ಕತಾರ್‌, ಒಮಾನ್‌ ಸೇರಿ 5 ದೇಶದ ನಾಯಕರ ಜತೆ ಮೋದಿ ಫೋನ್‌ ಮಾತು

Kannadaprabha News   | Kannada Prabha
Published : Mar 21, 2026, 06:37 AM IST
narendra modi

ಸಾರಾಂಶ

ಮಧ್ಯಪ್ರಾಚ್ಯ ಯುದ್ಧ ತೀವ್ರಗೊಂಡ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಯುದ್ಧಗ್ರಸ್ತ ಕತಾರ್‌, ಜೋರ್ಡಾನ್, ಒಮಾನ್‌ ಸೇರಿದಂತೆ 5 ದೇಶಗಳ ನಾಯಕರೊಂದಿಗೆ ಗುರುವಾರ ಮಾತುಕತೆ ನಡೆಸಿದ್ದಾರೆ.

ನವದೆಹಲಿ: ಮಧ್ಯಪ್ರಾಚ್ಯ ಯುದ್ಧ ತೀವ್ರಗೊಂಡ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಯುದ್ಧಗ್ರಸ್ತ ಕತಾರ್‌, ಜೋರ್ಡಾನ್, ಒಮಾನ್‌ ಸೇರಿದಂತೆ 5 ದೇಶಗಳ ನಾಯಕರೊಂದಿಗೆ ಗುರುವಾರ ಮಾತುಕತೆ ನಡೆಸಿದ್ದಾರೆ.

ಕತಾರ್‌ನ ಅಮೀರ್‌ ಎಚ್.ಎಚ್.ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ, ಜೋರ್ಡಾನ್ ರಾಜ ಅಬ್ದುಲ್ಲಾ II, ಒಮಾನ್‌ನ ಸುಲ್ತಾನ ಹೈತಮ್ ಬಿನ್ ತಾರಿಕ್ ಜೊತೆ ಚರ್ಚಿಸಿ, ಇರಾನ್‌ ದಾಳಿಯನ್ನು ಖಂಡಿಸಿದ್ದಾರೆ. ಪ್ರಸ್ತುತ ಈ ಮೂರೂ ರಾಷ್ಟ್ರಗಳು ಅಮೆರಿಕ ಸ್ನೇಹಿಯಾಗಿರುವ ಕಾರಣ ಇರಾನ್‌ನ ದಾಳಿಗೆ ತುತ್ತಾಗಿವೆ. ಇನ್ನು ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರಾನ್‌ ಹಾಗೂ ಪ್ರಧಾನಿ ಅನ್ವರ್ ಇಬ್ರಾಹಿಂ ಅವರ ಜತೆಗೂ ಮಾತುಕತೆ ನಡೆಸಿರುವ ಮೋದಿ, ಯುದ್ಧ ಹಾಗೂ ವಿವಿಧ ವಿಚಾರಗಳ ಕುರಿತು ಚರ್ಚಿಸಿದ್ದಾರೆ. ಇದು ಫೆ.28ರಂದು ಯುದ್ಧ ಆರಂಭವಾದ ಬಳಿಕ ಕತಾರ್‌, ಜೋರ್ಡಾನ್‌, ಒಮಾನ್‌ ಜೊತೆ ಮೋದಿ ನಡೆಸಿದ 2ನೇ ಮಾತುಕತೆ.

ಇರಾನ್‌ ನೂತನ ನಾಯಕ ಮೊಜ್ತಬಾ ಮೊದಲ ಬಾರಿ ಪ್ರತ್ಯಕ್ಷ, ಶತ್ರು ನಾಶಕ್ಕೆ ಕರೆ

ದುಬೈ: ತಂದೆಯ ಹತ್ಯೆ ಬಳಿಕ ಇರಾನ್‌ನ ಸರ್ವೋಚ್ಚ ನಾಯಕನ ಹುದ್ದೆಗೇರಿ ಹಲವು ದಿನವಾದರೂ ಬಹಿರಂಗವಾಗಿ ಕಾಣಿಸಿಕೊಳ್ಳದೆ ಗೌಪ್ಯವಾಗಿದ್ದ ಮೊಜ್ತಬಾ ಖಮೇನಿಯ ಮೊದಲ ವಿಡಿಯೋ ಬಿಡುಗಡೆಯಾಗಿದೆ. ಇದರಲ್ಲಿ ಅವರು ಧಾರ್ಮಿಕ ಬೋಧನೆ ಮಾಡುತ್ತಿರುವ ದೃಶ್ಯಗಳಿಗೆ. ಅಲಿ ಖಮೇನಿ ಸಾವಿಗೆ ಕಾರಣವಾದ ದಾಳಿಯಲ್ಲೇ ಮೊಜ್ತಬಾ ಕೂಡ ಗಾಯಗೊಂಡಿದ್ದು, ಕಾಲು ಕಳೆದುಕೊಂಡು ಕೋಮಾಗೆ ಜಾರಿದ್ದಾರೆ ಎನ್ನಲಾಗಿತ್ತು. ಅವರು ಮೃತಪಟ್ಟ ಸಾಧ್ಯತೆ ಬಗ್ಗೆಯೂ ಚರ್ಚೆ ಎದ್ದಿತ್ತು. ಇದರ ನಡುವೆಯೇ ಅವರ ವಿಡಿಯೋವೊಂದು ಹೊರಬಿದ್ದಿದ್ದು, ಅದರಲ್ಲವರು, ‘ನಮ್ಮ ಶತ್ರುರಾಷ್ಟ್ರಗಳ ಭದ್ರತೆಯನ್ನು ಕಸಿಯಬೇಕು’ ಎಂದು ಬೆಂಬಲಿಗರಿಗೆ ಕರೆ ನೀಡಿದ್ದಾರೆ.

ಯುದ್ಧ: 3000 ನೌಕೆ, 20000 ನಾವಿಕರು ಅತಂತ್ರ

ನವದೆಹಲಿ: ಇರಾನ್‌ ಯುದ್ಧ ಆರಂಭವಾಗಿ ಮೂರು ವಾರ ಕಳೆದರೂ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಪರಸ್ಪರರ ಮೇಲೆ ಕ್ಷಿಪಣಿ ದಾಳಿ ಮುಂದುವರೆದಿದೆ. ಈ ನಡುವೆ ಪರ್ಷಿಯನ್‌ ಕೊಲ್ಲಿ ಪ್ರದೇಶಗಳಲ್ಲಿ ಇರಾನ್ ದಾಳಿ ಪರಿಣಾಮ 3000 ನೌಕೆಗಳು ಸಿಕ್ಕಿಹಾಕಿಕೊಂಡಿದ್ದು, ಅವುಗಳಲ್ಲಿನ 20000ಕ್ಕೂ ಹೆಚ್ಚು ನಾವಿಕರು ಸಂಕಷ್ಟದಲ್ಲಿದ್ದಾರೆ ಎಂದು ಅಂತಾರಾಷ್ಟ್ರೀಯ ನೌಕಾಯಾನ ಸಂಘಟನೆ ಹೇಳಿದೆ. ಅಲ್ಲದೆ ಈ ನೌಕೆ ಮತ್ತು ಅದರಲ್ಲಿನ ನಾವಿಕರ ಸುರಕ್ಷಿತ ತೆರವಿಗೆ ಕ್ರಮದ ಭರವಸೆ ನೀಡಿದೆ.

ಸಮರ ಪೀಡಿತ ಸೌದಿಯಲ್ಲಿ ಭಾರತೀಯ ವ್ಯಕ್ತಿ ಸಾವು

ರಿಯಾದ್‌: ಸೌದಿ ಅರೇಬಿಯಾ ಮೇಲೆ ಇರಾನ್‌ ದಾಳಿ ತೀವ್ರಗೊಂಡಿರುವ ನಡುವೆಯೇ, ಭಾರತದ ವ್ಯಕ್ತಿಯೊಬ್ಬರು ರಾಜಧಾನಿ ರಿಯಾದ್‌ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ಶುಕ್ರವಾರ ಘೋಷಿಸಿದೆ.ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮಾ.18ರಂದು, ರಿಯಾದ್‌ ಹಾಗೂ ಸುತ್ತಲಿನ ಪ್ರದೇಶದ ಜನರು ಕಟ್ಟೆಚ್ಚರದಿಂದ ಇರುವಂತೆ ರಾಯಭಾರ ಕಚೇರಿ ಸೂಚಿಸಿತ್ತು. ಅದರ ಬೆನ್ನಲ್ಲೇ ಈ ದುರ್ಘಟನೆ ನಡೆದಿದೆ. ಮೃತನ ಕುಟುಂಬಸ್ಥರ ಜತೆ ನಿರಂತರ ಸಂಪರ್ಕದಲ್ಲಿರುವುದಾಗಿಯೂ ಕಚೇರಿ ತಿಳಿಸಿದೆ. ಜತೆಗೆ, ‘ಸರ್ಕಾರದ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಿ. @SaudiDCD ಮತ್ತು ಇತರ ಅಧಿಕೃತ ಸರ್ಕಾರಿ ಚಾನೆಲ್‌ಗಳ ಮೂಲಕ ಹಂಚಿಕೊಂಡ ಮಾಹಿತಿಯನ್ನು ಮಾತ್ರ ಅವಲಂಬಿಸಿ’ ಎಂದು ಮನವಿ ಮಾಡಿದೆ.

ಗೃಹ ಬಳಕೆ ಎಲ್‌ಪಿಜಿ ಆತಂಕ ನಿವಾರಣೆ ದೈನಂದಿನ ಬುಕ್ಕಿಂಗ್‌ 88 ಲಕ್ಷದಿಂದ 55 ಲಕ್ಷಕ್ಕಿಳಿಕೆ

ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ದೇಶದಲ್ಲಿ ಅನಿಲ ಬಿಕ್ಕಟ್ಟು ಮುಂದುವರೆದಿದ್ದರೂ, ಪರಿಸ್ಥಿತಿ ಕಳೆದ ಕೆಲ ದಿನಕ್ಕೆ ಹೋಲಿಸಿದರೆ ಸಹಜಸ್ಥಿತಿಗೆ ಮರಳುತ್ತಿದೆ. ಆದರೆ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಲಭ್ಯತೆಯಲ್ಲಿ ಅನಿಶ್ಚಿತತೆ ಮುಂದುವರೆದಿದೆ. ಮಾ.13ರಂದು ಇದ್ದಕ್ಕಿದ್ದಂತೆ 87.7 ಲಕ್ಷ ಸಿಲಿಂಡರ್‌ಗಳು ಬುಕ್‌ ಆಗಿದ್ದು, ಇದು ಸಾಮಾನ್ಯಕ್ಕಿಂತ (50-55 ಲಕ್ಷ) ಅಧಿಕವಾಗಿತ್ತು. ಬುಧವಾರ 57 ಲಕ್ಷವಿದ್ದ ಈ ಸಂಖ್ಯೆ, ಗುರುವಾರ 55 ಲಕ್ಷಕ್ಕೆ ಇಳಿದಿದೆ. ಜತೆಗೆ, ಸ್ವದೇಶಿ ಇಂಧನ ಉತ್ಪಾದನೆಯನ್ನು ಕಳೆದೆರಡು ವಾರಗಳಲ್ಲಿ ಶೇ.40ರಷ್ಟು ಹೆಚ್ಚಿಸಲಾಗಿದ್ದು, ಪೈಪ್‌ ಮೂಲಕ ಪೂರೈಕೆಯಾಗುವ ಅನಿಕ ಬಳಕೆಯನ್ನೂ ಸರ್ಕಾರ ಉತ್ತೇಜಿಸುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಮರ ಬಿಸಿ : ಪ್ರೀಮಿಯಂ ಪೆಟ್ರೋಲ್‌ ₹2.35 ಏರಿಕೆ
ದೇಶಕ್ಕೆ ಇನ್ನಷ್ಟು ಗ್ಯಾಸ್‌ ಟ್ರಬಲ್ ! ಅನಿಲ ಪೂರೈಕೆ ಇನ್ನು ಸ್ತಬ್ಧ ಸಂಭವ