
ನವದೆಹಲಿ(ಸೆ.18): ರಾಜ್ಯದ ಎಲ್ಲಾ ಅರ್ಹ ವಯಸ್ಕ ಜನತೆಗೆ ಮೊದಲ ಡೋಸ್ ಲಸಿಕೆ ನೀಡಿಕೆಯನ್ನು ಶೇ.100ರಷ್ಟು ಪೂರ್ಣಗೊಳಿಸಿದ ಗೋವಾ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಗೋವಾ ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್ ಲಸಿಕೆ ಕಾರ್ಯಕ್ರಮದ ಫಲಾನುಭವಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಮೋದಿ, ಗೋವಾ ಪ್ರತಿ ಸಾಧನೆ ಹೆಚ್ಚು ಸಂತಸ ತಂದಿದೆ ಎಂದಿದ್ದಾರೆ.
ಮೆಘಾ ವ್ಯಾಕ್ಸಿನೇಶನ್: ಒಂದೇ ದಿನ 2 ಕೋಟಿ ಲಸಿಕೆ ಡೋಸ್ ಮೂಲಕ ಯೂರೋಪ್ ಹಿಂದಿಕ್ಕಿದ ಭಾರತ!
ಗಣೇಶ ಹಬ್ಬದ ಸಂದರ್ಭದಲ್ಲಿ ಗೋವಾ ಪ್ರತಿಯೊಬ್ಬ ಅರ್ಹ ವ್ಯಕ್ತಿಗೆ ಕನಿಷ್ಠ 1 ಡೋಸ್ ಲಸಿಕೆ ನೀಡುವ ಮೂಲಕ ಭಾರತದ ಕೊರೋನಾ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಶಕ್ತಿ ನೀಡಿದೆ. ʻಎಕ್ ಭಾರತ್ -ಶ್ರೇಷ್ಠ್ ಭಾರತ್ʼ ಪರಿಕಲ್ಪನೆಯನ್ನು ಪ್ರತಿಬಿಂಬಿಸುವ ಗೋವಾದ ಪ್ರತಿಯೊಂದು ಸಾಧನೆಯೂ ನನಗೆ ಸಂತಸ ತಂದಿದೆ ಎಂದು ಮೋದಿ ಹೇಳಿದರು.
ಕಳೆದ ಕೆಲವು ತಿಂಗಳಲ್ಲಿ ಭಾರಿ ಮಳೆ, ಚಂಡಮಾರುತ, ಪ್ರವಾಹದಂತಹ ನೈಸರ್ಗಿಕ ವಿಪತ್ತುಗಳೊಂದಿಗೆ ಗೋವಾ ದಿಟ್ಟವಾಗಿ ಹೋರಾಡಿದೆ . ಈ ನೈಸರ್ಗಿಕ ವಿಪತ್ತುಗಳ ನಡುವೆ ಕೊರೊನಾ ಲಸಿಕೆಯ ವೇಗವನ್ನು ಕಾಯ್ದುಕೊಂಡಿದ್ದಕ್ಕಾಗಿ ಎಲ್ಲಾ ಕೊರೊನಾ ಯೋಧರು, ಆರೋಗ್ಯ ಕಾರ್ಯಕರ್ತರು ಮತ್ತು ಗೋವಾ ತಂಡವನ್ನು ಮೋದಿ ಶ್ಲಾಘಿಸಿದರು.
ಹುಟ್ಟು ಹಬ್ಬಕ್ಕೆ ಶುಭಕೋರಿದ, ಲಸಿಕೆ ಅಭಿಯಾನ ಯಶಸ್ವಿಗೊಳಿಸಿದವರಿಗೆ ಪ್ರಧಾನಿ ಮೋದಿ ಧನ್ಯವಾದ!
ಸಾಮಾಜಿಕ ಮತ್ತು ಭೌಗೋಳಿಕ ಸವಾಲುಗಳನ್ನು ಎದುರಿಸುವಲ್ಲಿ ಗೋವಾ ತೋರಿದ ಸಮನ್ವಯದ ಪರಿಯ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ಕ್ಯಾನಕೋನಾ ಉಪ ವಿಭಾಗದಲ್ಲಿ ಕಂಡುಬಂದ ಲಸಿಕೀಕರಣದ ವೇಗವು ರಾಜ್ಯದ ಉಳಿದ ಭಾಗಗಳಿಗೆ ಮಾದರಿಯಾಗಿದೆ ಎಂದು ಮೋದಿ ಹೇಳಿದರು.
ನಾನು ಅನೇಕ ಜನ್ಮದಿನಗಳನ್ನು ನೋಡಿದ್ದೇನೆ. ಹುಟ್ಟು ಹಬ್ಬ ಆಚರನೆ ನನಗೆ ನಿರಾಸಕ್ತಿ. ಆದರೆ ನನ್ನ ಇದುವರೆಗಿನ ಎಲ್ಲಾ ಜನ್ಮದಿನಗಳ ಪೈಕಿ, ನಿನ್ನೆ ನನ್ನನ್ನು ತೀವ್ರ ಭಾವುಕಗೊಳಿಸಿದ ದಿನವಾಗಿತ್ತು. ದೇಶ ಮತ್ತು ಕೊರೊನಾ ಯೋಧರ ಪ್ರಯತ್ನಗಳು ನಿನ್ನೆಯ ಜನ್ಮದಿನವನ್ನು ಮತ್ತಷ್ಟು ವಿಶೇಷವಾಗಿಸಿತು. 2.5 ಕೋಟಿ ಜನರಿಗೆ ಲಸಿಕೆ ಹಾಕಿದ ತಂಡದ ಸಹಾನುಭೂತಿ, ಸೇವೆ ಮತ್ತು ಕರ್ತವ್ಯ ಪ್ರಜ್ಞೆಯನ್ನು ಮೋದಿ ಶ್ಲಾಘಿಸಿದರು
ಳೆದ ಎರಡು ವರ್ಷಗಳಿಂದ ತಮ್ಮ ಜೀವಗಳನ್ನು ಲೆಕ್ಕಿಸದೆ ಕೊರೊನಾ ವಿರುದ್ಧ ಹೋರಾಡಲು ದೇಶವಾಸಿಗಳಿಗೆ ಸಹಾಯ ಮಾಡುತ್ತಿರುವುದಕ್ಕಾಗಿ ಹಾಗೂ ನಿನ್ನೆಯ ದಾಖಲೆಯ ಲಸಿಕೆಗಾಗಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕ್ಷೇತ್ರದ ಜನರು ಇದನ್ನು ತಮ್ಮ ಸೇವೆ ಎಂದು ಭಾವಿಸಿದರು. ಅವರ ಸಹಾನುಭೂತಿ ಮತ್ತು ಕರ್ತವ್ಯ ನಿಷ್ಠೆಯಿಂದಲೇ ಒಂದೇ ದಿನ 2.5 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲು ಸಾಧ್ಯವಾಗಿದೆ ಎಂದರು. ಹಿಮಾಚಲ ಪ್ರದೇಶ, ಗೋವಾ, ಚಂಡೀಗಢ ಮತ್ತು ಲಕ್ಷದ್ವೀಪಗಳು ಅರ್ಹ ಜನಸಂಖ್ಯೆಗೆ ಮೊದಲ ಡೋಸ್ ಪೂರ್ಣಗೊಳಿಸಿವೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಸಿಕ್ಕಿಂ, ಅಂಡಮಾನ್ ನಿಕೋಬಾರ್, ಕೇರಳ, ಲಡಾಖ್, ಉತ್ತರಾಖಂಡ್ ಮತ್ತು ದಾದ್ರಾ ನಾಗರ್‌ಹವೇಲಿ ಸಹ ಈ ನಿಟ್ಟಿನಲ್ಲಿ ಸಾಕಷ್ಟು ಸಾಧನೆ ಮಾಡಿವೆ ಎಂದರು.
ಭಾರತವು ಮೊದಲೇ ಚರ್ಚಿಸಿ ಪೂರ್ವಯೋಜನೆ ಮಾಡದಿದ್ದರೂ ತನ್ನ ಲಸಿಕೆ ಪ್ರಯತ್ನಗಳಲ್ಲಿ ಪ್ರವಾಸಿ ತಾಣಗಳಿಗೆ ಆದ್ಯತೆ ನೀಡಿದೆ ಎಂದು ಪ್ರಧಾನಿ ಹೇಳಿದರು. ಏಕೆಂದರೆ ನಮ್ಮ ಪ್ರವಾಸೋದ್ಯಮ ತಾಣಗಳು ತೆರೆಯುವುದು ಮುಖ್ಯವಾಗಿತ್ತು. ವಿದೇಶಿ ಪ್ರವಾಸಿಗರನ್ನು ಪ್ರೋತ್ಸಾಹಿಸಲು ಕೇಂದ್ರ ಸರಕಾರ ಇತ್ತೀಚೆಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಭಾರತಕ್ಕೆ ಭೇಟಿ ನೀಡುವ 5 ಲಕ್ಷ ಪ್ರವಾಸಿಗರಿಗೆ ಉಚಿತ ವೀಸಾ ನೀಡಲು ನಿರ್ಧರಿಸಲಾಗಿದೆ. ಪ್ರವಾಸೋದ್ಯಮ ವಲಯದಲ್ಲಿನ ವ್ಯಕ್ತಿಗಳಿಗೆ ಸರಕಾರದ ಖಾತರಿಯೊಂದಿಗೆ 10 ಲಕ್ಷದವರೆಗೆ ಸಾಲ ನೀಡಲು ಮತ್ತು ನೋಂದಾಯಿತ ಪ್ರವಾಸಿ ಮಾರ್ಗದರ್ಶಿಗಳಿಗೆ 1 ಲಕ್ಷದವರೆಗೆ ಸಾಲ ನೀಡಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ