ಮೂಲಸೌಕರ್ಯ ವಿಷಯದಲ್ಲಿ ರಾಜಕೀಯ ಬೇಡ: ಮೋದಿ ಘರ್ಜನೆ!

Published : Dec 30, 2020, 07:46 AM IST
ಮೂಲಸೌಕರ್ಯ ವಿಷಯದಲ್ಲಿ ರಾಜಕೀಯ ಬೇಡ: ಮೋದಿ ಘರ್ಜನೆ!

ಸಾರಾಂಶ

ಮೂಲಸೌಕರ‍್ಯ ವಿಷಯದಲ್ಲಿ ರಾಜಕೀಯ ಬೇಡ: ಮೋದಿ| ಆದರೆ ನನ್ನ ಸರ್ಕಾರ ಬಂದ ನಂತರ ಕೆಲಸದ ಸಂಸ್ಕೃತಿಯೇ ಬದಲು| ಹಿಂದಿನ ಸರ್ಕಾರಕ್ಕೆ ಮೋದಿ ತೀವ್ರ ತರಾಟೆ| ಭಾವುಪುರ-ಖುರ್ಜಾ ಸರಕು ರೈಲು ಮಾರ್ಗ ಲೋಕಾರ್ಪಣೆ

ಲಖನೌ(ಡಿ.30): ಈ ಹಿಂದಿನ ಸರ್ಕಾರ ಪ್ರತ್ಯೇಕ ರೈಲ್ವೆ ಸರಕು ಸಾಗಣೆ ಮಾರ್ಗ ನಿರ್ಮಾಣವನ್ನು ಸಂಪೂರ್ಣ ನಿರ್ಲಕ್ಷಿಸಿತ್ತು. ಮೂಲಸೌಕರ್ಯ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಸಲ್ಲದು ಎಂದು ಮನಮೋಹನ ಸಿಂಗ್‌ ಸರ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನ್ಯೂ ಭಾವುಪುರ-ನ್ಯೂ ಖುರ್ಜಾ ‘ಪೂರ್ವ ವಿಶೇಷ ಸರಕು ರೈಲು ಮಾರ್ಗ’ವನ್ನು ಮಂಗಳವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿ ಮಾತನಾಡಿದ ಮೋದಿ, ಈ ಸರಕು ಕಾರಿಡಾರ್‌ನಲ್ಲಿ ಓಡಾಡುವ ರೈಲಿನ ಶಬ್ದ ಆಲಿಸಿದಾಗ ‘ಭಾರತ’ ಹಾಗೂ ‘ಆತ್ಮನಿರ್ಭರ ಭಾರತ’ದ ಗರ್ಜನೆ ಕೇಳುತ್ತದೆ. ಇಂಥ ಕಾರಿಡಾರ್‌ಗಳು ರೈತರ ಉತ್ಪನ್ನಗಳನ್ನು ಸರಾಗವಾಗಿ ಸಾಗಿಸಲು ನೆರವಾಗುತ್ತವೆ ಎಂದು ಹರ್ಷಿಸಿದರು.

ಇದೇ ವೇಳೆ, ಪ್ರತಿಭಟನೆಗಳ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವುದನ್ನು ತೀವ್ರ ವಿರೋಧಿಸಿದ ಅವರು, ‘ಈ ಆಸ್ತಿಗಳು ಯಾವುದೋ ಪಕ್ಷ, ಸರ್ಕಾರ ಅಥವಾ ಮುಖಂಡನಿಗೆ ಸೇರಿಲ್ಲ. ಅವು ದೇಶದ ಹಾಗೂ ಜನರ ಆಸ್ತಿಗಳು. ತೆರಿಗೆದಾರರು ಬೆವರು ಹರಿಸಿ ನೀಡಿದ್ದ ದುಡ್ಡಿನಿಂದ ನಿರ್ಮಾಣ ಆದಂಥವು’ ಎಂದು ಬುದ್ಧಿಮಾತು ಹೇಳಿದರು.

‘ನ್ಯೂ ಖುರ್ಜಾ ಸರಕು ರೈಲು ಮಾರ್ಗಕ್ಕೆ 2006ರಲ್ಲೇ ಅಂದಿನ ಸರ್ಕಾರ ಅನುಮೋದನೆ ನೀಡಿತ್ತು. ಆದರೆ 2014ರವರೆಗೂ ಒಂದೇ ಒಂದು ಕಿ.ಮೀ. ರೈಲು ಮಾರ್ಗ ಕೂಡ ನಿರ್ಮಾಣ ಆಗಲಿಲ್ಲ. ಇದಕ್ಕೆ ಇಚ್ಛಾಶಕ್ತಿ ಕೊರತೆಯೇ ಕಾರಣ. ಆದರೆ 2014ರಲ್ಲಿ ನಮ್ಮ ಸರ್ಕಾರ ಬಂದ ನಂತರ ವೈಯಕ್ತಿಕ ಕಾಳಜಿ ವಹಿಸಿದೆ. 1100 ಕಿ.ಮೀ. ಮಾರ್ಗವನ್ನು 6 ವರ್ಷದಲ್ಲಿ ನಿರ್ಮಿಸಲಾಯಿತು. ಊಹಿಸಿ, 8 ವರ್ಷದಲ್ಲಿ ಶೂನ್ಯ ಕಿಲೋಮೀಟರ್‌. 6 ವರ್ಷದಲ್ಲಿ 11 ಸಾವಿರ ಕಿ.ಮೀ’ ಎಂದು ಯುಪಿಎ ಸರ್ಕಾರಕ್ಕೆ ಚುಚ್ಚಿದರು.

‘ಈ ಹಿಂದಿನ ಸರ್ಕಾರಗಳು ಕೇವಲ ರಾಜಕೀಯ ಲಾಭಕ್ಕೆ ಪ್ರಯಾಣಿಕ ರೈಲುಗಳನ್ನು ಓಡಿಸಲು ಆಸಕ್ತಿ ತೋರಿದವು. ದೇಶದ ಅಭಿವೃದ್ಧಿಗೆ ಕಾರಣವಾಗುವ ಸರಕು ರೈಲು ಮಾರ್ಗದತ್ತ ಗಮನ ಹರಿಸಲೇ ಇಲ್ಲ. ಆದರೆ ನಮ್ಮ ಸರ್ಕಾರ ಬಂದ ನಂತರ ಪ್ರತ್ಯೇಕ ರೈಲ್ವೆ ಬಜೆಟ್‌ ನಿಲ್ಲಿಸಿ, ರೈಲ್ವೆ ಮೂಲಸೌಕರ್ಯದತ್ತ ಗಮನ ಹರಿಸಿದೆವು. ಸರಕು ರೈಲು ಮಾರ್ಗ, ರೈಲು ಮಾರ್ಗ ವಿದ್ಯುದೀಕರಣ, ಜೋಡಿ ಮಾರ್ಗ, ರೈಲು ಗೇಟ್‌ ತೆಗೆದು ಹಾಕಿ ಅಂಡರ್‌ ಬ್ರಿಡ್ಜ್‌ ನಿರ್ಮಾಣ.. ಇತ್ಯಾದಿಗಳನ್ನು ಮಾಡಿದೆವು. ಕಾರ್ಯ ಸಂಸ್ಕೃತಿಯನ್ನೇ ಬದಲಿಸಿದೆವು’ ಎಂದು ಹೇಳಿಕೊಂಡರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌
ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ