
ಪಟನಾ(ಅ.24): ದೇಶದ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆ ಚುನಾವಣೆ ಪ್ರಚಾರದ ಅಖಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಪ್ರವೇಶಿಸಿದ್ದು, ಒಂದೇ ದಿನ 3 ರಾರಯಲಿಗಳನ್ನು ಉದ್ದೇಶಿಸಿ ಮಾತನಾಡುವ ಮೂಲಕ ಪ್ರತಿಪಕ್ಷಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಬಿಹಾರದಲ್ಲಿ ಈಗ ವಿದ್ಯುಚ್ಛಕ್ತಿ ಇದೆ. ಹೀಗಾಗಿ ಕಂದೀಲು (ಲ್ಯಾಂಟರ್ನ್- ಲಾಲು ಪಕ್ಷದ ಚಿಹ್ನೆ) ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಜತೆಗೆ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎಗೆ ಮತ ಹಾಕಿದರೆ ಬಿಹಾರ್ ಮತ್ತೆ ಬಿಮಾರ್ (ರೋಗಗ್ರಸ್ತ) ರಾಜ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ರೋಹ್ಟಸ್, ಗಯಾ ಹಾಗೂ ಭಾಗಲ್ಪುರದಲ್ಲಿ ಪ್ರಚಾರ ರಾರಯಲಿ ಉದ್ದೇಶಿಸಿ ಮಾತನಾಡಿದ ಅವರು, ಸಂವಿಧಾನದ 370ನೇ ಪರಿಚ್ಛೇದವನ್ನು ರದ್ದುಗೊಳಿಸಬೇಕು ಎಂದು ದೇಶವೇ ಕಾಯುತ್ತಿತ್ತು. ಅದನ್ನು ಎನ್‌ಡಿಎ ಸರ್ಕಾರ ಮಾಡಿತು. ಆದರೆ ಇದೀಗ ಈ ವ್ಯಕ್ತಿಗಳು ಅಧಿಕಾರಕ್ಕೆ ಬಂದರೆ ಮತ್ತೆ 370ನೇ ವಿಧಿ ಪುನಾಸ್ಥಾಪಿಸುವುದಾಗಿ ಹೇಳುತ್ತಿದ್ದಾರೆ. ಗಲ್ವಾನ್ ಕಣಿವೆಯಲ್ಲಿ ಭಾರತ ಮಾತೆ ತಲೆತಗ್ಗಿಸಲು ಬಿಡುವುದಿಲ್ಲ ಎಂದು ಬಿಹಾರದ ಯೋಧರು ಪ್ರಾಣವನ್ನೇ ಅರ್ಪಣೆ ಮಾಡಿದರು. ಹೀಗಾಗಿ ವಿಪಕ್ಷಗಳ ಹೇಳಿಕೆ ಬಿಹಾರಕ್ಕೆ ಮಾಡಿದ ಅಪಮಾನವಲ್ಲವೇ? ಎಂದು ಪ್ರಶ್ನಿಸಿದರು.
ಮೋದಿ ಮಾತು...
- 15 ವರ್ಷಗಳ ಲಾಲು ಆಳ್ವಿಕೆಯಲ್ಲಿ ಕೊಲೆ, ಸುಲಿಗೆ ಸಾಮಾನ್ಯವಾಗಿದ್ದವು
- ರಾತ್ರಿಯಾಯಿತೆಂದರೆ ಜನಜೀವನವೇ ಸ್ತಬ್ಧವಾಗುತ್ತಿತ್ತು
- ಆದರೆ ಈಗ ರಸ್ತೆ, ವಿದ್ಯುಚ್ಛಕ್ತಿ, ವಿದ್ಯುತ್ ದೀಪಗಳು ಇವೆ
- ಜನರು ಭಯದಿಂದ ಮುಕ್ತವಾಗಿ ಬದುಕುವ ವಾತಾವರಣ ಇದೆ
- ಲಂಚಕ್ಕಾಗಿ ಸರ್ಕಾರಿ ಉದ್ಯೋಗಗಳತ್ತ ನೋಡುವವರು ಉದ್ಯೋಗ ಕೊಡುತ್ತಾರೆಯೇ?
- ಯುಪಿಎ ಸರ್ಕಾರ ಇದ್ದಾಗ ನಿತೀಶ್‌ಗೆ ಕೆಲಸ ಮಾಡಲು ಬಿಡಲಿಲ್ಲ. ಹೀಗಾಗಿ 10 ವರ್ಷ ವ್ಯರ್ಥವಾಯಿತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ