ಬಿಹಾರ ವಿಧಾನಸಭೆಗೆ ಮೊದಲ ಹಂತದ ಮತದಾನ ಅಂತ್ಯ: ಶೇಕಡಾ 64 ಮತದಾನ

Published : Nov 06, 2025, 08:54 PM IST
bihar election voting

ಸಾರಾಂಶ

Bihar first phase election analysisಬಿಹಾರದ ಮೊದಲ ಹಂತದ ಚುನಾವಣೆಯು ಶೇ. 64 ರಷ್ಟು ಮತದಾನದೊಂದಿಗೆ ಅಂತ್ಯಗೊಂಡಿದೆ. ಈ ಹಂತವು ಎನ್‌ಡಿಎ ಮತ್ತು ಇಂಡಿಯಾ ಕೂಟಕ್ಕೆ ನಿರ್ಣಾಯಕವಾಗಿದ್ದು, ತೇಜಸ್ವಿ ಯಾದವ್, ವಿಜಯ್ ಕುಮಾರ್ ಸಿನ್ಹಾ ಸೇರಿದಂತೆ ಹಲವು ಪ್ರಮುಖ ನಾಯಕರ ಭವಿಷ್ಯವನ್ನು ನಿರ್ಧರಿಸಲಿದೆ.

ಬಿಹಾರ ಮೊದಲ ಹಂತದ ಮತದಾನ ಮುಕ್ತಾಯ: ಶೇ.64.46

ಬಿಹಾರದಲ್ಲಿ ಇಂದು ಮೊದಲ ಹಂತದ ಚುನಾವಣೆ ಅಂತ್ಯಗೊಂಡಿದ್ದು,  ಶೇ.64.46 ಮತದಾನವಾಗಿದೆ. ಇಂದು ಬಿಹಾರದ 18 ಜಿಲ್ಲೆಗಳಲ್ಲಿ ಒಟ್ಟು 121 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಬಿಹಾರದ ಲಖಿಸರೈನಲ್ಲಿ ಡಿಸಿಎಂ ವಿಜಯ್ ಕುಮಾರ್ ಸಿನ್ಹಾ ಅವರ ಬೆಂಗಾವಲು ವಾಹನದ ಮೇಲೆ ದಾಳಿ ನಡೆದಿದ್ದರಿಂದ ಆ ಪ್ರದೇಶದಲ್ಲಿ ಸ್ವಲ್ಪ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಟ್ಟರೆ ಎಲ್ಲೆಡೆ ಮತದಾನ ಶಾಂತವಾಗಿ ನಡೆದಿದೆ. ಈ ಚುನಾವಣೆ ಆಡಳಿತರೂಢ ಎನ್‌ಡಿಎ ಹಾಗೂ ವಿರೋಧ ಪಕ್ಷ ಇಂಡಿಯಾ ಕೂಟದ ಆರ್‌ಜೆಡಿ ಸೇರಿದಂತೆ ಹಲವು ಪಕ್ಷಗಳಿಗೆ ಭಾರಿ ಮಹತ್ವದ ಚುನಾವಣೆಯಾಗಿದ್ದು, ಆರ್‌ಜೆಡಿಯ ತೇಜಸ್ವಿ ಯಾದವ್, ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಸೇರಿದಂತೆ ಹಲವಾರು ಪ್ರಮುಖ ನಾಯಕರು ಮತ್ತು ಹಲವಾರು ಸಚಿವರು ಕಣದಲ್ಲಿದ್ದಾರೆ.

ಚುನಾವಣಾ ಆಯೋಗ (ECI) ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಬಿಹಾರ್ ವಿಧಾನಸಭಾಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.64.46 ರಷ್ಟು ಮತದಾನ ದಾಖಲಾಗಿದೆ. 18 ಜಿಲ್ಲೆಗಳ ಪೈಕಿ ಬೇಗುಸರಾಯ್‌ನಲ್ಲಿ ಅತಿ ಹೆಚ್ಚು ಶೇ.67.32 ರಷ್ಟು ಮತದಾನವಾಗಿದ್ದು, ಗೋಪಾಲ್‌ಗಂಜ್‌ನಲ್ಲಿ ಶೇ.64.96 ಮತ್ತು ಮುಜಫರ್‌ಪುರದಲ್ಲಿ ಶೇ.64.635 ರಷ್ಟು ಮತದಾನವಾಗಿದೆ. ಪಾಟ್ನಾ ಜಿಲ್ಲೆಯಲ್ಲಿ ಶೇ.55.02 ರಷ್ಟು ಮತದಾನವಾಗಿದೆ.

ಎರಡೂ ಒಕ್ಕೂಟಗಳಲ್ಲಿರುವ ಸಣ್ಣ ಸಣ್ಣ ಪಕ್ಷಗಳಿಗೆ ಈ ಹಂತವು ನಿರ್ಣಾಯಕವಾಗಿದೆ. ಸಿಪಿಐ(ಎಂಎಲ್) ಸ್ಪರ್ಧಿಸುತ್ತಿರುವ 20 ಸ್ಥಾನಗಳಲ್ಲಿ ಹತ್ತು ಕ್ಷೇತ್ರಗಳಿಗೆ ಈ ಮೊದಲ ಹಂತದಲ್ಲಿ ಮತದಾನ ನಡೆದಿದೆ. ಆ ಹತ್ತು ಸ್ಥಾನಗಳಲ್ಲಿ ಪಕ್ಷವು ಪ್ರಸ್ತುತ ಆರು ಸ್ಥಾನಗಳನ್ನು ಹೊಂದಿದೆ. ಈ ಹಂತವು ನಿರ್ಣಾಯಕವಾಗಿದೆ ಏಕೆಂದರೆ ಸಿಪಿಐ(ಎಂಎಲ್) ತನ್ನ ಬಲವನ್ನು ಕಾಪಾಡಿಕೊಳ್ಳಲು ಮತ್ತು ಮಹಾಘಟಬಂಧನ್‌ಗೆ ಉತ್ತಮ ಆರಂಭವನ್ನು ಖಚಿತಪಡಿಸಿಕೊಳ್ಳಲು ಈ ಆರು ಸ್ಥಾನಗಳನ್ನು ಉಳಿಸಿಕೊಳ್ಳಲೇಬೇಕು. ಅವರ ಭದ್ರಕೋಟೆಗಳಲ್ಲಿ ಗಮನಾರ್ಹ ಭಾಗವನ್ನು ಆರಂಭದಲ್ಲಿಯೇ ಕಳೆದುಕೊಂಡರೆ ಮೈತ್ರಿಕೂಟದಲ್ಲಿ ಅವರಿಗೆ ಬೆಲೆ ಕಡಿಮೆಯಾಗುವುದು.

ಎನ್‌ಡಿಎ ಕೂಟದಲ್ಲಿರುವ ಲೋಕ ಜನಶಕ್ತಿ ಪಕ್ಷ (ರಾಮ್‌ವಿಲಾಸ್ ಪಾಸ್ವಾನ್ ಅವರ ಪಕ್ಷ) ಸ್ಪರ್ಧಿಸಿದ 29 ಸ್ಥಾನಗಳಲ್ಲಿ ಹತ್ತು ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆದಿದೆ. ಈ ಹತ್ತು ಸ್ಥಾನಗಳಲ್ಲಿ ಎನ್‌ಡಿಎ ಕೇವಲ ಒಂದನ್ನು ಮಾತ್ರ ಹೊಂದಿದೆ. ಇದರರ್ಥ ಎಲ್‌ಜೆಪಿ(ಆರ್‌ವಿ) ಇತರ ಒಂಬತ್ತು ಸ್ಥಾನಗಳಲ್ಲಿ ಗೆಲುವು ಸಾಧಿಸಲು ಮತ್ತು ಪ್ರಸ್ತುತ ವಿರೋಧ ಪಕ್ಷಗಳು ಹೊಂದಿರುವ ಸ್ಥಾನಗಳಲ್ಲಿ ಲಾಭ ಗಳಿಸುವ ಮೂಲಕ ಮೈತ್ರಿಕೂಟಕ್ಕೆ ತನ್ನ ಮೌಲ್ಯ ಸಾಬೀತುಪಡಿಸಬೇಕಿದೆ.

ಎಲ್‌ಜೆಪಿ(ಆರ್‌ವಿ)ಯ ಹಂಚಿಕೆಯು ಎನ್‌ಡಿಎ ಮಿತ್ರಪಕ್ಷಗಳಲ್ಲಿ, ವಿಶೇಷವಾಗಿ ಜೆಡಿ(ಯು)ನಲ್ಲಿ ಅಸಮಾಧಾನ ಉಂಟು ಮಾಡಿದೆ. ಎಲ್‌ಜೆಪಿಯು ವಿಧಾನಸಭೆಯಲ್ಲಿ ಪಕ್ಷದ ಪ್ರಾತಿನಿಧ್ಯದ ಹೊಂದಿಲ್ಲದಿದ್ದರು ಅವರಿಗೆ ಅಷ್ಟು ಕ್ಷೇತ್ರಗಳನ್ನು ಬಿಟ್ಟು ಕೊಟ್ಟಿರುವುದಕ್ಕೆ ಜೆಡಿಯು ಅಸಮಾಧಾನ ವ್ಯಕ್ತಪಡಿಸಿದೆ.

ಮೊದಲ ಹಂತದ ಚುನಾವಣೆ ನಡೆದ 121 ಕ್ಷೇತ್ರಗಳಲ್ಲಿ ವಿರೋಧ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಮತ್ತು ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಸೇರಿದಂತೆ ನಿತೀಶ್ ಕುಮಾರ್ ಸರ್ಕಾರದಲ್ಲಿರುವ ಒಂದು ಡಜನ್‌ಗೂ ಹೆಚ್ಚು ಬಿಜೆಪಿ ಮತ್ತು ಜೆಡಿಯು ಸಚಿವರು ಕಣದಲ್ಲಿದ್ದಾರೆ.

ತಮ್ಮ ಕಿರಿಯ ಮಗ ಮತ್ತು ಉತ್ತರಾಧಿಕಾರಿ ತೇಜಸ್ವಿ ಯಾದವ್ ಮುಂದಿನ ಸರ್ಕಾರ ರಚಿಸುತ್ತಾರೆ ಎಂದು ಆಶಿಸುತ್ತಿರುವ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್, ಸಾಮಾಜಿಕ ಮಾಧ್ಯಮದಲ್ಲಿ ರೋಟಿಯನ್ನು ತಿರುಗಿಸಬೇಕು ಎಂದು ಹೇಳುವ ಮೂಲಕ ಸರ್ಕಾರ ಬದಲಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರೆ ಇತ್ತ ಲಖಿಸರಾಯ್‌ನಿಂದ ಸತತ ನಾಲ್ಕನೇ ಬಾರಿಗೆ ಆಯ್ಕೆಯಾಗಲು ಬಯಸುತ್ತಿರುವ ಉಪಮುಖ್ಯಮಂತ್ರಿ ವಿಜಯ್‌ ಸಿನ್ಹಾ ತಮ್ಮ ಬೆಂಗಾವಲು ಮೇಲಿನ ದಾಳಿಯನ್ನು ಖಂಡಿಸಿದ್ದು, ಅತ್ಯಂತ ಹಿಂದುಳಿದ ವರ್ಗಗಳಿಗೆ ಸೇರಿದ ಮತದಾರರನ್ನು ಬೆದರಿಸಲು ಪ್ರಯತ್ನಿಸುತ್ತಿರುವ ಆರ್‌ಜೆಡಿ ಬೆಂಬಲಿಗರು ತಮ್ಮ ಬೆಂಗಾವಲು ಪಡೆಯಲ್ಲಿದ್ದ ಕಾರಿನ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್
ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ