ಪ್ರಧಾನಿ ನರೇಂದ್ರ ಮೋದಿ ತಮ್ಮ 2.0 ಸರ್ಕಾರದ ಅವಧಿಯ ಕೊನೆ ಮನ್ ಕೀ ಬಾತ್‌ನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದು, ಲೋಕಸಭಾ ಚುನಾವಣೆ ಸಮೀಪದಲ್ಲಿರುವ ಹಿನ್ನೆಲೆಯಲ್ಲಿ ಈ ಮನ್ ಕೀ ಬಾತ್ ಕುತೂಹಲ ಕೆರಳಿಸಿದೆ. 2014ರ ಆಕ್ಟೋಬರ್ 3 ರಂದು ಆರಂಭವಾದ ಈ ಮನ್ ಕೀಬಾತ್ ರೇಡಿಯೋ ಕಾರ್ಯಕ್ರಮ ಈಗಾಗಲೇ 109 ಆವೃತ್ತಿಗಳನ್ನು ಪೂರೈಸಿದ್ದು, ಇಂದು 110ನೇ ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದು, ದೇಶದ ಅಭಿವೃದ್ಧಿಗೆ ಮಹಿಳೆಯರು ಕೊಟ್ಟ ಕೊಡುಗೆಯನ್ನು ಶ್ಲಾಘಿಸಿದ್ದಾರೆ.
ಸ್ನೇಹಿತರೇ ಮಾರ್ಚ್ 8 ರಂದು ನಾವು ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ದೇಶದ ಪ್ರಗತಿಗೆ ನಾರಿಶಕ್ತಿ ನೀಡಿದ ಕೊಡುಗೆಗೆ ನಾವು ಧನ್ಯವಾದ ಸಲ್ಲಿಸಲು ಈ ದಿನ ಒಂದು ಒಳ್ಳೆಯ ಅವಕಾಶವಾಗಿದೆ. ಮಹಾಕವಿ ಸುಬ್ರಮಣಿ ಭಾರತೀಯರ್ ಹೇಳಿದಂತೆ ಮಹಿಳೆಯರಿಗೆ ಪುರುಷರಂತೆ ಸಮಾನ ಅವಕಾಶ ಸಿಕ್ಕಿದಾಗ ಜಗತ್ತು ಸಮೃದ್ಧಿ ಹೊಂದುತ್ತದೆ. ಇವತ್ತು ಭಾರತದ ನಾರಿಶಕ್ತಿ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿದೆ. ಇಂದು ಗ್ರಾಮದಲ್ಲಿ ವಾಸಿಸುವ ಮಹಿಳೆಯರು ಕೂಡ ಡ್ರೋನ್ ಪ್ರಯೋಗ ಮಾಡ್ತಾರೆ. ಇಂದು ಇದು ಸಾಧ್ಯವಾಗಿದೆ. ಪ್ರತಿಗ್ರಾಮದಲ್ಲೂ ಈ ಡ್ರೋನ್ ದೀದಿ ಯೋಜನೆ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಪ್ರಧಾನಿ ನಮೋ ಡ್ರೋನ್ ದೀದಿ ಸ್ಕೀಮ್ ಬಗ್ಗೆ ಮಾತನಾಡಿದರು ಜೊತೆಗೆ ಈ ಯೋಜನೆಯಲ್ಲಿ ಡ್ರೋನ್ ಹಾರಿಸಲು ತರಬೇತಿ ಪಡೆದ ಉತ್ತರ ಪ್ರದೇಶದ ಸೀತಾಪುರದ ಸುನೀತಾ ಅವರ ಜೊತೆ ಪ್ರಧಾನಿ ಮಾತುಕತೆ ನಡೆಸಿದರು.
ನಂತರ ನೈಸರ್ಗಿಕ ಕೃಷಿ ಮಾಡುವ ಮಹಾರಾಷ್ಟ್ರದ ಕಲ್ಯಾಣಿ ಪ್ರಫುಲ್ ಪಟೇಲ್ ಜೊತೆ ಮಾತನಾಡಿದ ಪ್ರಧಾನಿ ಅವರ ಜೊತೆ ಸಹಜ ಕೃಷಿಯ ಬಗ್ಗೆ ಅನುಭವ ಕೇಳಿದರು. ಜೊತೆಗೆ ಮಹಾರಾಷ್ಟ್ರದ ಗಡ್ಕರಿಯಲ್ಲಿ ಆದಿವಾಸಿ ಸಮುದಾಯವೂ ಸರ್ಕಾರದ ನೆರವಿನಿಂದ ನಿರ್ಮಿಸಿದ ಹೋಮ್ ಸ್ಟೇ ಹಾಗೂ ಅದರ ಸುತ್ತಲೂ ಬೆಳೆಸಿರುವ ಔಷಧಿಯ ಸಸ್ಯಗಳ ಕುರಿತು ಪ್ರಧಾನಿ ಉಲ್ಲೇಖ ಮಾಡಿ ಆದಿವಾಸಿ ಸಮುದಾಯವನ್ನು ಶ್ಲಾಘಿಸಿದರು.
ಬೆಂಗಳೂರಿನಲ್ಲಿ ಲಕ್ಷಗಟ್ಟಲೇ ದುಡಿಯುತ್ತಿದ್ದ ಜಯಂತಿ ಮಹಾಪಾತ್ರ ಹಾಗೂ ಪತಿ ವೀರೇಂದ್ರ ಸಾಹು ತಮ್ಮ ಅತ್ಯಧಿಕ ಸಂಬಳದ ಕೆಲಸ ಬಿಟ್ಟು ತಮ್ಮೂರು ಒಡಿಶಾದ ಕಾಲಹಂಡಿಯ ಸಾಲೇಬಾಟಾ ಗ್ರಾಮದಲ್ಲಿ ಮೇಕೆಗಳ ಸಾಕಣೆ ಉದ್ಯಮದ ಜೊತೆಗೆ ಅಲ್ಲಿನ ಸಮುದಾಯಕ್ಕೆ ಉದ್ಯೋಗ ನೀಡಿ ಇಡೀ ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ವಿಚಾರವನ್ನು ಪ್ರಧಾನಿ ತಮ್ಮ ಮನ್ ಕೀ ಬಾತ್‌ನಲ್ಲಿ ಶ್ಲಾಘಿಸಿದರು. ಅಲ್ಲದೇ ಅವರು ಸ್ಥಾಪಿಸಿದ ಮಣಿಕಸ್ತು ಗೋಟ್ ಬ್ಯಾಂಕ್ ಅನ್ನು ಶ್ಲಾಘಿಸಿದರು. ಇವರ ಕಾರ್ಯದಿಂದ ಅಲ್ಲಿನ ಜನ ಸ್ವಾವಲಂಬಿಗಳಾಗಿದ್ದಾರೆ ಎಂದು ಪ್ರಧಾನಿ ಹೇಳಿದರು.
ತಮ್ಮ ಗಾಯನದಿಂದ ಸಂಸ್ಕೃತಿ ಹಾಗೂ ಜಾನಪದ ಲೋಕಕ್ಕೆ ಕೊಡುಗೆ ನೀಡಿದ ಕರ್ನಾಟಕದ ಬಾಗಲಕೋಟೆಯ ವೆಂಕಪ್ಪ ಅಂಬಾಜಿ ಸುಗಾಟ್ಕರ್ ಅವರ ಸಾಧನೆಯನ್ನು ಇದೇ ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಶ್ಲಾಘಿಸಿದರು. ವೆಂಕಪ್ಪ ಅಂಬಾಜಿ ಸುಗೇತ್ಕರ್ ಅವರು 1000ಕ್ಕೂ ಹೆಚ್ಚು ಜಾನಪದ ಹಾಡುಗಳನ್ನು ಹಾಡಿದ್ದಾರೆ. ಅಲ್ಲದೇ ಯಾವುದೇ ಶುಲ್ಕ ಪಡೆಯದೇ ಸಾವಿರಾರು ವಿದ್ಯಾರ್ಥಿಗಳಿಗೆ ತಮ್ಮ ವಿದ್ಯೆಯನ್ನು ಕಲಿಸಿದ್ದಾರೆ. ಇವರು ನಮ್ಮ ಭಾರತದ ಸಂಸ್ಕೃತಿಯನ್ನು ತಮ್ಮ ಸೇವೆಯಿಂದ ಶ್ರೀಮಂತಗೊಳಿಸಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರತಿ ತಿಂಗಳ ಕೊನೆ ಭಾನುವಾರದ ರೇಡಿಯೋ ಮೂಲಕ ಪ್ರಧಾನಿ ದೇಶವನ್ನುದ್ದೇಶಿಸಿ ಈ ಮನ್ ಕೀ ಬಾತ್‌ನಲ್ಲಿ ಮಾತನಾಡುತ್ತಾರೆ. ದೇಶದ ಮೂಲೆ ಮೂಲೆಗಳ ಹಲವು ವಿಚಾರಗಳನ್ನು ಈ ರೇಡಿಯೋ ಭಾಷಣದಲ್ಲಿ ಪ್ರಧಾನಿ ಹಂಚಿಕೊಳ್ಳುತ್ತಾರೆ. ಭಾಷೆಯ ಅಡೆತಡೆಗಳನ್ನು ಮೀರಿ ಸಮಾಜದ ವಿವಿಧ ವಿಭಾಗಗಳನ್ನು ಈ ಮನ್ ಕೀ ಬಾತ್ ತಲುಪಿದ್ದು, ಇಂದು ಇದು ಕೇವಲ ಭಾರತದ ಭಾಷೆಗಳಿಗೆ ಸೀಮಿತವಾಗಿಲ್ಲ. 22 ಭಾರತೀಯ ಭಾಷೆಗಳು ಮತ್ತು 29 ಉಪ ಭಾಷೆಗಳಲ್ಲಿ ಮನ್ ಕೀ ಬಾತ್ ಪ್ರಸಾರವಾಗಿದ್ದು, 11 ವಿದೇಶಿ ಭಾಷೆಗಳಾದ ಫ್ರೆಂಚ್, ಚೈನೀಸ್, ಇಂಡೋನೇಷಿಯನ್, ಟಿಬೆಟಿಯನ್, ಬರ್ಮೀಸ್, ಬಲೂಚಿ, ಅರೇಬಿಕ್, ಪಶ್ತು, ಪರ್ಷಿಯನ್, ಡಾರಿ ಮತ್ತು ಸ್ವಾಹಿಲಿ ಭಾಷೆಗಳಲ್ಲಿಯೂ ಈ ಮನ್ ಕೀ ಬಾತ್ ಲಭ್ಯವಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ