
ನವದೆಹಲಿ (ಅ.22): ಪಾಕ್ ಆಕ್ರಮಿತ ಕಾಶ್ಮೀರದ 3 ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದ್ದೇವೆ ಎಂಬ ಭಾರತೀಯ ಸೇನೆಯ ಹೇಳಿಕೆ ಸುಳ್ಳು ಎಂದು ಪ್ರತಿಪಾದಿಸಿರುವ ಪಾಕಿಸ್ತಾನ, ಯಾವುದೇ ವಿದೇಶಿ ರಾಯಭಾರಿ ಅಥವಾ ಮಾಧ್ಯಮಗಳನ್ನು ದಾಳಿ ನಡೆದ ಸ್ಥಳಕ್ಕೆ ಕರೆತಂದು ತನ್ನ ವಾದವನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದೆ.
ಭಾರತೀಯ ಸೇನಾ ಮುಖ್ಯಸ್ಥರು 3 ಶಿಬಿರಗಳನ್ನು ನಾಶ ಮಾಡಿರುವುದಾಗಿ ಹೇಳಿದ್ದಾರೆ. ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರ ಹೇಳಿಕೆಯಿಂದ ಬೇಸರವಾಗಿದೆ. ದಾಳಿ ಮಾಡಲು ಅಲ್ಲಿ ಶಿಬಿರಗಳೇ ಇಲ್ಲ. ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿ ಯಾವುದೇ ವಿದೇಶಿ ರಾಜತಾಂತ್ರಿಕ/ಮಾಧ್ಯಮದವರನ್ನು ಕರೆತಂದು ತಮ್ಮ ವಾದವನ್ನು ಸಾಬೀತುಪಡಿಸಲಿ ಎಂದು ಪಾಕಿಸ್ತಾನದ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫರ್ ಅವರು ಟ್ವೀಟ್ ಮಾಡಿದ್ದಾರೆ.
ಪುಲ್ವಾಮಾ ದಾಳಿ ಬಳಿಕ ಭಾರತೀಯ ಸೇನಾ ನಾಯಕತ್ವದ ಸುಳ್ಳು ಹೇಳಿಕೆ ನೀಡುವ ಪ್ರವೃತ್ತಿ ಈ ಭಾಗದ ಶಾಂತಿಗೆ ತೊಡಕಾಗಿದೆ. ಇದು ವೃತ್ತಿಪರ ಮಿಲಿಟರಿ ನೈತಿಕತೆಗೆ ವಿರುದ್ಧವಾದುದು ಎಂದು ಹೇಳಿದ್ದಾರೆ.
ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನ ವಿರುದ್ಧ ಭಾರತೀಯ ಸೇನೆ ಪ್ರತಿ ದಾಳಿ ನಡೆಸಿದೆ. 3 ಉಗ್ರಗಾಮಿ ಶಿಬಿರಗಳು ನಾಶವಾಗಿವೆ. ಒಂದು ಶಿಬಿರಕ್ಕೆ ತೀವ್ರ ರೀತಿಯ ಹಾನಿಯಾಗಿದೆ. 6ರಿಂದ 10 ಪಾಕಿಸ್ತಾನಿ ಯೋಧರು ಹತರಾಗಿದ್ದಾರೆ.
ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಉಗ್ರರು ಸಾವಿಗೀಡಾಗಿದ್ದಾರೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿಕೆ ನೀಡಿದ್ದರು. ಕನಿಷ್ಠ 35 ಉಗ್ರರು ಈ ದಾಳಿ ವೇಳೆ ಹತರಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಕೆಲ ಮಾಧ್ಯಮಗಳು ಹಾಗೂ ಸುದ್ದಿಸಂಸ್ಥೆಗಳು ವರದಿ ಮಾಡಿದ್ದವು. ಆದರೆ ನಾಗರಿಕ ಪ್ರದೇಶಗಳ ಮೇಲೆ ಭಾರತ ದಾಳಿ ನಡೆಸಿದೆ ಎಂದು ಪಾಕಿಸ್ತಾನ ದೂಷಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ