
ನವದೆಹಲಿ (ಫೆ.3): ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಭವನ, ಮದುವೆ ಸಮಾರಂಭವೊಂದಕ್ಕೆ ಸಜ್ಜಾಗುತ್ತಿದೆ. ರಾಷ್ಟ್ರಪತಿ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಯ ಮದುವೆಯನ್ನು ರಾಷ್ಟ್ರಪತಿ ಭವನದ ವ್ಯಾಪ್ತಿಯಲ್ಲೇ ನಡೆಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮತಿ ನೀಡಿದ್ದಾರೆ. ಫೆ.12ರಂದು ರಾಷ್ಟ್ರಪತಿ ಭವನದ ಆವರಣದಲ್ಲಿ ವಿವಾಹ ಸಮಾರಂಭ ನಡೆಯಲಿದೆ. ರಾಷ್ಟ್ರಪತಿ ಭವನದಲ್ಲಿ ಪಿಎಸ್ಒ ಆಗಿ ನೇಮಕಗೊಂಡಿರುವ ಸಿಆರ್‌ಪಿಎಫ್ ಅಧಿಕಾರಿ ಪೂನಂ ಗುಪ್ತಾ ಅವರ ವಿವಾಹವನ್ನು ಇಲ್ಲಿನ ಮದರ್ ಥೆರೆಸಾ ಕ್ರೌನ್ ಕಾಂಪ್ಲೆಕ್ಸ್‌ನಲ್ಲಿ ನಡೆಸಲು ರಾಷ್ಟ್ರಪತಿ ಅನುಮತಿ ನೀಡಿದ್ದಾರೆ. ಆದರೆ ಈ ಬಗ್ಗೆ ರಾಷ್ಟ್ರಪತಿ ಭವನದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ದಕ್ಷ ಅಧಿಕಾರಿ ಎಂದೇ ಹೆಸರು ಪಡೆದಿರುವ ಪೂನಂ ಈ ಬಾರಿಯ ಗಣರಾಜ್ಯೋತ್ಸವ ಸಂದರ್ಭದ ಪರೇಡ್‌ನಲ್ಲಿ ಸಂಪೂರ್ಣ ಮಹಿಳಾ ತುಕಡಿಯನ್ನು ಮುನ್ನಡೆಸಿದ್ದರು. ಪೂನಂ ಗುಪ್ತಾ, ಜಮ್ಮು ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಅವನೀಶ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದು, ಕೆಲವೇ ಕೆಲ ಸ್ನೇಹಿತರು, ಸಂಬಂಧಿಗಳು ಭಾಗಿಯಾಗುವ ನಿರೀಕ್ಷೆಯಿದೆ.
ವಿವಾಹವಾಗುತ್ತಿರುವ ವ್ಯಕ್ತಿಯ ನಡವಳಿಕೆ ಮತ್ತು ಸೇವೆಯಿಂದ ಪ್ರಭಾವಿತರಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮದುವೆ ಆಚರಣೆಗಳಿಗೆ ಹಸಿರು ನಿಶಾನೆ ತೋರಿಸಿದ್ದಾರೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ರಾಷ್ಟ್ರಪತಿ ದ್ರೌಪದಿ ಮುರ್ಮು ಈ ವ್ಯಕ್ತಿಯ ವಿವಾಹದ ಬಗ್ಗೆ ತಿಳಿದಾಗ, ಅವರು ರಾಷ್ಟ್ರಪತಿ ಭವನದ ಮದರ್ ತೆರೇಸಾ ಕ್ರೌನ್ ಕಾಂಪ್ಲೆಕ್ಸ್‌ನಲ್ಲಿ ಸಮಾರಂಭವನ್ನು ಏರ್ಪಡಿಸಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಈ ಕಾರ್ಯಕ್ರಮಕ್ಕೆ ಆಯ್ದ ಅತಿಥಿಗಳ ಪಟ್ಟಿ ಇರುತ್ತದೆ. ಪ್ರವೇಶ ಅನುಮತಿ ನೀಡಲು ಅಗತ್ಯವಾದ ಔಪಚಾರಿಕ ಪ್ರಕ್ರಿಯೆಗಳು ನಡೆಯುತ್ತಿವೆ.
ಯಾರೀಕೆ ಪೂನಂ ಗುಪ್ತಾ: ಪಿಎಸ್‌ಓ ಪೂನಂ ಗುಪ್ತಾ ಗಣಿತದಲ್ಲಿ ಪದವಿ, ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಗ್ವಾಲಿಯರ್‌ನ ಜಿವಾಜಿ ವಿಶ್ವವಿದ್ಯಾಲಯದಿಂದ ಬಿಎಡ್ ಪದವಿ ಪಡೆದಿದ್ದಾರೆ. 2018 ರಲ್ಲಿ, ಅವರು ಯುಪಿಎಸ್‌ಸಿ ಸಿಎಪಿಎಫ್ ಪರೀಕ್ಷೆಯಲ್ಲಿ 81 ನೇ ರ‍್ಯಾಂಕ್ ಗಳಿಸಿದರು. ಅವರು ಈ ಹಿಂದೆ ಬಿಹಾರದ ನಕ್ಸಲ್ ಪೀಡಿತ ಪ್ರದೇಶದಲ್ಲಿಯೂ ಕೆಲಸ ಮಾಡಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮುಗೆ 'ಪೂರ್ ಲೇಡಿ' ಎಂದ ಸೋನಿಯಾ, ಖಂಡಿಸಿದ ರಾಷ್ಟ್ರಪತಿ ಭವನ!
ಪೂನಂ ಗುಪ್ತಾ ಇನ್‌ಸ್ಟಾಗ್ರಾಮ್‌ನಲ್ಲಿಯೂ ಸಹ ತುಂಬಾ ಸಕ್ರಿಯರಾಗಿದ್ದಾರೆ, ಅಲ್ಲಿ ಅವರು ತಮ್ಮ ಸಿಆರ್‌ಪಿಎಫ್ ಸಮವಸ್ತ್ರದಲ್ಲಿ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮಹಿಳಾ ಸಮಸ್ಯೆಗಳು ಮತ್ತು ಸಬಲೀಕರಣದ ಬಗ್ಗೆ ಉತ್ಸಾಹ ಹೊಂದಿರುವ ಅವರು ಆಗಾಗ್ಗೆ ತಮ್ಮ ಪೋಸ್ಟ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತಾರೆ. ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ, ಅವರು ಮುನ್ನಡೆಸುವ ವಿವಿಧ ಅಭಿಯಾನಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ ಮತ್ತು ಅವುಗಳ ಬಗ್ಗೆ ನಿಯಮಿತವಾಗಿ ಅಪ್‌ಡೇಟ್‌ಗಳನ್ನು ಪೋಸ್ಟ್ ಮಾಡುತ್ತಾರೆ.
ಉದಯ್‌ಪುರ ಪ್ಯಾಲೇಸ್‌ಗೆ ರಾಷ್ಟ್ರಪತಿ ಮುರ್ಮು ಭೇಟಿಗೆ ರಾಜಮನೆತನದ ವಿರೋಧ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ