ಇ.ಡಿ. ವಿರುದ್ಧವೇ ಎಸ್ಸಿಎಸ್ಟಿ ಕಾಯ್ದೆ ಅಡಿ ಜಾರ್ಖಂಡ್‌ ನಿರ್ಗಮಿತ ಸಿಎಂ ಹೇಮಂತ್ ಸೊರೇನ್‌ ಕೇಸು

By Kannadaprabha News  |  First Published Feb 1, 2024, 8:01 AM IST

ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್ ಅವರು, ತಮ್ಮ ದೆಹಲಿ ನಿವಾಸದಲ್ಲಿ ಇ.ಡಿ. ಅಧಿಕಾರಿಗಳು ನಡೆಸಿದ ಶೋಧಕಾರ್ಯದ ವಿರುದ್ಧ ಇ.ಡಿ. ಅಧಿಕಾರಿಗಳ ವಿರುದ್ಧವೇ ಬುಧವಾರ ಪ್ರಕರಣ ದಾಖಲಿಸಿದ್ದಾರೆ. ರಾಂಚಿಯ ಎಸ್‌ಸಿ/ಎಸ್‌ಟಿ ಪೊಲೀಸ್‌ ಠಾಣೆಯಲ್ಲಿ ಎಸ್ಸಿಎಸ್ಟಿ ದೌರ್ಜನ್ಯ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ.


ರಾಂಚಿ: ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್ ಅವರು, ತಮ್ಮ ದೆಹಲಿ ನಿವಾಸದಲ್ಲಿ ಇ.ಡಿ. ಅಧಿಕಾರಿಗಳು ನಡೆಸಿದ ಶೋಧಕಾರ್ಯದ ವಿರುದ್ಧ ಇ.ಡಿ. ಅಧಿಕಾರಿಗಳ ವಿರುದ್ಧವೇ ಬುಧವಾರ ಪ್ರಕರಣ ದಾಖಲಿಸಿದ್ದಾರೆ. ರಾಂಚಿಯ ಎಸ್‌ಸಿ/ಎಸ್‌ಟಿ ಪೊಲೀಸ್‌ ಠಾಣೆಯಲ್ಲಿ ಎಸ್ಸಿಎಸ್ಟಿ ದೌರ್ಜನ್ಯ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಜಾರಿ ನಿರ್ದೇಶನಾಲಯದ ಕೆಲವು ಹಿರಿಯ ಅಧಿಕಾರಿಗಳನ್ನು ಹೆಸರಿಸಲಾಗಿದೆ ಎಂದು ರಾಂಚಿಯ ಹಿರಿಯ ಪೊಲೀಸ್‌ ಅಧೀಕ್ಷಕ ಚಂದನ್‌ ಕುಮಾರ್‌ ಸಿನ್ಹಾ ಹೇಳಿದ್ದಾರೆ.

ಜಾರ್ಖಂಡ್‌ನಲ್ಲಿ ನಡೆದ ಭೂ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿರುವ ಸೊರೇನ್‌ ಅವರ ಮನೆಯ ಮೇಲೆ ಸೋಮವಾರ ದಾಳಿ ನಡೆಸಿದ್ದ ಇ.ಡಿ. ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದರು. ಈ ನಿವಾಸದಲ್ಲಿ ಸುಮಾರು 13 ಗಂಟೆಗಳ ಕಾಲ ಬೀಡು ಬಿಟ್ಟಿದ್ದ ಅಧಿಕಾರಿಗಳು ಸೊರೇನ್‌ ಅವರನ್ನು ವಿಚಾರಣೆ ನಡೆಸಲು ಕಾದಿದ್ದರು. ಈ ಶೋಧ ಕಾರ್ಯದ ಬಳಿಕ 36 ಲಕ್ಷ ರು. ನಗದು ಮತ್ತು ಒಂದು ಕಾರನ್ನು ವಶಪಡಿಸಿಕೊಂಡಿದ್ದರು.

Tap to resize

Latest Videos

ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅರೆಸ್ಟ್, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ!

ಏನಿದು ಹಗರಣ?

ಜಾರ್ಖಂಡ್‌ ರಾಜಧಾನಿ ರಾಂಚಿಯಲ್ಲಿ ಸೇನೆಗೆ ಸೇರಿದ ನೂರಾರು ಕೋಟಿ ರು. ಬೆಲೆ ಬಾಳುವ ಸುಮಾರು 7 ಎಕರೆ ಭೂಮಿಯನ್ನು ಅಕ್ರಮ ದಾಖಲೆ ಸೃಷ್ಟಿಸುವ ಮೂಲಕ ಕಬಳಿಸಿದ ಆರೋಪ ಸೊರೇನ್‌ ಮೇಲಿದೆ. ಈ ಪ್ರಕರಣದಲ್ಲಿ ಐಎಎಸ್‌ ಅಧಿಕಾರಿಗಳು ಸೇರಿದಂತೆ 14 ಜನರನ್ನು ಈಗಾಗಲೇ ಬಂಧಿಸಲಾಗಿದೆ. ಈ ಭೂಮಿ ಗೋಲ್‌ಮಾಲ್‌ ಪ್ರಕರಣ ಸಂಬಂಧ ಅಕ್ರಮ ಹಣದ ವಹಿವಾಟು ತನಿಖೆಯನ್ನು ಇ.ಡಿ. ನಡೆಸುತ್ತಿದೆ.

ಹೇಮಂತ್‌ ಸೊರೇನ್‌ ಬಂಧನ ಜಾರ್ಖಂಡ್‌ನಲ್ಲಿ ಹೈಡ್ರಾಮಾ!

ರಾಂಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಕಾರ್ಯಾಧ್ಯಕ್ಷ ಹೇಮಂತ್‌ ಸೊರೇನ್‌ ಅವರನ್ನು 3 ದಿನಗಳ ಹೈಡ್ರಾಮಾ ಬಳಿಕ ಜಾರಿ ನಿರ್ದೇಶನಾಲಯ (ಇ.ಡಿ.) ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಬಂಧಿಸಿತ್ತು. ಮುಖ್ಯಮಂತ್ರಿ ಹುದ್ದೆಗೆ ಸೊರೇನ್‌ ರಾತ್ರಿ 8.30ರ ಸುಮಾರಿಗೆ ರಾಜೀನಾಮೆ ನೀಡಿದ್ದು, ಇದಾದ ಕೆಲವೇ ನಿಮಿಷಗಳಲ್ಲಿ ಅವರ ಬಂಧನವಾಗಿದೆ. ಇದರೊಂದಿಗೆ ಮುಖ್ಯಮಂತ್ರಿಯಾಗಿದ್ದಾಗಲೇ ತನಿಖಾ ಸಂಸ್ಥೆ ಬಲೆಗೆ ಬಿದ್ದಿದ್ದ ಜಯಲಲಿತಾ, ಲಾಲು ಪ್ರಸಾದ್‌ ಯಾದವ್‌ ಅವರ ಸಾಲಿಗೆ ಹೇಮಂತ್‌ ಕೂಡ ಸೇರ್ಪಡೆಯಾಗಿದ್ದಾರೆ.

ಆದಿವಾಸಿಗಳು ಹಿಂದೂಗಳಲ್ಲ : ಜಾರ್ಖಂಡ್ ಸಿಎಂ ಹೇಳಿಕೆಗೆ ಬಾರಿ ವಿರೋಧ!

ಹೇಮಂತ್ ಬಂಧನವನ್ನು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ಮುಖಂಡ ರಾಹುಲ್‌ ಗಾಂಧಿ ಖಂಡಿಸಿದ್ದಾರೆ. ‘ಮೋದಿ ಅವರ ಜತೆ ಯಾರು ಹೋಗುವುದಿಲ್ಲವೋ ಅವರೆಲ್ಲ ಜೈಲಿಗೆ ಹೋದಂತೆ. ಇ.ಡಿ. ಹಾಗೂ ಸಿಬಿಐಗಳನ್ನು ಮೋದಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಖಂಡಿಸಿದ್ದಾರೆ. ಬಂಧನಕ್ಕೂ ಮುನ್ನ ಹೇಮಂತ್‌ ಕೂಡ ‘ನಾನು ನಿರ್ದೋಷಿ. ಬಿಜೆಪಿ ಸುಖಾಸುಮ್ಮನೇ ನನ್ನನ್ನು ಸಿಲುಕಿಸಿದೆ’ ಎಂದು ಕಿಡಿಕಾರಿದ್ದಾರೆ. ಈ ನಡುವೆ ಇಂಡಿಯಾ ಕೂಟದ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಬಂಧನಕ್ಕೆ ಷರತ್ತು ವಿಧಿಸಿದ ಸೊರೇನ್‌:

ಬುಧವಾರ ಮಧ್ಯಾಹ್ನ 1.20ರಿಂದ ಸತತ 7 ತಾಸು ಇ.ಡಿ., ಹೇಮಂತ್‌ರನ್ನು ಅವರ ನಿವಾಸದಲ್ಲೇ ವಿಚಾರಣೆ ನಡೆಸಿತು. ಪ್ರಕರಣದಲ್ಲಿ ಸೊರೇನ್‌ ವಿರುದ್ಧ ಸಾಕಷ್ಟು ಖಚಿತ ಸಾಕ್ಷ್ಯಗಳು ಸಿಕ್ಕ ಕಾರಣ ಅವರನ್ನು ಬಂಧಿಸಲು ಇ.ಡಿ. ನಿರ್ಧರಿಸಿತು. ಬಂಧನ ಖಚಿತವಾಗುತ್ತಿದ್ದಂತೆಯೇ ಅವರು ರಾಜೀನಾಮೆಗೆ ನಿರ್ಧರಿಸಿದರು. ‘ಆದರೆ ಮೊದಲು ರಾಜೀನಾಮೆ ನೀಡುವೆ. ಇದಕ್ಕೆ ಒಪ್ಪಿದರೆ ಮಾತ್ರ ಅರೆಸ್ಟ್‌ ಮೆಮೋಗೆ ಸಹಿ ಹಾಕುವೆ’ ಎಂದು ಅವರು ಇ.ಡಿ.ಗೆ ಷರತ್ತು ವಿಧಿಸಿದರು. ಇದಕ್ಕೆ ಒಪ್ಪಿದ ಇ.ಡಿ. ಅಧಿಕಾರಿಗಳು ತಮ್ಮ ವಶದಲ್ಲೇ ಸೊರೇನ್‌ ಅವರನ್ನು ಕಾರಿನಲ್ಲಿ ರಾಜಭವನಕ್ಕೆ ಕರೆದೊಯ್ದರು. ಅಲ್ಲಿ ರಾಜ್ಯಪಾಲರಿಗೆ ಸೊರೇನ್ ರಾಜೀನಾಮೆ ಸಲ್ಲಿಸಿದರು. ಇದೇ ವೇಳೆ ಜೆಎಂಎಂ-ಕಾಂಗ್ರೆಸ್‌ ಮೈತ್ರಿಕೂಟದ ಇತರ ಶಾಸಕರು ಸಚಿವ ಚಂಪೈ ಸೊರೇನ್‌ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿ ರಾಜ್ಯಪಾಲರಿಗೆ ಸರ್ಕಾರ ರಚನೆ ಹಕ್ಕು ಮಂಡಿಸುವ ಪತ್ರ ಸಲ್ಲಿಸಿದರು.

3 ದಿನಗಳ ಹೈಡ್ರಾಮಾ:

ಸೊರೇನ್‌ಗೆ ಈ ಹಗರಣದಲ್ಲಿ 7 ಸಲ ಇ.ಡಿ. ಸಮನ್ಸ್‌ ಜಾರಿ ಮಾಡಿತ್ತು. ಆದರೆ ಅವರು ವಿಚಾರಣೆಗೆ ಪದೇ ಪದೇ ಗೈರು ಹಾಜರಾಗುತ್ತಿದ್ದರು. ಸತತ 3 ಸಮನ್ಸ್‌ಗೆ ಗೈರು ಹಾಜರಾದರೆ ಸಿಎಂರನ್ನು ಬಂಧಿಸುವ ಅಧಿಕಾರ ಇ.ಡಿ.ಗೆ ಇದೆ. ಹೀಗಾಗಿ ಜ.29 ಹಾಗೂ ಜ.31- ಹೀಗೆ 2 ದಿನ ವಿಚಾರಣೆಗೆ ಬನ್ನಿ ಎಂದು ಇ.ಡಿ. ಇತ್ತೀಚೆಗೆ ಸೊರೇನ್‌ಗೆ ನೋಟಿಸ್‌ ನೀಡಿತ್ತು. ಜ.29ರಂದು ದಿಲ್ಲಿ ನಿವಾಸದಲ್ಲಿ ಹಾಗೂ ಜ.31ರಂದು ರಾಂಚಿ ನಿವಾಸದಲ್ಲಿ ವಿಚಾರಣೆ ಎದುರಿಸಿ ಎಂದು ಸೂಚಿಸಿತ್ತು.

ಆದರೆ ಜ.29ರಂದು ದಿಲ್ಲಿ ನಿವಾಸಕ್ಕೆ ಹೇಮಂತ್‌ ಬಂದಾಗ ಅಲ್ಲಿ ಅವರು ಹಾಜರಿರಲಿಲ್ಲ. 13 ತಾಸು ಅವರಿಗಾಗಿ ಕಾದ ಇ.ಡಿ. ಅಧಿಕಾರಿಗಳು ಮನೆಯಲ್ಲಿದ್ದ 1 ಬಿಎಂಡಬ್ಲ್ಯು ಕಾರು ಹಾಗೂ 36 ಲಕ್ಷ ರು. ನಗದು ವಶಪಡಿಸಿಕೊಂಡಿದ್ದರು. ಸೊರೇನ್‌ಗಾಗಿ ಇ.ಡಿ. ಏರ್‌ಪೋರ್ಟಲ್ಲೂ ಶೋಧ ನಡೆಸಿತ್ತು.

ಆದರೆ ಆಗಲೇ ಇ.ಡಿ. ತಮ್ಮನ್ನು ಬಂಧಿಸಬಹುದು ಎಂಬ ಸೂಚನೆ ಅರಿತ ಸೊರೇನ್, ಏರ್‌ಪೋರ್ಟಲ್ಲಿ ಸಿಕ್ಕಿ ಬೀಳಬಹುದು ಎಂಬ ಆತಂಕದಿಂದಾಗಿ 1200 ಕಿ.ಮೀ. ದೂರದ ರಾಂಚಿಗೆ ದಿಲ್ಲಿಯಿಂದ ಕಾರಿನಲ್ಲಿ ಪ್ರಯಾಣ ಮಾಡಿ ಜ.30ರಂದು ರಾಂಚಿ ತಲುಪಿದ್ದರು ಹಾಗೂ ಜ.31ರಂದು ತಮ್ಮ ರಾಂಚಿ ನಿವಾಸಕ್ಕೆ ವಿಚಾರಣೆಗೆ ಬನ್ನಿ ಎಂದು ಇ.ಡಿ.ಗೆ ಹೇಳಿದ್ದರು. ಆ ಪ್ರಕಾರ ಬುಧವಾರ ಅವರ ನಿವಾಸಕ್ಕೆ ಬಂದ ಇ.ಡಿ. ಅಧಿಕಾರಿಗಳು, ಹೇಮಂತ್‌ರನ್ನು ಬಂಧಿಸಿದ್ದಾರೆ

ನಿಷೇಧಾಜ್ಞೆ:

ಸೊರೇನ್‌ ವಿಚಾರಣೆಯ ಹಿನ್ನೆಲೆಯಲ್ಲಿ ರಾಜಧಾನಿ ರಾಂಚಿಯ ಆಯಕಟ್ಟಿನ ಸ್ಥಳಗಳು, ಸಿಎಂ ಮನೆಯ ಸುತ್ತಮತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಎಲ್ಲೆಡೆ ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದ್ದರು.

click me!