ವಿಶ್ವದ ಅತಿದೊಡ್ಡ ಲಸಿಕೆ ಆಂದೋಲನಕ್ಕೆ ಮೋದಿ ಚಾಲನೆ: 3 ಕೋಟಿ ಜನರಿಗೆ ಕೊರೋನಾ ವ್ಯಾಕ್ಸಿನ್‌

By Kannadaprabha NewsFirst Published Jan 15, 2021, 7:28 AM IST
Highlights

ವಿಶ್ವದ ಅತಿದೊಡ್ಡ ಲಸಿಕೆ ಆಂದೋಲನಕ್ಕೆ ಮೋದಿ ಚಾಲನೆ | ಮೊದಲ ದಿನ 3 ಲಕ್ಷ ಆರೋಗ್ಯ ಸಿಬ್ಬಂದಿಗೆ ಲಸಿಕೆ ವಿತರಣೆ

ನವದೆಹಲಿ(ಜ.15): ಕಳೆದೊಂದು ವರ್ಷದಿಂದ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೋನಾ ವೈರಸ್‌ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಭಾರತ ಅಣಿಯಾಗಿದ್ದು, ಶನಿವಾರದಿಂದ ಲಸಿಕೆ ವಿತರಣೆ ಅಭಿಯಾನವನ್ನು ಪ್ರಾರಂಭಿಸಲಿದೆ. ಆರಂಭಿಕ ಹಂತದಲ್ಲಿ 3 ಕೋಟಿ ಜನರಿಗೆ ಭಾರತ ಲಸಿಕೆ ನೀಡಲು ಉದ್ದೇಶಿಸಿದ್ದು, ಇದನ್ನು ಜಗತ್ತಿನ ಅತಿದೊಡ್ಡ ಲಸಿಕಾ ಅಭಿಯಾನ ಎಂದು ಬಣ್ಣಿಸಲಾಗಿದೆ. ಶನಿವಾರ ಬೆಳಗ್ಗೆ 10.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕೆ ವಿತರಣೆಗೆ ದೆಹಲಿಯಿಂದ ಚಾಲನೆ ನೀಡಲಿದ್ದಾರೆ.

"

ಇದೇ ವೇಳೆ, ಲಸಿಕೆ ಸಾಗಣೆ ಹಾಗೂ ವಿತರಣೆಯ ಮೇಲೆ ಕ್ಷಣಕ್ಷಣಕ್ಕೂ ನಿಗಾ ವಹಿಸಲು ಅಭಿವೃದ್ಧಿಪಡಿಸಲಾಗಿರುವ ಡಿಜಿಟಲ್‌ ವೇದಿಕೆ ಕೋ-ವಿನ್‌ ಆ್ಯಪ್‌ ಕೂಡ ಅವರು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಿದ್ದಾರೆ. ದೇಶಾದ್ಯಂತ ಇರುವ 3006 ಲಸಿಕಾ ಕೇಂದ್ರಗಳಲ್ಲಿ ಪ್ರಧಾನಿ ಮೋದಿ ಅವರ ವಿಡಿಯೋ ಸಂವಾದದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದಾದ ನಂತರ ಲಸಿಕೆ ಪಡೆಯಲಿರುವ ಆರೋಗ್ಯ ಕಾರ್ಯಕರ್ತರ ಜತೆ ಮೋದಿ ವಿಡಿಯೋ ಸಂವಾದ ನಡೆಸಲಿದ್ದಾರೆ.

ಲಸಿಕೆ ವಿತರಣೆಯ ಮೊದಲ ದಿನವಾದ ಶನಿವಾರ 3006 ಲಸಿಕಾ ಕೇಂದ್ರಗಳಲ್ಲಿ ಈಗಾಗಲೇ ಅಂತಿಮಗೊಳಿಸಲಾಗಿರುವ ಫಲಾನುಭವಿಗಳಿಗೆ ಲಸಿಕೆ ನೀಡಲಾಗುತ್ತದೆ. 3 ಲಕ್ಷ ಆರೋಗ್ಯ ಕಾರ್ಯಕರ್ತರು ಮೊದಲ ದಿನ ಲಸಿಕೆ ಸ್ವೀಕರಿಸಲಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅಮಿತ್‌ ಶಾ ಒಪ್ಪಿಗೆ ನೀಡಿದರೆ ಹಲವು ಸಚಿವರ ಖಾತೆ ಬದಲಾವಣೆ ಸಾಧ್ಯತೆ

ಲಸಿಕೆ ವಿತರಣೆಗೆ ಪೂರ್ವಭಾವಿಯಾಗಿ ಈಗಾಗಲೇ ಕೇಂದ್ರ ಸರ್ಕಾರ 1.65 ಕೋಟಿ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ ಲಸಿಕೆಗಳನ್ನು ಖರೀದಿಸಿ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅವುಗಳ ಆರೋಗ್ಯ ಕಾರ್ಯಕರ್ತರ ಅನುಪಾತದ ಮೇಲೆ ಹಂಚಿಕೆ ಮಾಡಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟುಲಸಿಕೆಯನ್ನು ಖರೀದಿಸಿ ಪೂರೈಕೆ ಮಾಡಲಿದೆ. ಹೀಗಾಗಿ ಲಸಿಕೆ ಹಂಚಿಕೆ ಪ್ರಕ್ರಿಯೆಯಲ್ಲಿ ತಾರತಮ್ಯದ ಪ್ರಶ್ನೆಯೇ ಇಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿ ಸೆಷನ್‌ನಲ್ಲೂ 100 ಮಂದಿಗೆ ಲಸಿಕೆ ವಿತರಿಸಲಾಗುತ್ತದೆ. ಈ ಅಭಿಯಾನದ ವೇಳೆ ಶೇ.10ರಷ್ಟುಲಸಿಕೆಗಳು ವ್ಯರ್ಥವಾಗಬಹುದು ಎಂದು ಅಂದಾಜಿಸಲಾಗಿದೆ. ಹಂತಹಂತವಾಗಿ ಲಸಿಕೆ ನೀಡುವ ಸಂಖ್ಯೆಯನ್ನು ಹೆಚ್ಚಳ ಮಾಡಲು ಉದ್ದೇಶಿಸಲಾಗಿದೆ.

"

ಮೊದಲ ಹಂತದಲ್ಲಿ 1 ಕೋಟಿ ಆರೋಗ್ಯ ಕಾರ್ಯಕರ್ತರು, 2 ಕೋಟಿ ಮುಂಚೂಣಿ ನೌಕರರಿಗೆ ಲಸಿಕೆ ನೀಡಲಾಗುತ್ತದೆ. ನಂತರದ ದಿನಗಳಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಹಾಗೂ 50 ವರ್ಷದೊಳಗಿನ ವಿವಿಧ ಆರೋಗ್ಯ ಸಮಸ್ಯೆ ಉಳ್ಳವರಿಗೆ ಲಸಿಕೆ ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಸಿಬ್ಬಂದಿಯ ಲಸಿಕೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.

  • 3006 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ವಿತರಣೆ
  • 1.65 ಕೋಟಿ ಸರ್ಕಾರ ಈವರೆಗೆ ಖರೀದಿಸಿರುವ ಲಸಿಕೆ
  • 100 ಪ್ರತಿ ಕೇಂದ್ರದಲ್ಲಿ 1 ದಿನಕ್ಕೆ ನೀಡುವ ಲಸಿಕೆ
  • 12000 ಲಸಿಕಾ ಕೇಂದ್ರಗಳು ಶೀಘ್ರದಲ್ಲೇ ಆರಂಭ
  • 210 ರು. ಒಂದು ಲಸಿಕೆಗೆ ಸರ್ಕಾರ ಮಾಡುವ ವೆಚ್ಚ
click me!