ಹಿಮಕುಸಿತದ ಸ್ಥಳದಲ್ಲಿ ಕೃತಕ ಸರೋವರ ಸೃಷ್ಟಿ!

By Kannadaprabha NewsFirst Published Feb 13, 2021, 8:01 AM IST
Highlights

ಹಿಮಕುಸಿತದ ಸ್ಥಳದಲ್ಲಿ ಕೃತಕ ಸರೋವರ ಸೃಷ್ಟಿ| ಇದರಿಂದ ಮತ್ತಷ್ಟು ಪ್ರವಾಹದ ಆತಂಕ| ಸ್ಥಳಕ್ಕೆ ಎಂಡಿಆರ್‌ಎಫ್‌ ತಂಡಗಳ ಡೌಡು

ನವದೆಹಲಿ(ಫೆ.13): ಉತ್ತರಾಖಂಡದ ಚಮೋಲಿಯಲ್ಲಿ ಹಿಮಕುಸಿತ ಸಂಭವಿಸಿದ ಸ್ಥಳದಲ್ಲಿ ಅವಶೇಷಗಳಿಂದಾಗಿ ಅಪಾಯಕಾರಿ ಸರೋವರವೊಂದು ನಿರ್ಮಾಣ ಆಗಿರುವುದು ಉಪಗ್ರಹ ಚಿತ್ರವೊಂದರಲ್ಲಿ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಇನ್ನೊಂದು ಸಂಭವನೀಯ ದುರಂತವನ್ನು ತಪ್ಪಿಸುವ ನಿಟ್ಟಿನಿಂದ ಡಿಆರ್‌ಡಿಒ, ಎನ್‌ಡಿಆರ್‌ಎಫ್‌ನ ವಿಜ್ಞಾನಿಗಳು ಹಾಗೂ ಇತರ ರಕ್ಷಣಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಟೀವಿ ವಾಹಿನಿಯೊಂದು ವರದಿ ಮಾಡಿದೆ.

ಅತಿ ವೇಗವಾಗಿ ಹರಿಯುವ ರೋಂತಿ ನದಿಯಿಂದ ರಿಷಿಗಂಗಾ ನದಿಯ ಮಾರ್ಗದಲ್ಲಿ ಕಲ್ಲು ಮಣ್ಣುಗಳು ಶೇಖರಣೆಗೊಂಡು ತಡೆಗೋಡೆ ನಿರ್ಮಾಣ ಆಗಿರುವುದು ಉಪಗ್ರಹ ಚಿತ್ರದಲ್ಲಿ ಸೆರೆಯಾಗಿದೆ. ಈ ತಡೆಗೋಡೆಯಿಂದಾಗಿ ನದಿಯು ಪಥ ಬದಲಿಸಿ ಎಲ್ಲೆಂದರಲ್ಲಿ ಹರಿಯಬಹುದು ಎಂಬ ಆತಂಕ ಉಂಟಾಗಿದೆ.

ರಿಷಿಗಂಗಾ ನದಿಯ ಪ್ರವಾಹದಿಂದಾಗಿ ತಪೋವನ ಜಲವಿದ್ಯುತ್‌ ಸ್ಥಾವರಕ್ಕೆ ಭಾರೀ ಹಾನಿ ಸಂಭವಿಸಿತ್ತು.

ಕೃತಕ ಸರೋವರ ಸೃಷ್ಟಿಯಾದ ಸ್ಥಳಕ್ಕೆ ತಂಡಗಳನ್ನು ಈಗಾಗಲೇ ಕಳುಹಿಸಿಕೊಡಲಾಗಿದ್ದು, ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ. ಈ ಕಾರ್ಯಕ್ಕೆ ಡ್ರೋನ್‌ಗಳನ್ನು ಕೂಡ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಎನ್‌ಡಿಆರ್‌ಎಫ್‌ ಪ್ರಧಾನ ನಿರ್ದೇಶಕ ಎಸ್‌ಎನ್‌ ಪ್ರಧಾನ್‌ ಮಾಹಿತಿ ನೀಡಿದ್ದಾರೆ. ಹೆಲಿಕಾಪ್ಟರ್‌ಗಳ ಮೂಲಕ ತೆರಳಿ ಕೃತಕ ಸರೋವರ ಸೃಷ್ಟಿಯಾದ ಜಾಗದ ವಿಡಿಯೋವನ್ನು ಚಿತ್ರೀಕರಿಸಲಾಗಿದ್ದು, ಫುಟ್ಬಾಲ್‌ ಮೈದಾನಕ್ಕಿಂತಲೂ ಮೂರು ಪಟ್ಟು ದೊಡ್ಡದಾಗಿರುವುದು ಕಂಡುಬಂದಿದೆ.

click me!