
ಪಣಜಿ(ಸೆ.19): ತಮ್ಮ ಜನ್ಮದಿನ (ಸೆ.17) ದೇಶದಲ್ಲಿ ಲಸಿಕೆ ಅಭಿಯಾನಕ್ಕೆ ಅಭೂಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಇದರಿಂದ ರಾಜಕೀಯ ಪಕ್ಷವೊಂದು ಜ್ವರ ಬಂದಂತೆ ಆಡುತ್ತಿದೆ. ಆ ಪಕ್ಷದ ನಾಯಕರು ರಾತ್ರೋರಾತ್ರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಚಾಟಿ ಬೀಸಿದ್ದಾರೆ.
ಗೋವಾದ ಆರೋಗ್ಯ ಕಾರ‍್ಯಕರ್ತರು ಮತ್ತು ಲಸಿಕೆ ಫಲಾನುಭವಿಗಳ ಜತೆ ಶನಿವಾರ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಮಾತನಾಡಿದ ಮೋದಿ ಅವರು, ‘ನಾನು ನನ್ನ ಮನದ ಮಾತುಗಳನ್ನು ಹೇಳಲು ಬಯಸುತ್ತೇನೆ. ಅದೆಷ್ಟೋ ಜನ್ಮದಿನಗಳು ಬಂದು ಹೋಗಿವೆ. ನಾನು ಜನ್ಮದಿನವನ್ನು ಆಚರಿಸಿಕೊಳ್ಳುವುದರಿಂದ ದೂರವೇ ಉಳಿದ್ದೇನೆ. ಆದರೆ, ನನ್ನ ಇಡೀ ಜೀವನದಲ್ಲಿ ಶುಕ್ರವಾರ ಭಾವನಾತ್ಮಕ ದಿನವಾಗಿತ್ತು. ವೈದ್ಯಕೀಯ ಸಿಬ್ಬಂದಿ ಕಳೆದ ಒಂದೂವರೆ ವರ್ಷಗಳಿಂದ ಲಸಿಕೆ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಶುಕ್ರವಾರ ನಡೆದ ಬಹುದೊಡ್ಡ ಸಂಗತಿಯೇನೆಂದರೆ 2.5 ಕೋಟಿ ಮಂದಿ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಲಸಿಕೆಯ ಒಂದು ಡೋಸ್ ಒಂದು ಜೀವ ಉಳಿಸಲಿದೆ. ಹೀಗಾಗಿ ಇದೊಂದು ಭಾವನಾತ್ಮಕ ಮತ್ತು ಎಂದೂ ಮರೆಯಲಾಗದ ಕ್ಷಣ. ಇದು ನನ್ನನ್ನು ವಿನೀತನನ್ನಾಗಿ ಮಾಡಿದೆ. ನನಗೆ ಹಲವು ಹುಟ್ಟುಹಬ್ಬಗಳು ಬಂದು ಹೋಗಿವೆ. ಆದರೆ ನಿನ್ನೆ(ಶುಕ್ರವಾರ)ಯ ಜನ್ಮದಿನ ಮಾತ್ರ ಜೀವನದಲ್ಲೇ ಭಾವನಾತ್ಮಕವಾಗಿತ್ತು’ ಎಂದು ಹೇಳಿದರು.
ಗೋವಾ ಆರೋಗ್ಯ ಕಾರ್ಯಕರ್ತರು, ಫಲಾನುಭವಿಗಳ ಜೊತೆ ಮೋದಿ ಸಂವಾದ!
ಇದೇ ವೇಳೆ ಲಸಿಕೆ ಶುಕ್ರವಾರ ನಡೆದ ಅಭಿಯಾನದ ಕುತೂಹಲಕರ ಮಾಹಿತಿ ನೀಡಿದ ಅವರು, ಪ್ರತೀ ಗಂಟೆಗೆ 15 ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ. ಅಂದರೆ ಪ್ರತೀ ನಿಮಿಷಕ್ಕೆ 26 ಸಾವಿರ ಮತ್ತು ಪ್ರತೀ ಸೆಕೆಂಡಿಗೆ 415ರಷ್ಟುಡೋಸ್‌ಗಳನ್ನು ನೀಡಲಾಗಿದೆ. ದೇಶದ 1 ಲಕ್ಷಕ್ಕೂ ಹೆಚ್ಚು ಲಸಿಕಾ ಕೇಂದ್ರಗಳಲ್ಲಿ ಇದ್ದ ಕೌಶಲ್ಯದ ಸಿಬ್ಬಂದಿ ಇದರಲ್ಲಿ ಭಾಗಿಯಾಗಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ದೇಶದ ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲು ಪ್ರವಾಸಿ ತಾಣಗಳನ್ನು ಒಳಗೊಂಡ ಹಿಮಾಚಲ ಪ್ರದೇಶ, ಸಿಕ್ಕಿಂ ಮತ್ತು ಗೋವಾದಂಥ ರಾಜ್ಯಗಳಲ್ಲಿ ಲಸಿಕೆ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಈ ರಾಜ್ಯಗಳ ಹೋಟೆಲ್ ಉದ್ಯಮಗಳು, ಟ್ಯಾಕ್ಸಿ ಚಾಲಕರು, ವಿತರಕರು ಮತ್ತು ಅಂಗಡಿ ಮಾಲಿಕರು ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದರೆ, ಈ ಸ್ಥಳಗಳಿಗೆ ಬರುವ ಪ್ರವಾಸಿಗರು ತಾವು ಸುರಕ್ಷಿತ ಎಂಬ ಭಾವನೆ ಮೂಡಲಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ