* ದೇಶಕ್ಕೆ ದ್ರೋಹ ಬಗೆದವರಿಗೆ ಸುರಕ್ಷಿತ ತಾಣ ಸಿಗಕೂಡದು: ಮೋದಿ
* ಸಿವಿಸಿ, ಸಿಬಿಐ ಅಧಿಕಾರಿಗಳಿಗೆ ಪ್ರಧಾನಿ ಸೂಚನೆ
* ನೀರವ್, ಚೋಕ್ಸಿ, ಮಲ್ಯ ಹೆಸರೆತ್ತದೇ ಚಾಟಿ
ಕೆವಾಡಿಯಾ(ಅ.21): ದೇಶಕ್ಕೆ ದ್ರೋಹ ಎಸಗುವವರಿಗೆ ವಿಶ್ವದ ಎಲ್ಲಿಯೂ ಸುರಕ್ಷಿತ ತಾಣಗಳು ಸಿಗದಂತೆ ನೋಡಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಕೇಂದ್ರ ಜಾಗ್ರತ ಆಯೋಗ(CVC), ಹಾಗೂ ಸಿಬಿಐ(CBI) ಅಧಿಕಾರಿಗಳಿಗೆ ಬುಧವಾರ ನಿರ್ದೇಶಿಸಿದ್ದಾರೆ.
ವಿಜಯ್ ಮಲ್ಯ(Vijay Mallya), ನೀರವ್ ಮೋದಿ(Nirav Modi), ಮೆಹುಲ್ ಚೋಕ್ಸಿ(Mehul Choksi) ಸೇರಿದಂತೆ ಸಾಲ ಪಡೆದು ವಿದೇಶದಲ್ಲಿ ಅಡಗಿ ಕುಳಿತವರನ್ನು ಭಾರತಕ್ಕೆ ಕರೆತರುವುದಕ್ಕೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಿರುವ ಸಂದರ್ಭದಲ್ಲೇ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.
ಸಿವಿಸಿ, ಸಿಬಿಐ ಅಧಿಕಾರಿಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ದೇಶ, ದೇಶದ ಜನತೆಯ ವಿರುದ್ಧ ಕಾರ್ಯಾಚರಿಸುವವರು ಎಷ್ಟೇ ಪ್ರಭಾವಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ನೀವು ಈ ಮಣ್ಣಿಗಾಗಿ ಹಾಗೂ ಭಾರತ ಮಾತೆಗಾಗಿ ಕೆಲಸ ಮಾಡುತ್ತಿದ್ದೀರೆಂಬುದು ನಿಮಗೆ ನೆನಪಿರಲಿ. ನಾವು ದೇಶದ ಹಿತಾಶಕ್ತಿಗಾಗಿ ಕೆಲಸ ಮಾಡಬೇಕು’ ಎಂದರು.
‘ದೇಶದಲ್ಲಿ ಭ್ರಷ್ಟಾಚಾರ ತಡೆಯಲು ಸಾಧ್ಯವಿದೆ ಎಂಬ ನಂಬಿಕೆ ಜನರಲ್ಲಿ ಉಂಟುಮಾಡಲು 6-7 ವರ್ಷಗಳಲ್ಲಿ ಸಾಧ್ಯವಾಗಿದೆ. ಅವರು ಸರ್ಕಾರದ ಯೋಜನೆಯ ಫಲವನ್ನು ಯಾವುದೇ ಏಜೆಂಟ್ ಸಹಾಯವಿಲ್ಲದೇ ಪಡೆದುಕೊಳ್ಳಬೇಕು. ಭ್ರಷ್ಟಾಚಾರ ಸಾಮಾನ್ಯ ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಅದು ದೇಶದ ಪ್ರಗತಿಗೂ ಅಡ್ಡಿ’ ಎಂದರು.