ಫೋನ್ ಕಳ್ಳತನ ತಡೆಯುವ ವೇಳೆ ಆಟೋದಿಂದ ಬಿದ್ದು ಬಿಟೆಕ್ ವಿದ್ಯಾರ್ಥಿನಿಯ ಸಾವಿಗೆ ಕಾರಣನಾದ ನಟೋರಿಯಸ್ ದರೋಡೆಕೋರನನ್ನು ಉತ್ತರ ಪ್ರದೇಶ ಪೊಲೀಸರು ಎನ್‌ಕೌಂಟರ್ ಮಾಡಿ ಮುಗಿಸಿದ್ದಾರೆ.
ಲಕ್ನೋ: ಫೋನ್ ಕಳ್ಳತನ ತಡೆಯುವ ವೇಳೆ ಆಟೋದಿಂದ ಬಿದ್ದು ಬಿಟೆಕ್ ವಿದ್ಯಾರ್ಥಿನಿಯ ಸಾವಿಗೆ ಕಾರಣನಾದ ನಟೋರಿಯಸ್ ದರೋಡೆಕೋರನನ್ನು ಉತ್ತರ ಪ್ರದೇಶ ಪೊಲೀಸರು ಎನ್‌ಕೌಂಟರ್ ಮಾಡಿ ಮುಗಿಸಿದ್ದಾರೆ. ಕಳೆದ ಶುಕ್ರವಾರ 19 ವರ್ಷದ ಬಿಟೆಕ್ ವಿದ್ಯಾರ್ಥಿನಿ ಕೃತಿ ಎಂಬಾಕೆ ತನ್ನ ಸ್ನೇಹಿತೆ ದೀಕ್ಷಾ ಜಿಂದಾಲ್ ಜೊತೆ ಆಟೋದಲ್ಲಿ ತೆರಳುತ್ತಿದ್ದ ವೇಳೆ ಫೋನ್ ಕಳ್ಳನೋರ್ವ ಬೈಕ್‌ನಲ್ಲಿ ಬಂದು ಕೃತಿಯ ಫೋನ್ ಕಳವಿಗೆ ಯತ್ನಿಸಿದ್ದ ಈ ವೇಳೆ ಆಟೋದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಕೃತಿ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಗಾಜಿಯಾಬಾದ್‌ನ ಯಶೋಧ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಳು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಇಂದು ಮುಂಜಾನೆ ಗಾಜಿಯಾಬಾದ್ ಸಮೀಪವೇ ಈ ಹಂತಕನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದಾರೆ. ಈತನನ್ನು 28 ವರ್ಷದ ಜೀತೇಂದ್ರ ಅಲಿಯಾಸ್ ಜೀತು ಎಂದು ಗುರುತಿಸಲಾಗಿದೆ. ಈತ ಗಾಜಿಯಾಬಾದ್‌ನ ಮಸೂರಿಯ ಮಿಶಲ್ ಗರ್ಹಿ ನಿವಾಸಿಯಾಗಿದ್ದ.
ಕಳೆದ ಶುಕ್ರವಾರ ಎಬಿಇಎಸ್ ಕಾಲೇಜಿನಲ್ಲಿ ಬಿಟೆಕ್ ಓದುತ್ತಿದ್ದ 19 ವರ್ಷದ ಕೃತಿ ತನ್ನ ಗೆಳತಿ ಜೊತೆ ಹಾಪುರದಲ್ಲಿರುವ ತನ್ನ ಮನೆಗೆ ಬರುತ್ತಿದ್ದ ವೇಳೆ ಮಸೂರಿ ಪ್ರದೇಶದ ಎನ್‌ಹೆಚ್9 ರ ಸಮೀಪ ಆಕೆಯ ಫೋಣ್ ದರೋಡೆಗೆ ಜೀತೇಂದ್ರ ಯತ್ನಿಸಿದ್ದು, ಪರಿಣಾಮ ಕೃತಿ ಆಟೋದಿಂದ ಬಿದ್ದು ಗಂಭೀರ ಗಾಯಗೊಂಡಿದ್ದಳು. ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆಕೆ ಭಾನುವಾರ ಪ್ರಾಣ ಬಿಟ್ಟಿದ್ದಳು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಪೊಲೀಸರು ಗುಂಡಿನ ದಾಳಿಯ ನಂತರ ಬಲ್‌ಬೀರ್ ಎಂಬಾತನನ್ನು ಬಂಧಿಸಿದ್ದರು. ಫೋನ್ ಕಳ್ಳತನ ನಡೆಯುವ ವೇಳೆ ಬಲ್‌ಬೀರ್ ಬೈಕ್ ಚಲಾಯಿಸುತ್ತಿದ್ದರೆ, ಜೀತೇಂದ್ರ ಬೈಕ್ ಹಿಂಬದಿ ಕುಳಿತಿದ್ದ. ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಗಂಗಾ ರಿವರ್ ರಸ್ತೆಯಲ್ಲಿ ಪೊಲೀಸರು ತಪಾಸಣೆಯಲ್ಲಿ ತೊಡಗಿದ್ದ ವೇಳೆ ಬೈಕ್‌ನಲ್ಲಿ ಇಬ್ಬರು ಆಗಮಿಸಿದ್ದು, ಇವರನ್ನು ಪೊಲೀಸರು ಬೈಕ್ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಈ ವೇಳೆ ಇವರು ಪೊಲೀಸರಿಂದ ತಪ್ಪಿಸಿಕೊಳ್ಳಲು ನೋಡಿದ್ದಾರೆ. ಈ ವೇಳೆ ಪೊಲೀಸರು ಅವರನ್ನು ಹಿಂಬಾಲಿಸಿದಾಗ, ಪೊಲೀಸರ ಮೇಲೆಯೇ ಆರೋಪಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಇನ್ಸ್‌ಪೆಕ್ಟರ್ ಒಬ್ಬರು ಗಾಯಗೊಂಡಿದ್ದಾರೆ.
ಈ ವೇಳೆ ಪೊಲೀಸರು ಮರುದಾಳಿ ನಡೆಸಿದ್ದು, ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಪರಿಣಾಮ ಇಬ್ಬರು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಅವರನ್ನು ಪೊಲೀಸರು ಸುತ್ತುವರೆದಿದ್ದು, ಈ ವೇಳೆ ಓರ್ವ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಜೀತೇಂದ್ರನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಆತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಎಂದು ಗಾಜಿಯಾಬಾದ್ ಗ್ರಾಮೀಣ ಪ್ರದೇಶ ಡಿಸಿಪಿ ವಿವೇಕ್ ಯಾದವ್ ಹೇಳಿದ್ದಾರೆ.
ಮೃತ ಜೀತೇಂದ್ರ 12ಕ್ಕೂ ಹೆಚ್ಚು ದರೋಡೆ ಹಾಗೂ ಕಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ. ದೆಹಲಿ ಎನ್‌ಸಿಆರ್ ಭಾಗದ ಹಲವು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದ್ದವು. 2020ರಲ್ಲಿ ಈತನ ವಿರುದ್ಧ ಗ್ಯಾಂಗ್‌ಸ್ಟಾರ್ ಆಕ್ಟ್ ಹೇರಲಾಗಿತ್ತು.