
ನವದೆಹಲಿ: ಮನೆಯಲ್ಲಿ ಕಂತೆಕಂತೆ ಹಣ ಪತ್ತೆಯಾದ ಆರೋಪದ ಪ್ರಕರಣದಲ್ಲಿ ತಮ್ಮನ್ನು ದೋಷಿ ಎಂದಿದ್ದ ಆಂತರಿಕ ತನಿಖಾ ವರದಿ ಅಮಾನ್ಯಗೊಳಿಸುವಂತೆ ಕೋರಿ ನ್ಯಾ। ಯಶವಂತ್ ವರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಜತೆಗೆ, ‘ನಿಮ್ಮ ನಡತೆ ಮೇಲೆ ನಂಬಿಕೆ ಬರುತ್ತಿಲ್ಲ’ ಎಂದು ಹೇಳಿದೆ.
ತಮ್ಮ ವಿರುದ್ಧ ದೋಷಾರೋಪಣೆ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸಂಸತ್ತನ್ನು ಒತ್ತಾಯಿಸಿದ್ದ ನ್ಯಾ। ಸಂಜೀವ್ ಖನ್ನಾ ಅವರ ಶಿಫಾರಸನ್ನು ಮತ್ತು ತಮ್ಮನ್ನು ಅಪರಾಧಿ ಎಂದಿದ್ದ ತನಿಖಾ ವರದಿಯನ್ನು ರದ್ದುಗೊಳಿಸುವಂತೆ ನ್ಯಾ।ವರ್ಮಾ ಕೋರಿದ್ದರು.
ಇದರ ವಿಚಾರಣೆ ನಡೆಸಿದ ನ್ಯಾ। ದೀಪಂಕರ್ ದತ್ತಾ ಮತ್ತು ಎ.ಜಿ. ಮಾಶಿ ಅವರ ಪೀಠ, ‘ಅಗ್ನಿಶಾಮಕ ದಳದವರ ಕಾರ್ಯಾಚರಣೆಯ ದೃಶ್ಯಾವಳಿಗಳನ್ನು ನಾವು ಬಹಿರಂಗಪಡಿಸುವ ಅಗತ್ಯವಿರಲಿಲ್ಲ. ಆದರೆ ಆಗ ನೀವದನ್ನು ಪ್ರಶ್ನಿಸಿರಲಿಲ್ಲ ಮತ್ತು ರಿಟ್ ಅರ್ಜಿಯನ್ನೂ ಸಲ್ಲಿಸಿರಲಿಲ್ಲ. ಆದರೆ ನೀವು ಅಪರಾಧಿಯೆಂದು ವರದಿ ಬಂದ ಬಳಿಕವೇ ಸರ್ವೋಚ್ಚ ನ್ಯಾಯಾಲಯದ ಮೊರೆಹೋಗಲು ನಿರ್ಧರಿಸಿದಿರಿ. ಹೀಗಾಗಿ ನಿಮ್ಮ ಈ ನಡೆಗಳು ನಂಬಿಕೆಗೆ ಅರ್ಹವಾಗಿಲ್ಲ’ ಎಂದು ಹೇಳಿದೆ ಹಾಗೂ ಅವರ ಮನವಿಯನ್ನು ತಿರಸ್ಕರಿಸಿದೆ.
ಸುಪ್ರೀಂ ಕೋರ್ಟ್ ತೀವ್ರ ತರಾಟೆ
ನವದೆಹಲಿ: ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಯಶವಂತ್ ವರ್ಮಾ ಅವರನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ‘ಪ್ರಕರಣದ ಆಂತರಿಕ ತನಿಖೆ ಮುಗಿಯುವವರೆಗೆ, ಆ ಕುರಿತ ವರದಿ ಬಿಡುಗಡೆಯಾಗುವವರೆಗೆ ನೀವು ಯಾಕೆ ಕಾಯ್ತಾ ಕೂತಿದ್ರಿ? ನಿಮ್ಮ ಪರ ವರದಿ ಬರಬಹುದೆಂಬ ನಿರೀಕ್ಷೆಯಲ್ಲಿದ್ದಿರಾ?’ ಎಂದು ಖಾರವಾಗಿ ಪ್ರಶ್ನಿಸಿದೆ.
ತಮ್ಮ ವಿರುದ್ಧದ ಆಂತರಿಕ ತನಿಖಾ ವರದಿ ರದ್ದುಮಾಡುವಂತೆ ಕೋರಿ ನ್ಯಾ.ವರ್ಮಾ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ದಿಪಾಂಕರ್ ದತ್ತಾ ಮತ್ತು ಎ.ಜಿ.ಮಸಿಹ್ ಅವರಿದ್ದ ಪೀಠ, ‘ಹಾಗಿದ್ದರೆ ನೀವು ತನಿಖಾ ಸಮಿತಿ ಮುಂದೆ ವಿಚಾರಣೆಗೆ ಏಕೆ ಹಾಜರಾದ್ರಿ? ವೆಬ್‌ಸೈಟ್‌ನಲ್ಲಿ ಹಾಕಲಾಗಿರುವ ವಿಡಿಯೋ ತೆಗೆದುಹಾಕುವಂತೆ ಕೇಳಲು ಬಂದಿದ್ದೀರಾ?’ ಎಂದೂ ಕೇಳಿತು.
ಜತೆಗೆ ಅರ್ಜಿಯಲ್ಲಿ ಸಲ್ಲಿಸಿದ್ದ ಪಕ್ಷಗಾರರ ಪಟ್ಟಿಯ ಜತೆಗೆ ಆಂತರಿಕ ತನಿಖಾ ವರದಿಯನ್ನೂ ಉಲ್ಲೇಖಿಸಬೇಕಿತ್ತು ಎಂದು ಹೇಳಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ