* ಕೇರಳದಲ್ಲಿ ತೀವ್ರ ಆತಂಕ
* ಲಸಿಕೆ ಪಡೆದ 40000 ಜನಕ್ಕೆ ಸೋಂಕು!
* ಕಾರಣ ಪತ್ತೆ ಹಚ್ಚಲು ಜೀನೋಮ್ ಪರೀಕ್ಷೆಗೆ ಕೇಂದ್ರ ಸೂಚನೆ
* ದೇವರ ನಾಡು ತಲ್ಲಣ
ನವದೆಹಲಿ(ಆ.12): ಕೇರಳದಲ್ಲಿ ಲಸಿಕೆಯ ಎರಡೂ ಡೋಸ್ ಪಡೆದುಕೊಂಡಿದ್ದ 40 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ ಆಗಿದೆ ಎಂಬ ಆತಂಕಕಾರಿ ವಿಷಯವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೂಲಗಳು ಬಹಿರಂಗಪಡಿಸಿವೆ.
3ನೇ ಅಲೆಗೆ ಮುನ್ನುಡಿ ಬರೆಯುತ್ತಿದೆ ಎಂದು ಹೇಳಲಾಗಿರುವ ಕೇರಳದಲ್ಲಿ ಪ್ರತಿನಿತ್ಯ 20 ಸಾವಿರಕ್ಕೂ ಅಧಿಕ ಕೇಸ್‌ಗಳು ಪತ್ತೆ ಆಗುತ್ತಿವೆ. ಇದರ ಬೆನ್ನಲ್ಲೇ, ಪೂರ್ಣ ಲಸಿಕೆ ಪಡೆದುಕೊಂಡವರಲ್ಲಿಯೂ ಸೋಂಕು ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರ ಈ ರೀತಿಯ ಎಲ್ಲಾ ಪ್ರಕರಣಗಳ ಮಾದರಿಗಳನ್ನು ಜೀನೋಮ್ ಪರೀಕ್ಷೆಗೆ ಒಳಪಡಿಸಿ ಇತರ ಪ್ರಕರಣಗಳ ಜೊತೆ ಹೋಲಿಕೆ ಮಾಡುವಂತೆ ಕೇರಳ ಸರ್ಕಾರಕ್ಕೆ ಸೂಚನೆ ನೀಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಒಂದು ವೇಳೆ ವೈರಸ್ ರೂಪಾಂತರಗೊಂಡು ಲಸಿಕೆಯಿಂದ ಉತ್ಪತ್ತಿ ಆದ ರೋಗ ನಿರೋಧಕ ಶಕ್ತಿಯನ್ನು ಭೇದಿಸುವ ಸಾಮರ್ಥ್ಯ ಹೊಂದಿದ್ದರೆ ನಿಜವಾಗಿಯೂ ಕಳವಳಕಾರಿ. ಆದರೆ, ವೇಗವಾಗಿ ಹರಡುತ್ತಿರುವ ಡೆಲ್ಟಾವೈರಸ್‌ನಿಂದಾಗಿ ಲಸಿಕೆ ಪಡೆದವರಲ್ಲಿಯೂ ಸೋಂಕು ಕಾಣಿಸಿಕೊಳ್ಳುತ್ತಿದೆಯೇ ಎನ್ನುವುದು ಖಚಿತಪಟ್ಟಿಲ್ಲ. ಅದರಲ್ಲೂ ಪಟ್ಟಣಂತಿಟ್ಟಜಿಲ್ಲೆಯಲ್ಲಿಯೇ ಈ ರೀತಿಯ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಈ ಜಿಲ್ಲೆಯಲ್ಲಿ ಮೊದಲ ಡೋಸ್ ಪಡೆದವರ ಪೈಕಿ 14,974 ಜನರು ಹಾಗೂ 2ನೇ ಡೋಸ್ ಪಡೆದವರ ಪೈಕಿ 5,042 ಮಂದಿ ಸೋಂಕಿತರಾಗಿದ್ದಾರೆ.
ಅಲ್ಲದೇ ಸೋಂಕಿನಿಂದ ಈಗಾಗಲೇ ಗುಣಮುಖರಾದವರಲ್ಲಿ ಮತ್ತೊಮ್ಮೆ ಸೋಂಕು ಕಾಣಿಸಿಕೊಳ್ಳುವುದು ತೀರಾ ಅಪರೂಪ. ಆದರೆ, ಕೇರಳದ ಕೆಲವು ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಕೂಡ ಕಂಡುಬರುತ್ತಿವೆ.