ಪಶ್ಚಿಮ ಬಂಗಾಳ ಜನತೆಯಲ್ಲಿ ಕ್ಷಮೆ ಯಾಚಿಸಿದ ಪ್ರಧಾನಿ ಮೋದಿ, ಭಾವುಕರಾದ ಜನ!

By Suvarna NewsFirst Published Dec 30, 2022, 5:50 PM IST
Highlights

ತಾಯಿ ಹೀರಾಬೆನ್ ಅಂತ್ಯಸಂಸ್ಕಾರ ಮುಗಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಪಶ್ಚಿಮ ಬಂಗಾಳದಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಸಾಂತ್ವನದ ಮಾತುಗಳನ್ನಾಡಿದ್ದಾರೆ. 
 

ನವದೆಹಲಿ(ಡಿ.30): ಒಂದೆಡೆ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದ ತಾಯಿ ಹೀರಾಬೆನ್ ನಿಧನ, ಮತ್ತೊಂದೆಡೆ ಮೊದಲೇ ನಿಗದಿಯಾಗಿದ್ದ ಸರ್ಕಾರದ ಯೋಜನೆಗಳ ಕಾರ್ಯಕ್ರಮ. ಪ್ರಧಾನಿ ನರೇಂದ್ರ ಮೋದಿ ಎರಡನ್ನು ಇಡೀ ಭಾರತವೇ ಮೆಚ್ಚುವಂತೆ ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ತಾಯಿ ಅಂತ್ಯಸ್ಕಾರದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ, ಬಳಿಕ ವಿಡಿಯೋ ಕಾನ್ಫೆರನ್ಸ್ ಮೂಲಕ ಪಶ್ಚಿಮ ಬಂಗಾಳದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ಸೇರಿದಂತೆ ಹಲವು ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ. ತಾಯಿ ಅಂತ್ಯಸಂಸ್ಕಾರ ಮುಗಿಸಿ ನೇರವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೋದಿಗೆ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾಂತ್ವನದ ಮಾತುಗಳನ್ನಾಡಿದ್ದಾರೆ. ನಿಮ್ಮ ತಾಯಿ ನಮಗೂ ತಾಯಿ. ನೋವನ್ನು ಭರಿಸುವ ಶಕ್ತಿ ಭಗವಂತ ನಿಮಗೆ ಕೊಡಲಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪ್ರಧಾನಿ ಮೋದಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ, ಮಮತಾ ಬ್ಯಾನರ್ಜಿ ಮಾತನಾಡಿದರು. ಈ ವೇಳೆ ಪಶ್ಚಿಮ ಬಂಗಾಳ ಜನರ ಪರವಾಗಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ಹಲವು ಯೋಜನೆಗಳ ಮೂಲಕ ಬಂಗಾಳ ಜನತೆಗೆ ಉತ್ತಮ ಸೌಲಭ್ಯ ನೀಡಲಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದರು. ಇಂದು ನಿಮಗೆ ನೋವಿನ ದಿನ. ನಿಮ್ಮ ತಾಯಿ ಅಂದರೆ ನಮಗೂ ತಾಯಿ. ಇದೇ ರೀತಿ ಉತ್ತಮ ಕೆಲಸ, ಅಭಿವೃದ್ಧಿ ಮಾಡಲು ಭಗವಂತ ನಿಮಗೆ ಮತ್ತಷ್ಟು ಶಕ್ತಿ ನೀಡಲಿ. ಬಿಡುವಿಲ್ಲದೆ ಎಲ್ಲವನ್ನು ನಿಭಾಯಿಸುವ ನೀವು ಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ನಿಮ್ಮ ತಾಯಿ ನಮ್ಮ ತಾಯಿ ಇದ್ದಂತೆ: ಮೋದಿಗೆ ಮಮತಾ ಬ್ಯಾನರ್ಜಿ ಸಾಂತ್ವನ

ಮಮತಾ ಬ್ಯಾನರ್ಜಿ ಭಾಷಣದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆರಂಭದಲ್ಲೇ ಬಂಗಾಳದ ಜನತೆಯಲ್ಲಿ ಕ್ಷಮೆ ಯಾಚಿಸಿದರು. ಇಂದು ನಿಮ್ಮನ್ನು ಭೇಟಿಯಾಗಬೇಕಿತ್ತು. ಆದರೆ ವೈಯುಕ್ತಿಕ ಕಾರಣಗಳಿಂದ ಬಂಗಾಳಕ್ಕೆ ಬರಲು ಸಾಧ್ಯವಾಗಲಿಲ್ಲ. ಇದಕ್ಕೆ ಕ್ಷಮೆಯಾಚಿಸುತ್ತೇನೆ. ಬಂಗಾಳದ ಪವಿತ್ರ ಭೂಮಿಗೆ ನಮನ ಸಲ್ಲಿಸುವ ಅವಕಾಶ ಇಂದು ನನಗೆ ಸಿಕ್ಕಿದೆ.  ಸ್ವಾತಂತ್ರ್ಯ ಚಳವಳಿಯ ಇತಿಹಾಸವು ಬಂಗಾಳದ ಪ್ರತಿಯೊಂದು ಕಣದಲ್ಲೂ ಅಡಕವಾಗಿದೆ. ವಂದೇ ಮಾತರಂ ಪಠಿಸಿದ ಭೂಮಿಯಾಗಿರಿವ ಈ ಪಶ್ಚಿಮ ಬಂಗಾಳದಲ್ಲಿ ಇಂದು ವಂದೇ ಭಾರತ್ ರೈಲಿಗೆ ಇದೀಗ ಫ್ಲ್ಯಾಗ್ ಆಫ್ ಮಾಡಲಾಗಿದೆ. ಇಂದು, ಅಂದರೆ ಡಿಸೆಂಬರ್ 30 ರ ದಿನಾಂಕವು ಇತಿಹಾಸದಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ.  ಡಿಸೆಂಬರ್ 30, 1943 ರಂದು ನೇತಾಜಿ ಸುಭಾಷ್ ಅವರು ಅಂಡಮಾನ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಭಾರತದ ಸ್ವಾತಂತ್ರ್ಯದ ಧ್ವಜವನ್ನು ಹಾರಿಸಿದ್ದ ದಿನವೂ ಕೂಡ ಇದಾಗಿದೆ ಎಂಬುದು ಸ್ಮರಣೀಯ ಎಂದು ಮೋದಿ ಹೇಳಿದ್ದಾರೆ. 

Heeraben Modi :ಪಂಚಭೂತಗಳಲ್ಲಿ ಹೀರಾಬೆನ್ ಲೀನ: ದುಃಖದ ನಡುವೆ ಕರ್ತವ್ಯಕ್ಕೆ ಹಾಜರಾದ ಮೋದಿ

2018 ರಲ್ಲಿ, ಈ ಘಟನೆಯ 75 ನೇ ವಾರ್ಷಿಕೋತ್ಸವದಂದು, ನಾನು ಅಂಡಮಾನ್‌ಗೆ ಹೋಗಿದ್ದೆ, ಒಂದು ದ್ವೀಪಕ್ಕೂ ಕೂಡ  ನೇತಾಜಿ ಅವೆ ಹೆಸರಿಡಲಾಗಿದೆ.  ಮತ್ತು ಈಗ ದೇಶವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಈ ಸಮಯದಲ್ಲಿ ದ್ವೀಪವು ಸಹ ತನ್ನ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ.  ಈ ಅಮೃತ ಮಹೋತ್ಸವದಲ್ಲಿ ದೇಶವು 475 ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ.  ಇಂದು, ಈ ಹೌರಾ-ಹೊಸ ಜಲ್ಪೈಗುರಿ ವಂದೇ ಭಾರತ್ ರೈಲುಗಳಲ್ಲಿ ಒಂದನ್ನು ಕೋಲ್ಕತ್ತಾದಿಂದ ಇಲ್ಲಿ ಪ್ರಾರಂಭಿಸಲಾಗಿದೆ.  ಇಂದು  ರೈಲ್ವೆ ಮತ್ತು ಮೆಟ್ರೋ ಸಂಪರ್ಕಕ್ಕೆ ಸಂಬಂಧಿಸಿದ ಇತರ ಯೋಜನೆಗಳನ್ನು ಸಹ ಉದ್ಘಾಟಿಸಲಾಗಿದೆ ಮತ್ತು ಶಿಲಾನ್ಯಾಸವನ್ನು ಮಾಡಲಾಗಿದೆ.  ಸುಮಾರು 5,000 ಕೋಟಿ ವೆಚ್ಚದಲ್ಲಿ ಜೋಕಾ-ಬಿಬಿಡಿ ಬಾಗ್ ಮೆಟ್ರೋ ಯೋಜನೆ ಕಾಮಗಾರಿ ನಡೆಯುತ್ತಿದೆ.  ಈ ಪೈಕಿ ಜೋಕಾ-ತಾರಾಟ್ಲಾ ಮೆಟ್ರೋ ಮಾರ್ಗ ಪೂರ್ಣಗೊಂಡಿದೆ.  ಇದರಿಂದ ನಗರದ ಜನ ಜೀವನ ಸುಗಮವಾಗಲಿದೆ ಎಂದು ಮೋದಿ ಹೇಳಿದ್ದಾರೆ.
 

click me!