ಭಾರತವಷ್ಟೇ ಅಲ್ಲ, ನಮ್ಮ ಬಳಿಯೂ ಅಣ್ವಸ್ತ್ರ: ಪಾಕ್‌ ಅಧ್ಯಕ್ಷ

By Suvarna NewsFirst Published Aug 15, 2021, 12:01 PM IST
Highlights

* 1998ಕ್ಕಿಂತ ಮೊದಲೇ ನಮ್ಮ ಬಳಿ ಅಣ್ವಸ್ತ್ರ

* ಭಾರತವಷ್ಟೇ ಅಲ್ಲ, ನಮ್ಮ ಬಳಿಯೂ ಅಣ್ವಸ್ತ್ರ: ಪಾಕ್‌ ಅಧ್ಯಕ್ಷ

* ಪಾಕ್‌ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಹೇಳಿಕೆ

ಇಸ್ಲಾಮಾಬಾದ್‌(ಆ.15): 1974ರಲ್ಲಿ ಭಾರತ ತನ್ನ ಮೊದಲ ಯಶಸ್ವಿ ಪರಮಾಣು ಪರೀಕ್ಷೆ ನಡೆಸಿದ ಕೇವಲ 7 ವರ್ಷಗಳಲ್ಲೇ ನಾವು ಸಹ ಪರಮಾಣು ಸಾಮರ್ಥ್ಯವನ್ನು ಸಾಧಿಸಿದ್ದೆವು ಎಂದು ಪಾಕಿಸ್ತಾನ ಅಧ್ಯಕ್ಷ ಆರಿಫ್‌ ಆಲ್ವಿ ತಿಳಿಸಿದ್ದಾರೆ. ತನ್ಮೂಲಕ ತಾನು ಪರಮಾಣು ರಾಷ್ಟ್ರ ಎಂದು ಘೋಷಿಸಿಕೊಂಡ 1998ಕ್ಕಿಂತ ಮುಂಚಿತವಾಗಿಯೇ ಪಾಕಿಸ್ತಾನ ಪರಮಾಣು ಹೊಂದಿದ ರಾಷ್ಟ್ರವಾಗಿತ್ತು ಎಂದು ಪರೋಕ್ಷವಾಗಿ ನುಡಿದಿದ್ದಾರೆ.

ಪಾಕಿಸ್ತಾನ ಅಧ್ಯಕ್ಷರ ನಿವಾಸದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ದೇಶದ 75ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ವೇಳೆ ದೇಶದ ಧ್ವಜಾರೋಹಣದ ಬಳಿಕ ಮಾತನಾಡಿದ ಆರಿಫ್‌ ಅವರು, ಕಳೆದ 74 ವರ್ಷಗಳಲ್ಲಿ ನಮ್ಮ ಮೇಲೆ 3 ಯುದ್ಧಗಳು ನಡೆದಿವೆ. ಆದಾಗ್ಯೂ, ನಮಗೆ ಎದುರಾಗಿರುವ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಮುಂದೆ ಸಾಗುತ್ತಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.

ಮುಂದುವರಿದು ಪಾಕಿಸ್ತಾನ ತನ್ನ ಬುದ್ಧಿವಂತಿಕೆ ಮತ್ತು ಕಠಿಣ ಪರಿಶ್ರಮದ ಮುಖಾಂತರ ಕೇವಲ 7 ವರ್ಷಗಳಲ್ಲಿ ಪರಮಾಣು ನಿರೋಧಕ ಸೃಷ್ಟಿಸುವಲ್ಲಿ ಯಶಸ್ವಿಯಾಯಿತು. ಅಲ್ಲದೆ ಅಭಿವೃದ್ಧಿ ಹೊಂದಿದ ಮತ್ತು ತಮ್ಮ ರಕ್ಷಣೆಗಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ ರಾಷ್ಟ್ರಗಳ ಪಟ್ಟಿಯನ್ನು ನಾವು ಸಹ ಸೇರಿಕೊಂಡೆವು ಎಂದು ದೇಶದ ಸಾಧನೆ ಬಗ್ಗೆ ಕೊಂಡಾಡಿದರು.

click me!