ಕಾಶಿಯಲ್ಲಿ ಮೋದಿ ದೇವ ದೀಪಾವಳಿ: ಬೋಟ್‌ನಲ್ಲಿ ಪ್ರಧಾನಿ ಗಂಗಾಯಾನ!

By Kannadaprabha NewsFirst Published Dec 1, 2020, 8:35 AM IST
Highlights

ಕಾಶಿಯಲ್ಲಿ ಮೋದಿ ದೇವ ದೀಪಾವಳಿ| ಬೋಟ್‌ನಲ್ಲಿ ಪ್ರಧಾನಿ ಗಂಗಾಯಾನ| ವಿಶ್ವನಾಥ ದೇಗುಲದಲ್ಲಿ ಪೂಜೆ ಸಲ್ಲಿಕೆ

ವಾರಣಸಿ(ಡಿ.01): ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿಯ ಗಂಗಾ ತಟದಲ್ಲಿ ಮೊದಲ ದೀಪ ಬೆಳಗುವ ಮೂಲಕ ‘ದೇವ ದೀಪಾವಳಿ’ಯ ದೀಪೋತ್ಸವಕ್ಕೆ ಚಾಲನೆ ನೀಡಿದರು. ಕಾರ್ತಿಕ ಪೌರ್ಣಮಿಯ ಅಂಗವಾಗಿ ಈ ದೀಪೋತ್ಸವ ಆಯೋಜಿಸಿದ್ದು, ಗಂಗಾ ಘಾಟ್‌ನಲ್ಲಿ ಸುಮಾರು 15 ಲಕ್ಷ ದೀಪಗಳನ್ನು ಬೆಳಗುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾರಾಣಸಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ಕೆಲ ಕಾಲ ಗಂಗಾನದಿಯಲ್ಲಿ ಬೋಟ್‌ನಲ್ಲಿ ವಿಹರಿಸಿ, ಲಲಿತಾ ಘಾಟ್‌ನಲ್ಲಿ ಇಳಿದು ಕಾಶಿ ವಿಶ್ವನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ನಂತರ ನೆರೆದಿದ್ದ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಮೊದಲಿಗೆ ಬೋಜ್ಪುರಿ ಭಾಷೆಯಲ್ಲಿ ಕಾರ್ತಿಕ ಪೂರ್ಣಿಮೆಯ ಶುಭಾಶಯ ಕೋರಿದರು. ‘ಈ ವರ್ಷದ ದೇವ ದೀಪಾವಳಿ ವಿಶೇಷವಾದುದು. 100 ವರ್ಷದ ಹಿಂದೆ ಕಾಣೆಯಾಗಿದ್ದ ದೇವಿ ಅನ್ನಪೂರ್ಣೆಯ ವಿಗ್ರಹ ಈ ಬಾರಿ ದೇಶಕ್ಕೆ ಮರಳಿ ಬಂದಿದೆ. ಇದು ಕಾಶಿಯ ಅದೃಷ್ಟ. ಇಂಥ ಪ್ರಯತ್ನಗಳು ಹಿಂದೆಯೂ ನಡೆದಿದ್ದರೆ ಹಲವು ಅತ್ಯಮೂಲ್ಯ ಪ್ರತಿಮೆಗಳು ದೇಶಕ್ಕೆ ಮರಳಿ ಬರುತ್ತಿದ್ದವು. ಆದರೆ ಕೆಲವು ಜನರ ಯೋಚನೆ ವಿಭಿನ್ನವಾಗಿರುತ್ತದೆ. ನಮಗೆ ಪಿತ್ರಾರ್ಜಿತ ಎನ್ನುವುದು ಪರಂಪರೆಯಂತೆ, ಕೆಲವರಿಗೆ ಅವರು ಕುಟುಂಬದ ಆಸ್ತಿಯಂತೆ’ ಎಂದು ಪರೋಕ್ಷವಾಗಿ ಕುಟುಕಿದರು.

Har Har Mahadev! pic.twitter.com/k2XD2Q74xl

— Narendra Modi (@narendramodi)

ಕೊರೋನಾ ಸಾಂಕ್ರಾಮಿಕ ಇದ್ದರೂ ಬದಲಾವಣೆಗೆ ಆಸ್ಪದ ನೀಡದಿರುವುದೇ ಕಾಶಿಯ ಶಕ್ತಿ. ಕಾಶಿಯ ಜನರೇ ಶಿವ ಮತ್ತು ದೇವಿಯಿದ್ದಂತೆ. ಇವತ್ತು ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಸೈನಿಕರಿಗೆ ಈ ದೀಪ ಅರ್ಪಣೆ’ ಎಂದು ಹೇಳಿದರು.

click me!