
ತಿರುವನಂತಪುರಂ (ಅ.16): ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಕುನ್ನತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪಾಕಿಸ್ತಾನ ಮುಕ್ಕು (ಜಂಕ್ಷನ್) ಎಂಬ ಗ್ರಾಮದ ಹೆಸರು ಇದೀಗ ವಿವಾದದ ಕೇಂದ್ರವಾಗಿ ಹೊರಹೊಮ್ಮಿದೆ. ಕೂಡಲೇ ಗ್ರಾಮದ ಹೆಸರು ಬದಲಿಸಬೇಕು. ಗ್ರಾಮದಲ್ಲಿ ಸರ್ಕಾರ ಹಾಕಿರುವ ಬೋರ್ಡ್ ಬದಲಿಸಬೇಕೆಂದು ಅದು ಒತ್ತಾಯಿಸಿದೆ.
ಪಾಕಿಸ್ತಾನ್ ಮುಕ್ಕು ಹೆಸರು ಬಂದಿದ್ದು ಹೇಗೆ?
ಮುಸ್ಲಿಮರೇ ಹೆಚ್ಚಾಗಿರುವ ಸಣ್ಣ ಪ್ರದೇಶವೊಂದಕ್ಕೆ 7 ದಶಕಗಳ ಹಿಂದೆಯೇ ಬಸ್ ಸಂಪರ್ಕವಿತ್ತು. ಆಗ ಬಸ್ ಚಾಲಕನಾಗಿದ್ದ ನೀಲಕಂಠ ಪಿಳ್ಳೈ ಗ್ರಾಮಕ್ಕೆ ಬಂದು ಬಸ್ ನಿಲ್ಲಿಸಿದಾಕ್ಷಣ ಇಲ್ಲಿಗೆ ಬಂದರೆ ಪಾಕಿಸ್ತಾನಕ್ಕೆ ಬಂದ ಹಾಗೆ ಆಗುತ್ತದೆ ಎಂದು ತಮಾಷೆಗೆ ಹೇಳಿದ್ದರಂತೆ. ಬಳಿಕ ಆ ಗ್ರಾಮ ಅಥವಾ ಬಸ್ ನಿಲ್ಲುವ ಜಾಗಕ್ಕೆ ಪಾಕಿಸ್ತಾನ್ ಮುಕ್ಕು (ಪಾಕಿಸ್ತಾನ ಜಂಕ್ಷನ್) ಎಂದು ಅಘೋಷಿತವಾಗಿ ನಾಮಕರಣವಾಗಿತ್ತು. ಹಳೆಯ ಹೆಸರಾದ ‘ನಿರ್ವಾತುಮುಕ್ಕು’ ಮರೆತೇ ಹೋಗಿತ್ತು. ಆದರೆ ಪಹಲ್ಗಾಂ ದಾಳಿಯ ಬಳಿಕ, ಗ್ರಾಮದ ಹೆಸರಿನಿಂದ ಪಾಕಿಸ್ತಾನ ತೆಗೆದು ಹಾಕುವ ಎನ್ನುವ ಆಗ್ರಹ ಕೇಳಿಬಂದು, ಹೆಸರು ಬದಲಾವಣೆ ಕೋರಿ ಗ್ರಾಮ ಪಂಚಾಯತ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಪ್ರಸ್ತಾವ ಜಾರಿಗೆ ಬಂದಿರಲಿಲ್ಲ.
ಲೋಕೋಪಯೋಗಿ ಇಲಾಖೆಯಿಂದಲೇ ಬೋರ್ಡ್!
ಆದರೆ ಇತ್ತೀಚೆಗೆ ಗ್ರಾಮದ ರಸ್ತೆ ರಿಪೇರಿ ಬಳಿಕ ಅಲ್ಲಿ ದೊಡ್ಡದಾಗಿ ಪಾಕಿಸ್ತಾನ್ ಮುಕ್ಕು ಎಂದು ಬೋರ್ಡ್ ಹಾಕಲಾಗಿದೆ. ಇದು ರಾಜ್ಯ ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೂಪ್ ಆಂಟನಿ ಜೋಸೆಫ್, ‘ಸಿಪಿಎಂ ಆಡಳಿತಕ್ಕೆ ಒಳಪಟ್ಟಿರುವ ಕೇರಳದಲ್ಲಿ ಆಪರೇಷನ್ ಸಿಂದೂರ ಸಂಭ್ರಮಿಸಲಾಗದು. ಆದರೆ ಒಂದು ಪ್ರದೇಶಕ್ಕೆ ಪಾಕಿಸ್ತಾನದ ಹೆಸರನ್ನು ಹೆಮ್ಮೆಯಿಂದ ಇಡಬಹುದು. ಆ ಹೆಸರನ್ನು ಬದಲಿಸುವ ಬಿಜೆಪಿ ಯತ್ನಕ್ಕೆ ಸ್ಥಳೀಯರು ಬೆಂಬಲಿಸಿದರಾದರೂ ಕಮ್ಯುನಿಸ್ಟ್ ಸರ್ಕಾರ ಒಪ್ಪಲಿಲ್ಲ. ಸಾಲದ್ದಕ್ಕೆ ಈಗ ಬೋರ್ಡ್ ಕೂಡ ಹಾಕಿದ್ದಾರೆ’ ಎಂದು ಕಿಡಿ ಕಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ