ಹೊಸ ವರ್ಷಕ್ಕೆ ಮೋದಿ ಸರ್ಕಾರದ ಗಿಫ್ಟ್, ಉಚಿತ ಪಡಿತರ ಯೋಜನೆ ಮತ್ತೊಂದು ವರ್ಷ ವಿಸ್ತರಣೆ!

By Suvarna NewsFirst Published Dec 23, 2022, 9:25 PM IST
Highlights

ಹೊಸ ವರ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂಪರ್ ಗಿಫ್ಟ್ ನೀಡಿದ್ದಾರೆ. ಕೊರೋನಾ ಸಂದರ್ಭದಲ್ಲಿ ಆರಂಭಿಸಿದ ಉಚಿತ ಪಡಿತರ ಯೋಜನೆಯನ್ನು ಇದೀಗ ಮತ್ತೆ ಒಂದು ವರ್ಷ ವಿಸ್ತರಿಸಲಾಗಿದೆ.

ನವದೆಹಲಿ(ಡಿ.23):  ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕೆಲ ದಿನಗಳು ಮಾತ್ರ ಬಾಕಿ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ಕೊರೋನಾ ಸಂದರ್ಭದಲ್ಲಿ ಆರಂಭಿಸಿದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಭಾಗ್ಯ ಯೋಜನೆಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಲಾಗಿದೆ. ಈ ಯೋಜನೆಯಡಿ ದೇಶದ ಬರೋಬ್ಬರಿ 80 ಕೋಟಿ ಮಂದಿಗೆ ಉಚಿತ ಪಡಿತರ ವಿತರಿಸಲಾಗುತ್ತಿದೆ. ಡಿಸೆಂಬರ್ 2022ರ ಅಂತ್ಯಕ್ಕೆ ಮುಗಿಯಬೇಕಿದ್ದ ಈ ಯೋಜನೆಯನ್ನು ಇದೀಗ 2023ರ ಡಿಸೆಂಬರ್ 2023ರ ವರೆಗೆ ವಿಸ್ತರಿಸಲಾಗಿದೆ. 

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಿಯೂಷ್ ಗೋಯಲ್ ಸೇರಿದಂತೆ ಪ್ರಮುಖರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಕೋವಿಡ್ ಸಂದರ್ಭದಲ್ಲಿ ದೇಶದ ಜನರು ಹಸಿವಿನಿಂದ ಇರಬಾರದು ಎಂದು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನಭಾಗ್ಯ ಯೋಜನೆ ಆರಂಭಿಸಲಾಯಿತು. 2020ರಲ್ಲಿ ಆರಂಭಗೊಂಡ ಯೋಜನೆ ಹಂತ ಹಂತವಾಗಿ ವಿಸ್ತರಣೆ ಮಾಡುತ್ತಲೇ ಬರಲಾಗಿತ್ತು. 

PM Modi Birthday: ಬಡ ಜನರ 'ಅಚ್ಚೇದಿನ್‌' ಸಲುವಾಗಿ ಪ್ರಧಾನಿ ಮೋದಿ ಘೋಷಿಸಿದ 10 ಯೋಜನೆಗಳು

2022ರ ಡಿಸೆಂಬರ್ ತಿಂಗಳಿಗೆ ಅನ್ನ ಭಾಗ್ಯ ಯೋಜನೆ ಅಂತ್ಯಗೊಳ್ಳಲಿದೆ ಅನ್ನೋ ಮಾತುಗಳು ಬಲವಾಗಿ ಕೇಳಿಬಂದಿತ್ತು. ಆದರೆ ಇಂದು ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಅನ್ನ ಭಾಗ್ಯ ಯೋಜನೆ ವಿಸ್ತರಿಸುವ ಮೂಲಕ ಮತ್ತೆ ಜನರ ಸಂಕಷ್ಟಕ್ಕೆ ಮೋದಿ ಸರ್ಕಾರ ನೆರವಾಗಿದೆ. ಈ ಯೋಜನೆ ವಿಸ್ತರಣೆಯಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 2 ಲಕ್ಷ ಕೋಟಿ ರೂಪಾಯಿ ಹೊರೆಯಾಗಲಿದೆ.

28 ತಿಂಗಳುಗಳ ಕಾಲ ಬರೋಬ್ಬರಿ 80 ಕೋಟಿ ಮಂದಿಗೆ ಉಚಿತ ಪಡಿತರ ವಿತರಿಸಲಾಗಿದೆ. ಇಗೀಗ ಮತ್ತೊಂದು ವರ್ಷಕ್ಕೆ ಈ ಯೋಜನೆ ವಿಸ್ತರಣೆಗೊಳ್ಳುತ್ತಿದೆ. ಕೋವಿಡ್‌ ಸಂಕಷ್ಟಕಾಲದಲ್ಲಿ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರ ಆರಂಭಿಸಿದ್ದ 5 ಕೇಜಿ ಉಚಿತ ಪಡಿತರ ಯೋಜನೆಯನ್ನು 2022ರ ಮಾರ್ಚ್ ವರೆಗೆ ವಿಸ್ತರಿಸಿತ್ತು. ಬಳಿಕ 2022ರ ಮಾರ್ಚ್‌ನಿಂದ ಡಿಸೆಂಬರ್ ವರೆಗೆ ಯೋಜನೆ ವಿಸ್ತರಣೆ ಮಾಡಲಾಗಿತ್ತು. 

ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆ ಅನ್ವಯ 81.2 ಕೋಟಿ ಪಡಿತರ ಫಲಾನುಭವಿಗಳಿಗೆ ಇದರ ಲಾಭ ಸಿಗಲಿದೆ.  ಎರಡನೇ ಲಾಕ್‌ಡೌನ್ ಬಳಿಕ ಈ ಯೋಜನೆಯಿಂದ ಸರ್ಕಾರಕ್ಕೆ ವಾರ್ಷಿಕವಾಗಿ 1.5 ಲಕ್ಷ ಕೋಟಿ ರೂಪಾಯಿ ಹೊರೆಯಾಗುತ್ತಿತ್ತು. ಇದೀಗ ಈ ಮೊತ್ತ 2 ಕೋಟಿ ರೂಪಾಯಿಗೆ ಏರಿಕೆಯಾಗಿದೆ. 

'ರೈತರ ಕೃಷಿ ಉತ್ಪನ್ನ ಹಾಗೂ ಆದಾಯ ದ್ವಿಗುಣಗೊಳಿಸಲು ಸರ್ಕಾರದ ನೆರವು'

ಕೋವಿಡ್‌ ಮೊದಲ ಅಲೆ ಎದ್ದಾಗ ಲಾಕ್‌ಡೌನ್‌ ಮಾಡಲಾಗಿತ್ತು. ಆಗ ಲಾಕ್‌ಡೌನ್‌ ಸಂತ್ರಸ್ತರಿಗೆ ನೆರವಾಗಲಿ ಎಂದು 2020ರ ಏಪ್ರಿಲ್‌- ಜೂನ್‌ ಅವಧಿಗೆ ಮೊದಲ ಹಂತದ ಯೋಜನೆ ಜಾರಿ ಮಾಡಲಾಗಿತ್ತು. ಬಳಿಕ 2020ರ ಜುಲೈ- ನವೆಂಬರ್‌ ಅವಧಿಯಲ್ಲಿ 2ನೇ ಹಂತ, 2021ರ ಮೇ- ಜೂನ್‌ ಅವಧಿಗೆ 3ನೇ ಹಂತ, 2021ರ ಜುಲೈ- ನವೆಂಬರ್‌ ಅವಧಿಗೆ 4ನೇ ಹಂತದಲ್ಲಿ ಯೋಜನೆ ಜಾರಿಗೊಂಡಿತ್ತು. ಹೀಗೆ ನವೆಂಬರ್‌ನಲ್ಲಿ ಮುಗಿಯಬೇಕಿದ್ದ ಯೋಜನೆಯನ್ನು ಮತ್ತೆ 4 ತಿಂಗಳು ವಿಸ್ತರಿಸಲಾಗಿತ್ತು. ಬಳಿಕ ಡಿಸೆಂಬರ್ 2022ರ ವರೆಗೆ ವಿಸ್ತರಿಸಲಾಗಿತ್ತು. ಇದೀಗ ಡಿಸೆಂಬರ್ 2023ರ ವರೆಗೆ ಯೋಜನೆ ವಿಸ್ತರಿಸಲಾಗಿದೆ.

click me!