
ಮುಂಬೈ: ‘ಭಾರತದ ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶ ನೀಡಿದ್ದು, ಇಲ್ಲಿ ಒಂದಲ್ಲ ಒಂದು ದಿನ ಹಿಜಾಬ್ ಧರಿಸಿದ ಮಹಿಳೆ ದೇಶದ ಪ್ರಧಾನಿ ಆಗಿಯೇ ಆಗುತ್ತಾರೆ. ಅದನ್ನು ನೋಡಲು ನಾನಿಲ್ಲದೇ ಇರಬಹುದು. ಆದರೆ ಹಿಜಾಬ್ ಧರಿಸಿದವಳು ಪ್ರಧಾನಿ ಆಗೋದು ಖಚಿತ’ ಎಂದು ಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಭರವಸೆ ವ್ಯಕ್ತಪಡಿಸಿದ್ದಾರೆ. ಇಲ್ಲಿ ಸ್ಥಳೀಯ ಸಂಸ್ಥೆ ಚುನಾವಣಾ ಪ್ರಚಾರದ ವೇಳೆ ಅವರು ಈ ಮಾತು ಆಡಿದ್ದಾರೆ. ಆದರೆ ಒವೈಸಿ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿ, ‘ಇರಾನ್‌ನಲ್ಲಿ ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಮುಸ್ಲಿಂ ಮಹಿಳೆಯರು ಅದನ್ನು ಧರಿಸಲು ಬಯಸುವುದಿಲ್ಲ. ಒವೈಸಿ ಅರ್ಧ ಸತ್ಯವನ್ನಷ್ಟೇ ಹೇಳಿ ಬೇಜಾವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ’ ಎಂದಿದೆ.
ತಿರುವನಂತಪುರ: ಶಬರಿಮಲೆ ದ್ವಾರಪಾಲಕ ವಿಗ್ರಹ ಮತ್ತು ಗರ್ಭಗುಡಿಯ ಬಾಗಿಲಿನ ಕವಚದ ಚಿನ್ನ ಕಣ್ಮರೆ ಪ್ರಕರಣದಲ್ಲಿ ಎಸ್‌ಐಟಿಯಿಂದ ಬಂಧಿತರಾಗಿರುವ ದೇಗುಲದ ಪ್ರಧಾನ ಅರ್ಚಕ (ತಂತ್ರಿ) ಕಂಡರಾರು ರಾಜೀವರು ಆರೋಗ್ಯದಲ್ಲಿ ಏರುಪೇರು ಸಂಭವಿಸಿದೆ. ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ ರಾಜೀವರು ಅವರನ್ನು ಬಂಧಿಸಿದ ಎಸ್‌ಐಟಿ, ಜಿಲ್ಲಾ ಉಪ ಬಂದೀಖಾನೆಯಲ್ಲಿ ಇರಿಸಿತ್ತು. ಶನಿವಾರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ ಎಂದು ರಾಜೀವರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿ, ನಂತರ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರು ನಿವಾಸಿ ಉನ್ನಿಕೃಷ್ಣನ್ ಪೊಟ್ಟಿ ಜೊತೆ ಸಂಬಂಧವಿರುವ ಕಾರಣ ಎಸ್‌ಐಟಿ ಶುಕ್ರವಾರ ತಂತ್ರಿಗಳನ್ನು ಬಂಧಿಸಿತ್ತು.
ನವದೆಹಲಿ: ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿ, ಬೆಂಗಳೂರಿನಲ್ಲಿ ಶೀಘ್ರವೇ ತನ್ನ ಮೊದಲ ಕಾರು ಶೋರೂಂ ಆರಂಭಿಸಲಿದೆ. ಪೂರ್ಣ ಎಲೆಕ್ಟ್ರಿಕ್, ಡ್ರೈವರ್‌ಲೆಸ್ ಕಾರುಗಳಿಗೆ ಖ್ಯಾತಿ ಹೊಂದಿರುವ ಅಮೆರಿಕ ಮೂಲದ ಕಂಪನಿ ಈಗಾಗಲೇ ಮುಂಬೈ, ದೆಹಲಿ, ಗುರುಗ್ರಾಮದಲ್ಲಿ ತನ್ನ ಶೋರೂಮ ತೆರೆದಿದೆ. ಬೆಂಗಳೂರಿನದ್ದು 4ನೇಯದ್ದಾಗಲಿದೆ. ಇಂದಿರಾನಗರದಲ್ಲಿ ಕಂಪನಿ ತನ್ನ ಮಳಿಗೆ ತೆರೆಯುವ ಸಾಧ್ಯತೆ ಇದೆ. ಹಲವು ವರ್ಷಗಳ ಜಂಜಾಟದ ಬಳಿಕ 2024ರ ಡಿಸೆಂಬರ್‌ನಲ್ಲಿ ಟೆಸ್ಲಾ ಭಾರತಕ್ಕೆ ಮುಂಬೈ ಮೂಲಕ ಪಾದಾರ್ಪಣೆ ಮಾಡಿತ್ತು.
ಅಶ್ಲೀಲ ಚಿತ್ರಗಳ ವಿವಾದ: ಎಕ್ಸ್‌ನ ಎಐ ಗ್ರೋಕ್‌ಗೆ ಇಂಡೋನೇಷ್ಯಾ ನಿಷೇಧ
ಜಕಾರ್ತ: ಅಶ್ಲೀಲ ಚಿತ್ರಗಳ ಸೃಷ್ಟಿಗೆ ಅವಕಾಶ ಕೊಡುವ ಎಕ್ಸ್‌ನ ಎಐ ಅಂಗವಾದ ಗ್ರೋಕ್ ಬಗ್ಗೆ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಗ್ರೋಕ್ ಅನ್ನು ಇಂಡೋನೇಷ್ಯಾ ತಾತ್ಕಾಲಿಕವಾಗಿ ನಿಷೇಧಿಸಿದೆ. ಈ ಮೂಲಕ ಇಂಥ ಕ್ರಮ ಕೈಗೊಂಡ ಮೊದಲ ದೇಶವಾಗಿ ಹೊರಹೊಮ್ಮಿದೆ. ಕೆಲ ದಿನಗಳಿಂದ ‘ಎಕ್ಸ್’ ಬಳಕೆದಾರರು ಗ್ರೋಕ್ ಬಳಸಿ ಅಶ್ಲೀಲ ಚಿತ್ರ ರಚಿಸುವ ಬೆಳವಣಿಗೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಇಂಡೋನೇಷ್ಯಾ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ. ಈಗಾಗಲೇ ಭಾರತ ಸರ್ಕಾರ ಕೂಡಾ ಅಶ್ಲೀಲ ಚಿತ್ರ ರಚಿಸುವ ಅವಕಾಶ ತೆಗೆಯುವಂತೆ ಸೂಚಿಸಿದೆ. ಮತ್ತೊಂದೆಡೆ ಆನ್‌ಲೈನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡದ ಎಕ್ಸ್ ಅನ್ನೇ ನಿಷೇಧಿಸುವ ಬಗ್ಗೆ ಬ್ರಿಟನ್ ಚಿಂತನೆ ನಡೆಸಿದೆ.
ಖಾಸಗಿ ಪ್ಲೇನ್ ತುರ್ತು ಭೂಸ್ಪರ್ಶ: 6 ಜನರಿಗೆ ಗಾಯ, ಇಬ್ಬರು ಗಂಭೀರ
ರೂರ್ಕೆಲಾ: ಭುವನೇಶ್ವರದಿಂದ ಇಲ್ಲಿಗೆ ಹೊರಟಿದ್ದ ಖಾಸಗಿ ವಿಮಾನ ಸಂಸ್ಥೆಯ ಸಣ್ಣ ವಿಮಾನವೊಂದು ತುರ್ತುಭೂಸ್ಪರ್ಶ ಮಾಡಿದ ಘಟನೆ ಶನಿವಾರ ನಡೆದಿದೆ. ಘಟನೆಯಲ್ಲಿ ವಿಮಾನದಲ್ಲಿ 6 ಜನರು ಗಾಯಗೊಂಡಿದ್ದಾರೆ. ಈ ಪೈಕಿ ಓರ್ವ ಪೈಲಟ್ ಮತ್ತು ಇನ್ನೊಬ್ಬ ಪ್ರಯಾಣಿಕರ ಪರಿಸ್ಥಿತಿ ಗಂಭೀರವಾಗಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಮಾನ ರೂರ್ಕೆಲಾದಲ್ಲಿ ಇಳಿಯಬೇಕಿದ್ದು, ನಿಗದಿತ ಸ್ಥಳಕ್ಕಿಂತ 10 ಕಿ.ಮೀ ಹಿಂದೆ ಜಲ್ದಾ ಎಂಬಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ವಿಮಾನ ಜನವಸತಿ ಪ್ರದೇಶದಲ್ಲಿ ಲ್ಯಾಂಡಿಂಗ್ ಆಗದ ಕಾರಣ ದೊಡ್ಡ ಅನಾಹುತ ತಪ್ಪಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ