
ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ಅಯೋಧ್ಯೆಯ ರಾಮ ಜನ್ಮಭೂಮಿ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಈ ವೇಳೆ, ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಷ್ಟ್ರಪತಿಗಳಿಗೆ ಸಾಥ್ ನೀಡಿದರು. ರಾಷ್ಟ್ರಪತಿಗಳು ರಾಮಲಲ್ಲಾ ವಿಗ್ರಹಕ್ಕೆ ಆರತಿ ಬೆಳಗಿ, ದೇವಾಲಯದ ಆವರಣದಲ್ಲಿ 'ರಾಮ ಯಂತ್ರ' ಸ್ಥಾಪನೆ ನೆರವೇರಿಸಿದರು.
ರಾಮ ಮಂದಿರದಲ್ಲಿ ಆಯೋಜಕರು ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಇದರಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಮತ್ತು ಸಂತರು ಭಾಗವಹಿಸುವ ನಿರೀಕ್ಷೆಯಿದೆ. ರಾಮ ಮಂದಿರ ನಿರ್ಮಾಣಕ್ಕೆ ದುಡಿದ ಅನೇಕ ಕಾರ್ಮಿಕರು, ಮಾರಾಟಗಾರರು ಮತ್ತು ಕುಶಲಕರ್ಮಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಈ ಕಾರ್ಯಕ್ರಮವು ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದೆ.
ಈ ವಿಶೇಷ ಸಂದರ್ಭಕ್ಕಾಗಿ ಆಡಳಿತವು ಇಡೀ ಅಯೋಧ್ಯೆ ನಗರವನ್ನು ಸಿಂಗರಿಸಿದೆ. ಪ್ರಮುಖ ರಸ್ತೆಗಳು, ವೃತ್ತಗಳು ಮತ್ತು ರಾಮ ಮಂದಿರಕ್ಕೆ ಹೋಗುವ ದಾರಿಗಳಲ್ಲಿ ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರ ಚಿತ್ರಗಳಿರುವ ದೊಡ್ಡ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಹಾಕಿದ್ದಾರೆ. ನಗರದಾದ್ಯಂತ ಕೇಸರಿ ಧ್ವಜಗಳು ಮತ್ತು ಅಲಂಕಾರಿಕ ತೋರಣಗಳಿಂದ ಬೀದಿಗಳನ್ನು ಅಲಂಕರಿಸಲಾಗಿದ್ದು, ಧಾರ್ಮಿಕ ಹಾಗೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಇನ್ನು, ಭದ್ರತೆ, ನೈರ್ಮಲ್ಯ ಮತ್ತು ಸಂಚಾರ ನಿರ್ವಹಣೆಗೆ ಸಂಬಂಧಿಸಿದಂತೆ ಆಡಳಿತವು ವಿಶೇಷ ವ್ಯವಸ್ಥೆಗಳನ್ನು ಮಾಡಿದೆ.
ಈ ಭೇಟಿಯ ಬಗ್ಗೆ ರಾಮ ಜನ್ಮಭೂಮಿ ದೇವಸ್ಥಾನದ ಟ್ರಸ್ಟಿ ಅನಿಲ್ ಮಿಶ್ರಾ ಅವರು ಮಾಹಿತಿ ನೀಡಿದರು. 'ಉತ್ತರ ಪ್ರದೇಶದಾದ್ಯಂತ ಸುಮಾರು ಆರು ಸಾವಿರ ಜನರನ್ನು ಆಹ್ವಾನಿಸಿದ್ದೇವೆ. ರಾಮ ಮಂದಿರದ ಜೊತೆ ಕೆಲಸ ಮಾಡಿದ ಅನೇಕ ಕಾರ್ಮಿಕರು, ಮಾರಾಟಗಾರರು ಮತ್ತು ಕುಶಲಕರ್ಮಿಗಳನ್ನೆಲ್ಲಾ ಆಹ್ವಾನಿಸಿದ್ದೇವೆ. ಕಾರ್ಯಕ್ರಮವು ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದೆ. ರಾಷ್ಟ್ರಪತಿಗಳು ಶ್ರೀರಾಮ ಯಂತ್ರವನ್ನು ಸ್ಥಾಪಿಸಲಿದ್ದಾರೆ. ನಂತರ ಆರತಿ ಮಾಡಲಿದ್ದಾರೆ' ಎಂದು ಅವರು ಹೇಳಿದರು.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ ದೇವ್ ಗಿರಿ ಮಹಾರಾಜ್ ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡರು. 'ರಾಷ್ಟ್ರಪತಿಗಳು ಭೇಟಿ ನೀಡಿ 'ರಾಮ ಯಂತ್ರ'ವನ್ನು ಸ್ಥಾಪಿಸಲಿದ್ದಾರೆ. ಇದರ ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ, ನಿರ್ಮಿಸಲಾಗಿರುವ ಏಳು ದೇವಾಲಯಗಳಿಗೂ ಅವರು ಭೇಟಿ ನೀಡಲಿದ್ದಾರೆ. ಈ ಕ್ಷಣ ನಮಗೆ ಬಹಳ ಮುಖ್ಯವಾದದ್ದು. ಯಾಕೆಂದರೆ, ರಾಮಲಲ್ಲಾ ದೇವಾಲಯದ ಸಂಪೂರ್ಣ ನಿರ್ಮಾಣ ಮತ್ತು ಪ್ರತಿಷ್ಠಾಪನೆ ಇಂದು ಪೂರ್ಣಗೊಳ್ಳುತ್ತಿದೆ. ಇದು ಕೇವಲ ಭಾರತದ ಜನರಿಗೆ ಮಾತ್ರವಲ್ಲ, ದೇಶ-ವಿದೇಶಗಳಲ್ಲಿರುವ ಎಲ್ಲಾ ರಾಮಭಕ್ತರಿಗೂ ಸಂಪೂರ್ಣವಾಗಿ ಮುಕ್ತವಾಗಲಿದೆ' ಎಂದು ಅವರು ತಿಳಿಸಿದರು. (ಎಎನ್‌ಐ)
(ಈ ವರದಿಯ ಹೆಡ್‌ಲೈನ್ ಹೊರತುಪಡಿಸಿ, ಉಳಿದ ಭಾಗವನ್ನು ಏಷ್ಯಾನೆಟ್ ನ್ಯೂಸೇಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್‌ನಿಂದ ಪ್ರಕಟಿಸಲಾಗಿದೆ.)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ