ಟೊಮ್ಯಾಟೊ ಬಳಕೆಯನ್ನು ಕಡಿಮೆ ಮಾಡುವುದರಿಂದ ಅವುಗಳ ಏರುತ್ತಿರುವ ಬೆಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಪಂಜಾಬ್ ರಾಜ್ಯಪಾಲರು ಹೇಳಿದ್ದು, ರಾಜಭವನದಲ್ಲಿ ಮೆನುವಿನಿಂದ ಟೊಮ್ಯಾಟೋವನ್ನು ಸದ್ಯಕ್ಕೆ ಅಡುಗೆಗೆ ಬಳಸೋದೇ ಬೇಡವೆಂದಿದ್ದಾರೆ.
ಚಂಡೀಗಢ (ಆಗಸ್ಟ್ 5, 2023): ದೇಶಾದ್ಯಂತ ಟೊಮ್ಯಾಟೋ ಎಂಬ ಕೆಂಪು ಸುಂದರಿಯ ಬೆಲೆ ಗಗನಕ್ಕೇರಿದೆ. ಈ ಹಿನ್ನೆಲೆ ಇದನ್ನು ಬಳಸದಂತೆ ಉತ್ತರ ಪ್ರದೇಶದ ಬಿಜೆಪಿ ಸಚಿವರೊಬ್ಬರು ಐಡಿಯಾ ಕೊಟ್ಟಿದ್ದರು. ಈಗ, ಇದೇ ರೀತಿ ಪಂಜಾಬ್ ರಾಜ್ಯಪಾಲರು ರಾಜಭವನದಲ್ಲಿ ಮೆನುವಿನಿಂದ ಟೊಮ್ಯಾಟೋ ತೆಗೆದುಹಾಕಲು ಸೂಚಿಸಿದ್ದು, ಅಡುಗೆಗೆ ಬಳಸೋದೇ ಬೇಡವೆಂದಿದ್ದಾರೆ. ಚಂಡೀಗಢದಲ್ಲಿ ಟೊಮ್ಯಾಟೋ ಬೆಲೆ ಗಗನಕ್ಕೇರಿದ್ದು, ಕೆಜಿಗೆ 200 ರೂ. ದಾಟಿದ ಹಿನ್ನೆಲೆಯಲ್ಲಿ ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಟೊಮ್ಯಾಟೊ ಬಳಕೆಯನ್ನು ಕಡಿಮೆ ಮಾಡುವುದರಿಂದ ಅವುಗಳ ಏರುತ್ತಿರುವ ಬೆಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಪಂಜಾಬ್ ರಾಜ್ಯಪಾಲರು ಹೇಳಿದ್ದು, ಸದ್ಯಕ್ಕೆ ಪರ್ಯಾಯಗಳನ್ನು ಬಳಸಲು ಜನರಿಗೆ ಮನವಿ ಮಾಡಿದರು. ಚಂಡೀಗಢದ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಯೂ ಆಗಿರುವ ಪಂಜಾಬ್ ಗವರ್ನರ್ ಬನ್ವಾರಿಲಾಲ್ ಪುರೋಹಿತ್, ಆಹಾರ ಬೆಲೆಗಳು ಏರಿಕೆಯ ಪರಿಣಾಮವನ್ನು ಎದುರಿಸುತ್ತಿರುವ ಪಂಜಾಬ್ ನಾಗರಿಕರಿಗೆ ಬೆಂಬಲ ನೀಡಲು ಟೊಮ್ಯಾಟೋ ಸೇವನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ರಾಜಭವನದ ಹೇಳಿಕೆ ತಿಳಿಸಿದೆ.
ಇದನ್ನು ಓದಿ: Tomato ಬೆಲೆ ಇಳಿಕೆಗೆ ಯುಪಿ ಸಚಿವರು ಕೊಟ್ರು ಬೆಸ್ಟ್ ಐಡಿಯಾ!
"ವಸ್ತುವಿನ ಬಳಕೆಯನ್ನು ನಿಲ್ಲಿಸುವುದು ಅಥವಾ ಕಡಿಮೆ ಮಾಡುವುದರಿಂದ ಅದರ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ; ಬೇಡಿಕೆಯನ್ನು ಕಡಿಮೆ ಮಾಡುವುದರಿಂದ ತಾನೇ ತಾನಾಗಿ ಬೆಲೆ ಕಡಿಮೆಯಾಗುತ್ತದೆ. ಇದೇ ರೀತಿ, ಜನರು ಸದ್ಯಕ್ಕೆ ತಮ್ಮ ಮನೆಯಲ್ಲಿ ಪರ್ಯಾಯಗಳನ್ನು ಬಳಸುತ್ತಾರೆ ಮತ್ತು ಟೊಮ್ಯಾಟೋ ಬೆಲೆಗಳ ಏರಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಹೇಳಿದರು.
ಹಾಗೆ, ಟೊಮ್ಯಾಟೋ ಬೆಲೆಗಳ ಏರಿಕೆಗೆ "ಪೂರೈಕೆ ಸರಪಳಿ ಅಡಚಣೆಗಳು, ಹವಾಮಾನ ಪರಿಸ್ಥಿತಿಗಳು ಮತ್ತು ಇತರ ಮಾರುಕಟ್ಟೆ ಡೈನಾಮಿಕ್ಸ್" ಸೇರಿದಂತೆ ವಿವಿಧ ಅಂಶಗಳು ಕಾರಣವಾಗಿದೆ ಎಂದು ರಾಜಭವನದ ಹೇಳಿಕೆ ತಿಳಿಸಿದೆ. ಈ ಮಧ್ಯೆ, "ತಮ್ಮ ಸ್ವಂತ ನಿವಾಸದಲ್ಲಿ ಟೊಮ್ಯಾಟೋ ಸೇವನೆಯನ್ನು ತ್ಯಜಿಸುವ ಮೂಲಕ, ರಾಜ್ಯಪಾಲರು ಈ ಸವಾಲಿನ ಸಮಯದಲ್ಲಿ ಸಹಾನುಭೂತಿ, ಮಿತವ್ಯಯ ಮತ್ತು ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳುವ ಗುರಿ ಹೊಂದಿದ್ದಾರೆ" ಎಂದೂ ಹೇಳಿಕೆ ತಿಳಿಸಿದೆ.
ಇದನ್ನೂ ಓದಿ: Good News: ಶೀಘ್ರದಲ್ಲೇ ಟೊಮ್ಯಾಟೋ ದರ ಇಳಿಕೆ; ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ
ಉತ್ತರ ಪ್ರದೇಶದ ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಪೋಷಣೆ ಖಾತೆ ರಾಜ್ಯ ಸಚಿವೆ ಪ್ರತಿಭಾ ಶುಕ್ಲಾ ಅವರು ಸಹ ಕಳೆದ ತಿಂಗಳು ಟೊಮ್ಯಾಟೋವನ್ನು ಮನೆಯಲ್ಲಿಯೇ ಬೆಳೆಯಿರಿ ಅಥವಾ ಅವುಗಳ ಬೆಲೆಯನ್ನು ನಿಯಂತ್ರಿಸಲು ಅವುಗಳನ್ನು ತಿನ್ನುವುದನ್ನು ನಿಲ್ಲಿಸಿ ಎಂದು ಸಲಹೆ ನೀಡಿದ್ದು, ವೈರಲ್ ಆಗಿತ್ತು. ‘’ಟೊಮ್ಯಾಟೋ ದುಬಾರಿಯಾದರೆ ಮನೆಯಲ್ಲೇ ಬೆಳೆಯಬೇಕು, ಟೊಮ್ಯಾಟೋ ತಿನ್ನುವುದನ್ನು ಬಿಟ್ಟರೆ ಅನಿವಾರ್ಯವಾಗಿ ಬೆಲೆ ಇಳಿಯುತ್ತದೆ. ಟೊಮ್ಯಾಟೋ ಬದಲು ನಿಂಬೆ ಹಣ್ಣನ್ನೂ ತಿನ್ನಬಹುದು. ಯಾರೂ ಟೊಮ್ಯಾಟೋ ತಿನ್ನದಿದ್ದರೆ ಬೆಲೆ ಇಳಿಕೆಯಾಗುತ್ತದೆ. ನೀವು ಟೊಮ್ಯಾಟೋ ತಿನ್ನಬೇಡಿ, ನಿಂಬೆಹಣ್ಣು ಬಳಸಿ, ಯಾವುದು ಹೆಚ್ಚು ದುಬಾರಿಯೋ ಅದನ್ನು ತ್ಯಜಿಸಿ, ಅದು ತಾನೇ ತಾನಾಗಿ ಅಗ್ಗವಾಗುತ್ತದೆ’’ ಎಂದು ಅವರು ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದರು.
ಇದನ್ನೂ ಓದಿ: ಜನಸಾಮಾನ್ಯರಿಗೆ ಗುಡ್ ನ್ಯೂಸ್: ಕೇಂದ್ರ ಸರ್ಕಾರದಿಂದ 70 ರೂ. ಗೆ ಟೊಮ್ಯಾಟೋ ಮಾರಾಟ