* ರಾಜ್ಯದಲ್ಲಿ ದಿನೇ ದಿನೇ ಏರುತ್ತಿದೆ ಕೊರೋನಾ ಪ್ರಕರಣಗಳ ಸಂಖ್ಯೆ
* ಕೊರೋನಾ ನಿರ್ವಹಣೆಗೆ ರಾಜ್ಯಗಳೇನು ಮಾಡುತ್ತಿವೆ
* ರಾಜ್ಯಗಳ ಪರಿಸ್ಥಿತಿ ಅವಲೋಕಿಸಲು ಸಿಎಂಗಳಿಗೆ ಮೋದಿ ಕರೆ
ಬೆಂಗಳೂರು(ಮೇ.09): ದೇಶಾದ್ಯಂತ ಕೊರೋನಾ ಹಾವಳಿ ಮಿತಿ ಮೀರಿದೆ. ಕರ್ನಾಟಕದಲ್ಲೂ ಪರಿಸ್ಥಿತಿ ಬಿಗಡಾಯಿಸಿದ್ದು, ಕೊರೋನಾ ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಹೀಗಿರುವಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರ್ನಾಟಕ, ಪಂಜಾಬ್, ಬಿಹಾರ ಹಾಗೂ ಉತ್ತರಾಖಂಡ್ ಸಿಎಂಗಳ ಜೊತೆ ಚರ್ಚೆ ನಡೆಸಿ ರಾಜ್ಯದಲ್ಲಿರುವ ಪರಿಸ್ಥಿತಿ ಅವಲೋಕಿಸಿದ್ದಾರೆ.
ಹೌದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದಲ್ಲಿ ಎರಡನೇ ಅಲೆ ದಾಳಿ ಇಟ್ಟಾಗಿನಿಂದ ರಾಜ್ಯ ಮುಖ್ಯಮಂತ್ರಿಗಳೊಡನೆ ನಿರಂತರ ಸಂಪರ್ಕದಲ್ಲಿದ್ದಾರೆ. ರಾಜ್ಯದ ಸ್ಥಿತಿಗತಿಗಳನ್ನು ತಿಳಿದುಕೊಳ್ಳುತ್ತಿರುವ ಪ್ರಧಾನಿ ಮೋದಿ ಇದರ ತಡೆಗೆ ತಮ್ಮ ಸಲಹೆಯನ್ನೂ ನೀಡುತ್ತಿದ್ದಾರೆ. ರಾಜ್ಯದಲ್ಲಿ ಕೊರೋನಾದಿಂದಾಗಿ ಜನ ಸಾಮಾನ್ಯರ ಪರಿಸ್ಥಿತಿ ಬಹಳ ಹದಗೆಟ್ಟಿದೆ. ಹೀಗಿರುವಾಗ ಪ್ರಧಾನ ಮಂತ್ರಿಯ ಈ ಕರೆ ಬಹಳ ಮಹತ್ವ ಪಡೆದುಕೊಂಡಿದೆ.
undefined
ಇನ್ನು ಕರ್ನಾಟಕದಲ್ಲಿ ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ 47,563 ಕೊರೋನಾ ಪ್ರಕರಣಗಳು ದಾಖಲಾಗಿದ್ದು, 482 ಮಂದಿ ಮೃತಪಟ್ಟಿದ್ದರು. ಸದ್ಯ ಕೊರೋನಾ ನಿಯಂತ್ರಣಕ್ಕೆ ನಾಳೆ, ಮೇ 10 ರಿಂದ 24ರವರೆಗೆ ರಾಜ್ಯಾದ್ಯಂತ ಸೆಮಿ ಲಾಕ್ಡೌನ್ ಘೋಷಿಸಲಾಗಿದೆ.
ನಿನ್ನೆಯಷ್ಟೇ ಪ್ರಧಾನಿ ಮೋದಿ ಮಹಾರಾಷ್ಟ್ರ, ತಮಿಳುನಾಡು ಹಾಗೂ ಮಧ್ಯಪ್ರದೇಶ ಸಿಎಂಗಳಿಗೆ ಕರೆ ಮಾಡಿ ಸಮಾಲೋಚನೆ ನಡೆಸಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona