ಡಿಎಂಕೆ ಸರ್ಕಾರದ ಪತನಕ್ಕೆ ಕ್ಷಣಗಣನೆ, ಚಿನ್ನ ಕಳ್ಳರು ಜೈಲಿಗೆ: ಪ್ರಧಾನಿ ಮೋದಿ ಗುಡುಗು

Published : Jan 24, 2026, 07:05 AM IST
narendra modi

ಸಾರಾಂಶ

ಡಿಎಂಕೆ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಅದರ ಪತನ ನಿಶ್ಚಿತ ಎಂದಿದ್ದಾರೆ. ಕೇರಳದಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ ಮೈತ್ರಿಕೂಟಗಳ ದುರಾಡಳಿತವನ್ನು ಟೀಕಿಸಿದ ಅವರು, ಶಬರಿಮಲೆ ಚಿನ್ನ ಕಳ್ಳರನ್ನು ಜೈಲಿಗಟ್ಟುವುದಾಗಿ 'ಮೋದಿ ಗ್ಯಾರಂಟಿ' ನೀಡಿದ್ದಾರೆ.

ಮಧುರಾಂತಕಂ: ಚುನಾವಣಾ ಹೊಸ್ತಿಲಿನಲ್ಲಿರುವ ತಮಿಳುನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ರಣಕಹಳೆ ಮೊಳಗಿಸಿದ್ದು, ಡಿಎಂಕೆ ವಿರುದ್ಧ ಹರಿಹಾಯ್ದಿದ್ದಾರೆ. ಆಡಳಿತರೂಢ ಡಿಎಂಕೆ ಸಿಎಂಎಸ್‌ ಸರ್ಕಾರ ಅಂದರೆ ಭ್ರಷ್ಟಾಚಾರ, ಮಾಫಿಯಾ, ಅಪರಾಧಗಳನ್ನು ಉತ್ತೇಜಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ತಮಿಳುನಾಡು ಭೇಟಿ ವೇಳೆ ಸ್ಟಾಲಿನ್‌ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ‘ಭ್ರಷ್ಟಾಚಾರ, ಮಾಫಿಯಾ, ಅಪರಾಧಗಳನ್ನು ಉತ್ತೇಜಿಸುವ ಸರ್ಕಾರವನ್ನು ತಮಿಳುನಾಡಿನ ಜನರು ಬೇರು ಸಮೇತ ಕಿತ್ತೆಸೆಯಲು ಬಯಸಿದ್ದಾರೆ. ರಾಜ್ಯದಲ್ಲಿ ಎಷ್ಟು ಭ್ರಷ್ಟಾಚಾರ ನಡೆಯುತ್ತಿದೆ, ಹಣ ಯಾರ ಜೇಬಿಗೆ ತಲುಪುತ್ತಿದೆ ಎನ್ನುವುದು ಸಣ್ಣ ಮಗುವಿಗೂ ತಿಳಿದಿದೆ. ರಾಜ್ಯವು ಡಿಎಂಕೆ ದುರಾಡಳಿತದಿಂದ ಮುಕ್ತವಾಗಲು ಬಯಸುತ್ತದೆ. ಬಿಜೆಪಿ ನೇತೃತ್ವದ ಎನ್‌ಡಿಎಯ ಉತ್ತಮ ಆಡಳಿತ ನೋಡಲು ಬಯಸುತ್ತಿದೆ. ಕೌಂಟ್‌ಡೌನ್‌ ಆರಂಭವಾಗಿದೆ. ತಮಿಳುನಾಡನ್ನು ಡಿಎಂಕೆ ಹಿಡಿತದಿಂದ ಮುಕ್ತಗೊಳಿಸಬೇಕು. ತಮಿಳುನಾಡಿನ ಅಭಿವೃದ್ಧಿಗೆ ಕೇಂದ್ರದೊಂದಿಗೆ ಭುಜಕ್ಕೆ ಭುಜ ನೀಡುವ ಡಬಲ್‌ ಎಂಜಿನ್‌ ಸರ್ಕಾಕ್ಕಾಗಿ ಹೋರಾಡಬೇಕು. ರಾಜ್ಯದಲ್ಲಿ ಡಿಎಂಕೆ ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ’ ಎಂದರು.

ಇದೇ ವೇಳೆ ಪ್ರಧಾನಿ ತಿರುಪ್ಪರಕುಂದ್ರಂ ಮುರುಗನ್‌ ದೇವಸ್ಥಾನದ ಕಾರ್ತಿಕ ದೀಪ ಬೆಳಗಿಸುವ ವಿವಾದದ ಕುರಿತು ಕಿಡಿಕಾರಿ, ‘ನಮ್ಮ ನಾಯಕರು ಭಕ್ತರ ಹಕ್ಕುಗಳ ಪರವಾಗಿ ನಿಂತರು. ಆದರೆ ಡಿಎಂಕೆಯವರು ಮತ ಬ್ಯಾಂಕ್‌ ರಾಜಕೀಯ ಮಾಡಿದರು. ನ್ಯಾಯಾಲಯವನ್ನು ಸಹ ಬಿಡಲಿಲ್ಲ. ಡಿಎಂಕೆ ಸರ್ಕಾರಕ್ಕೆ ಪ್ರಜಾಪ್ರಭುತ್ವ ಸಂಬಂಧವಿಲ್ಲ. ಕೇವಲ ಒಂದು ಕುಟುಂಬಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ’ ಎಂದರು.

ಶಬರಿಮಲೆ ಚಿನ್ನ ಕಳ್ಳರು ಜೈಲಿಗೆ: ಇದು ಮೋದಿ ಗ್ಯಾರಂಟಿ

ಕೊಚ್ಚಿ: ಕೇರಳದಲ್ಲಿ ಬದಲಾವಣೆಯ ಸನ್ನಿಹಿತವಾಗಿದೆ. ರಾಜ್ಯದಲ್ಲಿ ಈವರೆಗೆ ಅಧಿಕಾರ ನಡೆಸಿರುವ ಎಡಪಕ್ಷಗಳ ನೇತೃತ್ವದ ಎಲ್‌ಡಿಎಫ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮೈತ್ರಿಕೂಟ ಭಾರೀ ಭ್ರಷ್ಟಾಚಾರ ನಡೆಸಿವೆ. ಬಿಜೆಪಿಯೇನಾದರೂ ಅಧಿಕಾರಕ್ಕೆ ಬಂದರೆ ಕೇರಳದ ಲೂಟಿಕೋರರಿಂದ ಪೈಸೆ ಪೈಸೆಯನ್ನೂ ವಸೂಲಿ ಮಾಡಲಾಗುವುದು. ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದ ಚಿನ್ನಕ್ಕೆ ಕನ್ನಹಾಕಿದವರನ್ನು ಜೈಲಿಗಟ್ಟಲಾಗುವುದು. ಇದು ಮೋದಿ ಗ್ಯಾರಂಟಿ!

ಸದ್ಯದಲ್ಲೇ ವಿಧಾನಸಭೆ ಚುನಾವಣೆ ಎದುರಿಸಲಿರುವ ಕೇರಳದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಗುಡುಗಿದ್ದು ಹೀಗೆ.

ಎಡಪಕ್ಷಗಳ ನೇತೃತ್ವದ ಎಲ್‌ಡಿಎಫ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮೈತ್ರಿಕೂಟದ ವಿರುದ್ಧ ತೀವ್ರ ಹರಿಹಾಯ್ದ ಅವರು, ಕೇರಳದ ಅಭಿವೃದ್ಧಿ ಎನ್‌ಡಿಎ ಮೈತ್ರಿಕೂಟದ ಡಬಲ್‌ ಎಂಜಿನ್‌ ಸರ್ಕಾರದಿಂದ ಮಾತ್ರ ಸಾಧ್ಯ ಎಂದರು.

ಕಾಂಗ್ರೆಸ್‌ ಮತ್ತು ಎಡಪಕ್ಷಗಳ ಒಕ್ಕೂಟಗಳ ಬಾವುಟ, ಚಿಹ್ನೆ ಬೇರೆ ಬೇರೆ ಇರಬಹುದು. ಆದರೆ ಅವುಗಳ ಅಜೆಂಡಾ ಮಾತ್ರ ಒಂದೇ. ಅವರು ಭ್ರಷ್ಟಾಚಾರ ಮತ್ತು ಓಲೈಕೆ ರಾಜಕಾರಣದಲ್ಲಿ ಮುಳುಗಿದ್ದಾರೆ. ತ್ರಿಪುರಾ ಮತ್ತು ಪಶ್ಚಿಮ ಬಂಗಾಳದಿಂದ ಎಡಪಕ್ಷಗಳು ನಿರ್ನಾಮವಾದರೂ ಕೇರಳದಲ್ಲಿ ಮಾತ್ರ ಎಲ್‌ಡಿಎಫ್‌-ಯುಡಿಎಫ್‌ನ ಹೊಂದಾಣಿಕೆ ರಾಜಕಾರಣದಿಂದ ಇನ್ನೂ ಅಸ್ವಿತ್ವ ಉಳಿಸಿಕೊಂಡಿವೆ. ಈ ಎರಡೂ ಪಕ್ಷಗಳ ಆಡಳಿತವನ್ನು ನೋಡಿರುವ ಜನರಿಗೆ ಮೂರನೇ ಆಯ್ಕೆಯಾದ ಎನ್‌ಡಿಎಯತ್ತ ತಿರುಗಿ ನೋಡಲು ಇದು ಸಕಾಲ. ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಕೇರಳದ ನಿರ್ಮಾಣಕ್ಕಾಗಿ ಬಿಜೆಪಿಗೆ ಪೂರ್ಣಪ್ರಮಾಣದ ಬಹುಮತ ಬೇಕಿದೆ. ಕೇರಳದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ತರಲು ಇದು ಸರಿಯಾದ ಸಮಯ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ ವಿರುದ್ಧ ಕಿಡಿ

ಕಾಂಗ್ರೆಸ್‌ ಪಕ್ಷಕ್ಕೆ ಅಭಿವೃದ್ಧಿಯ ಅಜೆಂಡಾ ಇಲ್ಲ. ಅವರು ಮಾವೋವಾದಿಗಳಿಗಿಂತಲೂ ಹೆಚ್ಚು ಕಮ್ಯುನಿಸ್ಟರು ಹಾಗೂ ಮುಸ್ಲಿಂಲೀಗ್‌ಗಿಂತಲೂ ಹೆಚ್ಚು ಕೋಮುವಾದಿಗಳಾಗಿ ಬದಲಾಗುತ್ತಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್‌ ಅನ್ನು ದೇಶಾದ್ಯಂತ ‘ಎಂಎಎಂಸಿ’(ಮುಸ್ಲಿಂ ಲೀಗ್‌ ಮಾವೋವಾದಿ ಕಾಂಗ್ರೆಸ್‌) ಎಂದು ಕರೆಯಲಾಗುತ್ತದೆ. ಇಂಥ ಕಾಂಗ್ರೆಸ್ಸಿಗರ ಬಗ್ಗೆ ಎಚ್ಚರಿರದಿಂದಿರುವುದು ಒಳಿತು. ಅವರು ಕೇರಳವನ್ನು ಪ್ರಯೋಗ ಶಾಲೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಕೇರಳದಲ್ಲಿ ಕಾಂಗ್ರೆಸ್‌ ಮೂಲಭೂತವಾದಿ ಶಕ್ತಿಗಳಿಗೆ ನೇರವಾಗಿ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.

ಶಬರಿಮನೆ ಚಿನ್ನಕಳವು ಪ್ರಸ್ತಾಪ

ಇದೇ ವೇಳೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಚಿನ್ನ ಕಳ್ಳತನ ಪ್ರಕರಣವನ್ನೂ ಪ್ರಸ್ತಾಪಿಸಿದ ಮೋದಿ, ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಮಾತ್ರ ದೇವಸ್ಥಾನಗಳು ಮತ್ತು ನಂಬಿಕೆಗಳಿಗೆ ರಕ್ಷಣೆ ನೀಡಲು ಸಾಧ್ಯ. ಬಿಜೆಪಿಯು ಕೇರಳದಲ್ಲಿ ಅಧಿಕಾರಕ್ಕೆ ಬಂದರೆ ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಭಾಗಿಯಾದವರನ್ನೆಲ್ಲ ಜೈಲಿಗಟ್ಟಲಾಗುವುದು. ಇದು ಮೋದಿಯ ಗ್ಯಾರಂಟಿ ಎಂದರು.

ತಿರುವನಂತರ ಪಾಲಿಕೆ ಜಯ ಗುಜರಾತ್‌ಗೆ ಹೋಲಿಕೆ

ತಿರುವನಂತಪುರ ಕಾರ್ಪೊರೇಷನ್‌ನಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ಯಶಸ್ವಿಯಾಗಿದ್ದನ್ನು ಗುಜರಾತ್‌ನಲ್ಲಿ ಬಿಜೆಪಿಗೆ ಸಿಕ್ಕ ಮೊದಲ ಗೆಲುವಿಗೆ ಹೋಲಿಕೆ ಮಾಡಿದ ಮೋದಿ, ತಿರುವನಂತಪುರದ ರೀತಿಯಲ್ಲೇ 1987ರಲ್ಲಿ ಮೊದಲ ಬಾರಿ ಅಹಮದಾಬಾದ್‌ ಮುನ್ಸಿಪಲ್‌ ಕಾರ್ಪೊರೇಷನ್‌ನಲ್ಲಿ ಪಕ್ಷ ಗೆಲುವು ಸಾಧಿಸಿತ್ತು. ಆ ಬಳಿಕ ಇಡೀ ರಾಜ್ಯದ ಅಧಿಕಾರ ಜನ ನಮ್ಮ ಕೈಗೆ ನೀಡಿದರು. ಗುಜರಾತ್‌ನಲ್ಲೂ ನಮ್ಮ ಪ್ರಯಾಣ ಒಂದು ನಗರದಿಂದಲೇ ಶುರುವಾಗಿದ್ದು, ಅದೇ ರೀತಿ ಕೇರಳದಲ್ಲೂ ನಮ್ಮ ಪ್ರಯಾಣ ಒಂದು ನಗರದಿಂದ ಆರಂಭವಾಗಿದೆ. ತಿರುವನಂತಪುರ ಇಡೀ ದೇಶಕ್ಕೆ ಮಾದರಿ ನಗರವಾಗಿ ಪರಿವರ್ತನೆ ಮಾಡಲಾಗುವುದು. ಇದಕ್ಕಾಗಿ ನಾನು ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಡಿಎಂಕೆ ಸರ್ಕಾರದ ಪತನಕ್ಕೆ ಕ್ಷಣಗಣನೆ, ಚಿನ್ನ ಕಳ್ಳರು ಜೈಲಿಗೆ - ಪ್ರಧಾನಿ ಮೋದಿ ಗುಡುಗು
Instagram ಸ್ನೇಹಕ್ಕೆ ಬಲಿಯಾದ ಅಪ್ರಾಪ್ತೆ: ಪೋಷಕರಿಲ್ಲದ ವೇಳೆ ಮನೆಗೆ ನುಗ್ಗಿದ ಕಾಮುಕ, ಮುಂದೆ ನಡೆದಿದ್ದೇನು ನೋಡಿ!