
ನಾಗಪುರ (ಆ.30): ‘ಯಾವುದೇ ವ್ಯಕ್ತಿಯನ್ನು ಅಗತ್ಯವಿದ್ದಾಗ ಬಳಸಿಕೊಂಡು, ಕೆಲಸ ಮುಗಿದ ಬಳಿಕ ದೂರ ತಳ್ಳುವುದು ತಪ್ಪು’ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ. ತಮ್ಮನ್ನು ಸಂಸದೀಯ ಮಂಡಳಿಯಿಂದ ಕೈಬಿಟ್ಟಬೆನ್ನಲ್ಲೇ ಅವರು ಈ ರೀತಿಯ ಮಾತುಗಳನ್ನು ಆಡಿರುವುದು, ಬಿಜೆಪಿ ವರಿಷ್ಠರ ತಮ್ಮ ಅಸಮಾಧಾನ ತೋರ್ಪಡಿಸಿಕೊಂಡಿರುವುದರ ಸಂಕೇತ ಎಂದು ವಿಶ್ಲೇಷಿಸಲಾಗುತ್ತಿದೆ. ನಾಗಪುರದಲ್ಲಿ ಶನಿವಾರ ಉದ್ದಿಮೆದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಬಳಸಿ ಬೀಸಾಡುವ ಕೆಲಸ ಮಾಡಬೇಡಿ. ಒಳ್ಳೆಯ ದಿನಗಳೇ ಇರಲಿ ಅಥವಾ ಕೆಟ್ಟದಿನಗಳೇ ಇರಲಿ, ಯಾರದ್ದಾದರೂ ಕೈಹಿಡಿದರೆ ಆತ ನಿಮ್ಮ ಸ್ನೇಹಿತ. ಆತನನ್ನು ಬಿಡಬೇಡಿ. ಉದಯಿಸುತ್ತಿರುವ ಸೂರ್ಯನನ್ನು ಆರಾಧಿಸಬೇಡಿ’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಬಿಜೆಪಿಯ ಅತ್ಯುನ್ನತ ನೀತಿ ನಿರೂಪಣಾ ಸಮಿತಿಯಾದ ಸಂಸದೀಯ ಮಂಡಳಿಯಿಂದ ನಿತಿನ್ ಗಡ್ಕರಿ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಅವರನ್ನು ಕಳೆದ ವಾರ ಕೈಬಿಡಲಾಗಿತ್ತು. ಇದೇ ವೇಳೆ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತಿತರರಿಗೆ ಸ್ಥಾನ ನೀಡಲಾಗಿತ್ತು. ಆರೆಸ್ಸೆಸ್ ಕೇಂದ್ರ ಕಚೇರಿ ಇರುವ ನಾಗಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ, ಸಂಘದ ನಾಯಕರ ಜತೆ ಅತ್ಯುತ್ತಮ ಸಂಪರ್ಕ ಹೊಂದಿರುವ ಗಡ್ಕರಿ ಅವರನ್ನು ಪಕ್ಷದ ಪ್ರಮುಖ ಮಂಡಳಿಯಿಂದ ಕೈಬಿಟ್ಟಿದ್ದು ಅಚ್ಚರಿಗೆ ಕಾರಣವಾಗಿತ್ತು.
ಪಕ್ಷಕ್ಕೆ ಸಂಬಂಧಿಸಿದಂತೆ ಕೆಲವು ಅಹಿತಕರ ಹೇಳಿಕೆಗಳನ್ನು ನೀಡಿದ ಕಾರಣದಿಂದಾಗಿ ಆರೆಸ್ಸೆಸ್ ಸಮ್ಮತಿಯ ನಂತರವೇ ಗಡ್ಕರಿ ಅವರಿಗೆ ಕೊಕ್ ನೀಡಲಾಗಿದೆ ಎಂಬ ವರದಿಗಳು ಬಂದಿದ್ದವು. ಅದರ ಬೆನ್ನಲ್ಲೇ ಗಡ್ಕರಿ ಈ ಮಾತುಗಳನ್ನು ಆಡಿದ್ದಾರೆ.
ಕಾಂಗ್ರೆಸ್ ಸೇರುವ ಬದಲು ಬಾವಿಗೆ ಬೀಳುವೆ: ಇದೇ ಕಾರ್ಯಕ್ರಮದಲ್ಲಿ ಹಳೆಯ ಘಟನೆಯೊಂದನ್ನು ಗಡ್ಕರಿ ಸ್ಮರಿಸಿದರು. ವಿದ್ಯಾರ್ಥಿ ನಾಯಕನಾಗಿದ್ದಾಗ ಕಾಂಗ್ರೆಸ್ ಸಚಿವ ಶ್ರೀಕಾಂತ್ ಜಿಚ್ಕರ್ ಅವರು ಕಾಂಗ್ರೆಸ್ ಸೇರಲು ಆಹ್ವಾನಿಸಿದ್ದರು. ಆದರೆ ನಾನು ಬಿಜೆಪಿಯನ್ನು ಆಯ್ಕೆ ಮಾಡಿಕೊಂಡೆ. ಅಲ್ಲದೆ, ಕಾಂಗ್ರೆಸ್ ಸೇರುವ ಬದಲಿಗೆ ಬಾವಿಗೆ ಬೇಕಾದರೂ ಬೀಳುತ್ತೇನೆ. ಕಾಂಗ್ರೆಸ್ ಸಿದ್ಧಾಂತ ನನಗೆ ಇಷ್ಟವಿಲ್ಲ ಎಂದು ಶ್ರೀಕಾಂತ್ ಅವರಿಗೆ ಹೇಳಿದ್ದೆ ಎಂದು ಗಡ್ಕರಿ ತಿಳಿಸಿದರು.
2024ರ ಲೋಕಸಭೆ, ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಪುನಾರಚನೆ
2024ರ ಲೋಕಸಭಾ ಚುನಾವಣೆ ಬೆನ್ನಿಗಿರುವಾಗಲೇ ಬಿಜೆಪಿ (BJP) ತನ್ನ ಪ್ರರಮೋಚ್ಚ ನೀತಿ ನಿರ್ಧಾರಕ ವಿಭಾಗವಾದ ‘ಸಂಸದೀಯ ಮಂಡಳಿ’ಯನ್ನು (BJP parliamentary board) ಆ.17ರಂದು ಪುನಾರಚನೆ ಮಾಡಿತ್ತು, ಮಂಡಳಿಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಂಜಾಬ್‌ನ ಸಿಖ್ ನಾಯಕ ಇಕ್ಬಾಲ್ ಸಿಂಗ್ ಲಾಲ್‌ಪುರ ಸೇರಿದಂತೆ 6 ಜನರನ್ನು ಸೇರ್ಪಡೆ ಮಾಡಿಕೊಂಡಿದೆ. ಅಚ್ಚರಿ ಎಂಬಂತೆ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಹಾಗೂ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಮಂಡಳಿಯಿಂದ ಕೈಬಿಟ್ಟಿತ್ತು.
ತಿಂಗಳಿಗೊಮ್ಮೆ ಮೋದಿ ಕರ್ನಾಟಕ್ಕೆ ಬರಲು ಸಮ್ಮತಿ: ಯಡಿಯೂರಪ್ಪ
ಸಂಸದೀಯ ಮಂಡಳಿ ಜೊತೆಗೆ ಕೇಂದ್ರೀಯ ಚುನಾವಣಾ ಸಮಿತಿಯನ್ನೂ ಪುನಾರಚನೆ ಮಾಡಲಾಗಿದ್ದು, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರನ್ನು ಸೇರ್ಪಡೆ ಮಾಡಲಾಗಿದೆ. ಆದರೆ ಅಲ್ಪಸಂಖ್ಯಾತ ನಾಯಕ ಶಹನವಾಜ್ ಹುಸೇನ್, ಜುವಾಲ್ ಓರಂ, ವಿಜಯಾ ರತ್ನಾಕರ್ ಅವರನ್ನು ಕೈಬಿಡಲಾಗಿತ್ತು.
ಹೈಕಮಾಂಡ್ ದೊಡ್ಡ ಜವಾಬ್ದಾರಿ ಕೊಟ್ಟಿದೆ, ಸ್ಥಾನಮಾನ ನಿರೀಕ್ಷಿಸಿರಲಿಲ್ಲ: ಬಿಎಸ್‌ವೈ
ಮಂಡಳಿ ಪುನಾರಚನೆ: ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ನಿಧನ, ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿ ಮತ್ತು ಥಾವರ್ ಚಂದ್ ಗೆಹಲೋತ್ ಕರ್ನಾಟಕದ ರಾಜ್ಯಪಾಲರಾಗಿ ನೇಮಕವಾದ ಬಳಿಕ 11 ಸದಸ್ಯ ಬಲದ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಹಲವು ಸ್ಥಾನ ತೆರವಾಗಿತ್ತು. ಇದೀಗ ಆ ಸ್ಥಾನಗಳನ್ನು ತುಂಬುವ ಯತ್ನ ಮಾಡಲಾಗಿದೆ. ಕರ್ನಾಟಕದ ಲಿಂಗಾಯುತ ಸಮುದಾಯಕ್ಕೆ ಸೇರಿದ ಬಿ.ಎಸ್.ಯಡಿಯೂರಪ್ಪ, ಒಬಿಸಿ ಸಮುದಾಯಕ್ಕೆ ಸೇರಿದ ಸುಧಾ ಯಾದವ್, ಕೆ.ಲಕ್ಷ್ಮಣ್, ಪರಿಶಿಷ್ಟಜಾತಿಗೆ ಸೇರಿದ ಸತ್ಯನಾರಾಯಣ್ ಜತಿಯಾ, ಪಂಜಾಬ್‌ನ ಸಿಖ್ ನಾಯಕ ಇಕ್ಬಾಲ್ ಸಿಂಗ್ ಲಾಲ್‌ಪುರ, ಪರಿಶಿಷ್ಠ ಪಂಗಡಕ್ಕೆ ಸೇರಿದ ಕೇಂದ್ರ ಸಚಿವ ಸರ್ಬಾನಂದ್ ಸೋನೋವಾಲ್ ಸಂಸದೀಯ ಮಂಡಳಿ ಸೇರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ