾಗಿ ಅವರನ್ನು ಅಪ್ಪಿಕೊಂಡು ಹೃದಯಸ್ಪರ್ಶಿ ಸ್ವಾಗತಕೋರುವ ರೂಢಿಯನ್ನು ಬೆಳೆಸಿಕೊಂಡಿದ್ದಾರೆ. ಮೋದಿ ಅವರ ಈ ನಡೆ ಭಾರತದ ಜೊತೆಗಿನ ಸ್ನೇಹ ಸಂಬಂಧಗಳ ಮೇಲೂ ಧನಾತ್ಮಕ ಪರಿಣಾಮ ಬೀರಿದೆ. ಹೀಗಾಗಿ ಮೋದಿ ಅವರು ವಿದೇಶಕ್ಕೆ ತೆರಳಿದಾಗಲೂ ರಾಷ್ಟ್ರದ ಮುಖ್ಯಸ್ಥರೇ ಸ್ವತಃ ಆಗಮಿಸಿ ಮೋದಿ ಅವರನ್ನು ಬರಮಾಡಿಕೊಳ್ಳುತ್ತಾರೆ. ಹಿಂದೆಲ್ಲಾ ವಿದೇಶಿ ಗಣ್ಯರಿಗೆ ರಾಷ್ಟ್ರ ರಾಜಧಾನಿಯಲ್ಲಿ ಆತಿಥ್ಯ ನೀಡಲಾಗುತ್ತಿತ್ತು. ಆದರೆ ಮೋದಿ ಅವರು ಗುಜರಾತ್‌, ತಮಿಳುನಾಡಿನ ಮಹಾಬಲಿಪುರಂ, ವಾರಾಣಸಿಗೂ ಕರೆದೊಯ್ಯುವ ಹೊಸ ಸಂಪ್ರದಾಯ ಸೃಷ್ಟಿಸಿದರು. ದೇಶದ ವೈವಿಧ್ಯತೆಯನ್ನು ಗಣ್ಯರಿಗೆ ಪರಿಚಯಿಸಿಕೊಟ್ಟರು.

ಸೈನಿಕರ ಜತೆ ದೀಪಾವಳಿ

ದೀಪಾವಳಿ ವೇಳೆ ದೇಶಕ್ಕೆ ದೇಶವೇ ಸಂಭ್ರಮದಲ್ಲಿರುವಾಗ ಮೋದಿ ಅವರು ಸೈನಿಕರನ್ನು ನೆನೆಯುತ್ತಾರೆ. ಗಡಿಯಲ್ಲಿ ದೇಶ ಕಾಯುತ್ತಾ ನಾಗರಿಕರನ್ನು ರಕ್ಷಿಸುತ್ತಿರುವ ಸೈನಿಕರೊಂದಿಗೆ ಪ್ರತಿ ವರ್ಷ ದೀಪಾವಳಿ ಆಚರಿಸುವುದನ್ನು ಮೋದಿ ಮರೆಯುವುದಿಲ್ಲ. ಗಡಿಯಂಚಿನ ಪ್ರದೇಶಗಳಿಗೆ ತೆರಳಿ ಮೋದಿ ಅವರು ಸೈನಿಕರ ಕಷ್ಟ- ಸುಖಗಳನ್ನು ಕಣ್ಣಾರೆ ಅರಿಯುವ ವಿಶಿಷ್ಟಗುಣ ಹೊಂದಿದ್ದಾರೆ.

ಕೇದಾರದಲ್ಲಿ ತಪಸ್ಸು, ನವರಾತ್ರಿ ಉಪವಾಸ

2019ರಲ್ಲಿ ಕೇದಾರನಾಥಕ್ಕೆ ಭೇಟಿ ನೀಡಿದ್ದ ಮೋದಿ ಅವರು ಅಲ್ಲಿನ ಗುಹೆಯೊಂದರಲ್ಲಿ ಧ್ಯಾನಸ್ಥರಾಗಿದ್ದರು. ತನ್ಮೂಲಕ ದೇಶದ ಪ್ರಧಾನಿಯಾಗಿದ್ದರೂ ತಾವು ಅಧ್ಯಾತ್ಮದ ಬಗ್ಗೆ ಒಲವು ಹೊಂದಿರುವ ನಾಯಕ ಎಂದು ನಿರೂಪಿಸಿದರು. ನವರಾತ್ರಿ ಸಂದರ್ಭದಲ್ಲಿ ಮೋದಿ ಅವರು ಎಂತಹ ಸಂದರ್ಭವೇ ಬಂದರೂ ಆಹಾರ ಸೇವಿಸುವುದಿಲ್ಲ. ನಿಂಬೆ ರಸ ಸೇವಿಸಿ 9 ದಿನ ವ್ರತ ಕೈಗೊಳ್ಳುತ್ತಾರೆ.

ಖಾಸಗಿ ಕ್ಷೇತ್ರದ ಬುದ್ಧಿವಂತರಿಗೆ ಮಣೆ

ಸರ್ಕಾರದ ಆಯಕಟ್ಟಿನ ಜಾಗಗಳಲ್ಲಿ ಸರ್ಕಾರಿ ಅಧಿಕಾರಿಗಳೇ ಇರುತ್ತಾರೆ. ಆದರೆ ಖಾಸಗಿ ಕ್ಷೇತ್ರದಲ್ಲಿ ಅವರಿಗಿಂತಲೂ ಬುದ್ಧಿವಂತರು ಇರುವುದು ವಾಸ್ತವ. ಹೀಗಾಗಿ ಸರ್ಕಾರದ ಪ್ರಮುಖ ಕೆಲಸಗಳಿಗೆ ಖಾಸಗಿ ಕ್ಷೇತ್ರದ ಪರಿಣತರನ್ನು ಮೋದಿ ಅವರು ನೇಮಕ ಮಾಡಿಕೊಳ್ಳುವ ಮೂಲಕ ಹೊಸ ಸಂಪ್ರದಾಯವನ್ನು ಆರಂಭಿಸಿದರು.

ಸೀ ಪ್ಲೇನ್‌ನಲ್ಲಿ ಚುನಾವಣಾ ಪ್ರಚಾರ

2017ರ ಗುಜರಾತ್‌ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿ ಪೈಪೋಟಿ ಏರ್ಪಟ್ಟಿತ್ತು. ಚುನಾವಣಾ ಪ್ರಚಾರಕ್ಕೆ ತೆರೆ ಬೀಳುವ ದಿನ ಮೋದಿ ಅವರು ಅಹಮದಾಬಾದ್‌ನಲ್ಲಿ ನಡೆಸಬೇಕಾಗಿದ್ದ ರಾರ‍ಯಲಿ ರದ್ದಾಯಿತು. ಆದರೂ ಛಲ ಬಿಡದ ಮೋದಿ ಅವರು ಸೀ ಪ್ಲೇನ್‌ (ಸಮುದ್ರ ವಿಮಾನ)ನಲ್ಲಿ ಹಾರಾಡುವ ಮೂಲಕ ಪ್ರಚಾರ ನಡೆಸಿ ತಾವೊಬ್ಬ ಸಾಮಾನ್ಯ ರಾಜಕಾರಣಿಯಲ್ಲ ಎಂದು ನಿರೂಪಿಸಿದರು.

click me!