ಕೊರೋನಾ ವೈರಸ್ ವಿರುದ್ಧ ಪತಂಜಲಿಯ ಕೊರೋನಿಲ್ ಆಯುರ್ವೇದ ಮಾತ್ರೆ| ಪತಂಜಲಿ ಕೊರೋನಿಲ್ ಮಾತ್ರೆಗೆ ಮಾನ್ಯತೆ ನೀಡಿಲ್ಲ: ಡಬ್ಲ್ಯುಎಚ್‌ಒ
ನವದೆಹಲಿ(ಫೆ.22): ಕೊರೋನಾ ವೈರಸ್ ವಿರುದ್ಧ ಪತಂಜಲಿಯ ಕೊರೋನಿಲ್ ಆಯುರ್ವೇದ ಮಾತ್ರೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಮನ್ನಣೆ ದೊರೆತಿದೆ ಎಂದು ಯೋಗಗುರು ಬಾಬಾ ರಾಮ್‌ದೇವ್ ಹೇಳಿಕೊಂಡ ಬೆನ್ನಲ್ಲೇ, ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಸ್ಪಷ್ಟನೆ ಹೊರಬಿದ್ದಿದೆ.
‘ಕೊರೋನಾ ವೈರಸ್ ವಿರುದ್ಧ ಯಾವುದೇ ಸಾಂಪ್ರದಾಯಿಕ ಔಷಧವನ್ನು ನಾವು ಪರಿಶೀಲನೆ ನಡೆಸಿಲ್ಲ. ಈ ರೀತಿಯ ಯಾವುದೇ ಔಷಧಗಳಿಗೆ ಮಾನ್ಯತೆಯನ್ನು ನೀಡಿಲ್ಲ’ ಎಂದು ಡಬ್ಲ್ಯುಎಚ್‌ಒ ಟ್ವೀಟ್ ಮಾಡಿದೆ. ಆದರೆ, ಈ ಹೇಳಿಕೆಯಲ್ಲಿ ಪತಂಜಲಿ ಅಥವಾ ಕೊರೋನಿಲ್ ಮಾತ್ರೆಗಳನ್ನು ಡಬ್ಲ್ಯು ಎಚ್‌ಒ ಉಲ್ಲೇಖಿಸಿಲ್ಲ.
‘ಪತಂಜಲಿಯ ಕೊರೋನಿಲ್ ಆಯುರ್ವೇದ ಮಾತ್ರೆಗಳಿಗೆ ಭಾರತ ಸರ್ಕಾರದಿಂದ ಮಾನ್ಯತೆ ದೊರೆತಿದೆ. ಅಲ್ಲದೇ ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಮಾನ್ಯತೆ ಪಡೆದುಕೊಂಡಿದೆ. ಕೊರೋನಾ ವೈರಸ್ ನಿಯಂತ್ರಣಕ್ಕೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೊರೋನಿಲ್ ಮಾತ್ರೆಗಳು ಅತ್ಯಂತ ಪರಿಣಾಮಕಾರಿಯಾಗಿವೆ’ ಎಂದು ರಾಮ್‌ದೇವ್ ಹೇಳಿಕೊಂಡಿದ್ದರು. ಈ ಕುರಿತಾದ ವೈಜ್ಞಾನಿಕ ಪುರವೆಯನ್ನು ರಾಮ್‌ದೇವ್ ಬಿಡುಗಡೆ ಮಾಡಿದ್ದರು.