
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್‌ನಲ್ಲಿ ಮಂಗಳವಾರ (ಏಪ್ರಿಲ್ 22)ರಂದು ನಡೆದ ಭಯಾನಕ ಭಯೋತ್ಪಾದಕ ದಾಳಿಯಲ್ಲಿ 28 ಜನರು ಸಾವನ್ನಪ್ಪಿದ ನಂತರ, ಜ್ಯೋತಿರ್ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಈ ದಾಳಿಯು 'ಭಯೋತ್ಪಾದನೆಗೆ ಒಂದು ಧರ್ಮವಿದೆ' ಎಂಬುದನ್ನು ಸಾಬೀತುಪಡಿಸಿದೆ ಎಂದಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಈ ಘಟನೆಯನ್ನು ಕೇವಲ ಹತ್ಯೆಯ ಪ್ರಕರಣವೆಂದು ಕಾಣದೆ, ಇದು ಭಾರತೀಯ ರಾಷ್ಟ್ರಕ್ಕೆ ಮತ್ತು 80-90 ಕೋಟಿ ಹಿಂದೂಗಳಿಗೆ ಸವಾಲು ಹಾಕಿದ ಅವಮಾನ ಎಂದು ವಿವರಿಸಿದರು.
ದೇಶಕ್ಕೆ ಮಾಡಿದ ಅವಮಾನ:
ಈ ದಾಳಿಯು ಇಡೀ ದೇಶಕ್ಕೆ ಮಾಡಿದ ಅವಮಾನವಾಗಿದೆ. ಧರ್ಮವನ್ನು ಕೇಳಿ, ಕಲ್ಮಾ ಪಠಿಸಲು ಹೇಳಿ, ಸುನ್ನತಿ ಪರೀಕ್ಷಿಸಿ ಕೊಲೆ ಮಾಡಲಾಗಿದೆ. ಇದು ಸ್ಪಷ್ಟವಾಗಿ ಭಯೋತ್ಪಾದನೆಗೆ ಧರ್ಮವಿದೆ ಎಂಬುದನ್ನು ತೋರಿಸುತ್ತದೆ ಎಂದು ಶಂಕರಾಚಾರ್ಯರು ಖಾರವಾಗಿ ಹೇಳಿದ್ದಾರೆ. ದೇಶದ ನಾಯಕರು 'ಭಯೋತ್ಪಾದನೆಗೆ ಧರ್ಮವಿಲ್ಲ' ಎಂದು ಪದೇ ಪದೇ ಹೇಳುವುದನ್ನು ಟೀಕಿಸಿದ ಅವರು, 'ನಾಯಕರೇ, ಮಾತನಾಡುವ ಮೊದಲು ಯೋಚಿಸಿ. ಈ ಘಟನೆ ಭಯೋತ್ಪಾದನೆಗೆ ಧರ್ಮವಿದೆ ಎಂಬುದನ್ನು ಸಾಬೀತುಪಡಿಸಿದೆ' ಎಂದು ಕಿಡಿಕಾರಿದರು.
ಇದನ್ನೂ ಓದಿ: ಒಂದು ವಾರದಲ್ಲಿ ಭಾರತ ದೊಡ್ಡ ದಾಳಿ ನಡೆಸಬಹುದು; ಪಾಕ್‌ಗೆ ಮಾಜಿ ಹೈಕಮಿಷನರ್ ಅಬ್ದುಲ್ ಬಸಿತ್ ಎಚ್ಚರಿಕೆ!
ಭದ್ರತಾ ವೈಫಲ್ಯಕ್ಕೆ ಯಾರು ಹೊಣೆ?
ಪ್ರಧಾನಿ ನರೇಂದ್ರ ಮೋದಿ ಅವರು ನೋಟು ರದ್ದತಿ ಮತ್ತು 370ನೇ ವಿಧಿ ರದ್ದತಿಯಿಂದ ಭಯೋತ್ಪಾದನೆ ಕೊನೆಗೊಳ್ಳುತ್ತದೆ ಎಂದಿದ್ದರು. ಆದರೆ, ಪಹಲ್ಗಾಮ್ ದಾಳಿಯು ಈ ಭರವಸೆಯ ವೈಫಲ್ಯವನ್ನು ಎತ್ತಿ ತೋರಿಸಿದೆ ಎಂದು ಶಂಕರಾಚಾರ್ಯರು ಆರೋಪಿಸಿದರು. 'ಪ್ರಧಾನಿ ಮೋದಿ ಮುಂದೆ ಬಂದು ಈ ವೈಫಲ್ಯಕ್ಕೆ ಯಾರು ಹೊಣೆ ಎಂದು ಉತ್ತರಿಸಬೇಕು. ಕಾಶ್ಮೀರವನ್ನು ಸ್ವರ್ಗದ ಕಣಿವೆ ಎಂದು ಭರವಸೆ ನೀಡಿದವರು, ಅಲ್ಲಿಗೆ ಪ್ರವಾಸಕ್ಕೆ ತೆರಳಿದವರ ರಕ್ಷಣೆಯಲ್ಲಿ ಎಲ್ಲಿ ತಪ್ಪು ಮಾಡಿದ್ದೀರಿ ಎಂಬುದನ್ನು ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ದಾಳಿಯು ಲಷ್ಕರ್-ಎ-ತೊಯ್ಬಾದೊಂದಿಗೆ ಸಂಬಂಧ ಹೊಂದಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಎಂಬ ಉಗ್ರ ಸಂಘಟನೆಯಿಂದ ನಡೆಸಲ್ಪಟ್ಟಿದೆ ಎಂದು ವರದಿಯಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈ ದಾಳಿಗೆ ಸಂಬಂಧಿಸಿದಂತೆ ಮೂವರು ಶಂಕಿತರ ಸ್ಕೆಚ್‌ಗಳನ್ನು ಬಿಡುಗಡೆ ಮಾಡಿದ್ದಾರೆ, ಇವರಲ್ಲಿ ಇಬ್ಬರು ಪಾಕಿಸ್ತಾನದವರು ಎಂದು ಗುರುತಿಸಲಾಗಿದೆ.
iಇದನ್ನೂ ಓದಿ: ಟೆರರಿಸ್ಟ್‌ಗಳಿಗೆ ಗೈಡ್ ಮಾಡಿದ್ದ ಸ್ಥಳೀಯ ವ್ಯಕ್ತಿ ಆದಿಲ್ ಥೋಕರ್, ಆಸಿಫ್ ಶೇಖ್‌ಗೆ ತರಬೇತಿ ನೀಡಿದ್ದ ಪಾಕಿಸ್ತಾನ!
ಈ ಘಟನೆಯು ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಉಲ್ಬಣಗೊಳಿಸಿದ್ದು, ಭಾರತವು ಇಂಡಸ್ ವಾಟರ್ ಒಪ್ಪಂದವನ್ನು ಸ್ಥಗಿತಗೊಳಿಸಿರುವುದು ಮತ್ತು ಅಟ್ಟಾರಿ ಗಡಿಯನ್ನು ಮುಚ್ಚಿರುವುದು ಈಗಾಗಲೇ ವಿವಾದಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ