
ಸಾಮಾನ್ಯವಾಗಿ ಸಂಸ್ಥೆಗಳು ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ಮಾಧ್ಯಮಗಳಲ್ಲಿ ಭರ್ಜರಿ ಜಾಹೀರಾತುಗಳನ್ನು ನೀಡುತ್ತಾರೆ. ಕೆಲವೊಮ್ಮೆ ಇದರಲ್ಲಿ ಇರುವುದಕ್ಕಿಂತ ಉತ್ಪ್ರೇಕ್ಷೆ ಹೆಚ್ಚಿರುತ್ತದೆ. ಆದರೆ ಜನ ಸಾಮಾನ್ಯರು ಯಾರು ಇದರ ಬಗ್ಗೆ ಕೋರ್ಟ್ ಮೆಟ್ಟಿಲೇರುವುದು ತೀರಾ ಕಡಿಮೆ. ಆದರೆ ಅಪರೂಪದ ಪ್ರಕರಣವೊಂದರಲ್ಲಿ ಗ್ರಾಹಕ ನ್ಯಾಯಾಲಯವೊಂದು ಜಾಹೀರಾತಿನಲ್ಲಿ ತೋರಿಸಿದ್ದಕ್ಕಿಂತ ಒಂದೇ ಒಂದು ಬಿಸ್ಕೆಟ್ ಪ್ಯಾಕೆಟ್‌ನಲ್ಲಿ ಕಡಿಮೆ ಇದ್ದಿದ್ದಕ್ಕೆ ಗ್ರಾಹಕನಿಗೆ ಬರೋಬ್ಬರಿ ಒಂದು ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ.
ಚೆನ್ನೈ ಮೂಲದ ಪಿ ದಿಲ್ಲಿಬಾಬು ಎಂಬುವವರು ಬಿಸ್ಕೆಟ್ ಸಂಸ್ಥೆಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದವರು. ಇವರು ಐಟಿಸಿ ಲಿಮಿಟೆಡ್‌ಗೆ ಸೇರಿದ ಸನ್‌ಫಿಸ್ಟ್ ಮಾರಿ ಲೈಟ್ ಬಿಸ್ಕೆಟ್ ಪ್ಯಾಕೇಟೊಂದನ್ನು ಖರೀದಿ ಮಾಡಿದ್ದರು, ತಮ್ಮ ಮನೆ ಸುತ್ತ ವಾಸ ಮಾಡುವ ಬೀದಿ ನಾಯಿಗಳಿಗೆ ತಿನ್ನಿಸುವ ಸಲುವಾಗಿ ಅವರು ಬಿಸ್ಕೆಟ್ ಪ್ಯಾಕೇಟ್ ಖರೀದಿಸಿದ್ದು, ಇದರಲ್ಲಿ 15 ಬಿಸ್ಕೆಟ್‌ಗಳಿದ್ದವು. ಆದರೆ ಬಿಸ್ಕೆಟ್ ಹೊರಭಾಗದಲ್ಲಿರುವ ಲಕೋಟೆಯಲ್ಲಿ 16 ಬಿಸ್ಕೆಟ್ ಎಂದು ನಮೂದಿಸಲಾಗಿತ್ತು.
ಮದುವೆ ಫೋಟೊ ಕೊಡದ ಫೋಟೊಗ್ರ್ರಾಫರ್‌ಗೆ ₹30 ಸಾವಿರ ದಂಡ ಮತ್ತು ಪರಿಹಾರ!
ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ಸ್ಪಷ್ಟನೆ ಕೇಳಲು ದಿಲೀಪ್ ಅವರು ಸ್ಥಳೀಯ ಅಂಗಡಿಯಲ್ಲಿಯೂ ಕವರ್ ಮೇಲೆ ಇರುವಂತೆ ಒಳಗೆ 16 ಬಿಸ್ಕೆಟ್ ಏಕಿಲ್ಲ, ಒಂದು ಬಿಸ್ಕೆಟ್ ಏಕೆ ಕಡಿಮೆ ಇದೆ ಎಂದು ಕೇಳಿದ್ದಾರೆ, ಇದರ ಜೊತೆಗೆ ಐಟಿಸಿ ಸ್ಟೋರ್‌ನಲ್ಲೂ ಅವರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆದರೆ ಅವರಿಗೆ ಈ ಬಗ್ಗೆ ಎಲ್ಲೂ ಸ್ಪಷ್ಟ ಉತ್ತರ ಸಿಕ್ಕಿಲ್ಲ, ಇದರಿಂದ ಸಿಟ್ಟಿಗೆದ್ದ ದಿಲ್ಲಿಬಾಬು ಅವರು ಈ ಬಗ್ಗೆ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಐಟಿಸಿ ಪ್ರತಿದಿನವೂ 50 ಲಕ್ಷ ಪ್ಯಾಕೇಟ್ ಬಿಸ್ಕೆಟ್‌ಗಳನ್ನು ಉತ್ಪಾದನೆ ಮಾಡುತ್ತದೆ, ಒಂದು ಬಿಸ್ಕೆಟ್‌ಗೆ 75 ಪೈಸೆ ವೆಚ್ಚವಿದೆ. ಆದರೆ ಪ್ಯಾಕೇಟ್‌ನಲ್ಲಿ 16 ಬಿಸ್ಕೆಟ್ ಇದೆ ಎಂದು 15 ಮಾತ್ರ ಪ್ಯಾಕ್ ಮಾಡುವ ಮೂಲಕ ಸಂಸ್ಥೆ ಗ್ರಾಹಕರಿಗೆ ಪ್ರತಿನಿತ್ಯ 29 ಲಕ್ಷ ರೂಪಾಯಿಗಳಷ್ಟು ಉದ್ದೇಶಪೂರ್ವಕವಾಗಿ ವಂಚಿಸುತ್ತಿದೆ ಎಂದು ಅನಿಸುತ್ತಿದೆ ಎಂದು ಅವರು ದೂರಿನಲ್ಲಿ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಈ ವೇಳೆ ಕೋರ್ಟ್‌ಗೆ ಹಾಜರಾದ ಐಟಿಸಿ ಕಂಪನಿಯ ವಕೀಲರು ಬಿಸ್ಕೆಟ್‌ಗಳನ್ನು ಪ್ರಮಾಣ ಎಷ್ಟಿದೆ ಎಂಬುದಕ್ಕಿಂತ ಎಷ್ಟು ತೂಕವಿದೆ ಎಂಬುದರ ಮೇಲೆ ಮಾರಾಟ ಮಾಡಲಾಗುತ್ತಿದೆ ಎಂದು ವಾದ ಮಂಡಿಸಿದ್ದಾರೆ. ಪ್ರತಿ ಸನ್‌ಫೀಸ್ಟ್ ಮಾರಿ ಲೈಟ್ ಪ್ಯಾಕೆಟ್ 76 ಗ್ರಾಂಗಳ ನಿವ್ವಳ ತೂಕವನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ. ಆದರೆ, ನ್ಯಾಯಾಲಯದ ತನಿಖೆ ವೇಳೆ 15 ಬಿಸ್ಕತ್ತುಗಳಿರುವ ಪ್ಯಾಕೆಟ್‌ಗಳು ಕೇವಲ 74 ಗ್ರಾಂ ತೂಕವಿತ್ತು ಎಂದು ತಿಳಿದು ಬಂದಿದೆ.
ವಿದ್ಯಾರ್ಥಿನಿಗೆ ದೋಷ ಪೂರಿತ ಟ್ಯಾಬ್ ಪೆನ್ ಕಳಿಸಿದ ಅಮೆಜಾನ್ ಕಂಪನಿಗೆ ₹60 ಸಾವಿರ ದಂಡ!
ಆದರೆ 2011 ರ ಕಾನೂನು, ಮಾಪನಶಾಸ್ತ್ರದ ನಿಯಮಗಳು ಮೊದಲೇ ಪ್ಯಾಕೇಜ್ ಮಾಡಿದ ಸರಕುಗಳಲ್ಲಿ ಗರಿಷ್ಠ 4.5 ಗ್ರಾಂ ವ್ಯತ್ಯಾಸವಿದ್ದರೆ ಅದಕ್ಕೆ ವಿರೋಧೇನಿಲ್ಲ ಎಂದು ಹೇಳಿದೆ ಎಂದು ಐಟಿಸಿ ವಾದ ಮಂಡನೆ ಮಾಡಿತ್ತು. ಆದರೆ ನ್ಯಾಯಾಲಯ ಈ ವಿವರಣೆಯನ್ನು ವಜಾಗೊಳಿಸಿದ್ದು, ಈ ರೀತಿಯ ವಿನಾಯಿತಿ ಕಾಲಾಂತರದಲ್ಲಿ ತೂಕ ನಷ್ಟವನ್ನು ಹೊಂದದೆ ಇರುವ ಬಿಸ್ಕೆಟ್‌ಗೆ ಅನ್ವಯವಾಗುವುದಿಲ್ಲ ಎಂದು ಹೇಳಿತು. ಇದಲ್ಲದೆ, ಐಟಿಸಿಯ ವಾದವನ್ನು ತಿರಸ್ಕರಿಸಿದ ನ್ಯಾಯಾಲಯವು ತೂಕದ ಆಧಾರದ ಮೇಲೆ ಇಲ್ಲಿ ಬಿಸ್ಕತ್ತುಗಳನ್ನು ಮಾರಾಟ ಮಾಡಲಾಗಿಲ್ಲ, ಪ್ಯಾಕೇಟ್‌ನಲ್ಲಿ ಸ್ಪಷ್ಟವಾಗಿ 16 ಬಿಸ್ಕೆಟ್‌ಗಳು ಇರುವ ಬಗ್ಗೆ ಸಂಸ್ಥೆ ನಮೂದಿಸಿದೆ. ಹೀಗಿದ್ದು, ಪ್ಯಾಕೇಟ್ ಒಳಗೆ ಒಂದು ಬಿಸ್ಕೆಟ್ ಕಡಿಮೆ ಮಾಡಿರುವುದು ತಪ್ಪು ಎಂದಿರುವ ನ್ಯಾಯಾಲಯ, ಈ ಹಿನ್ನೆಲೆಯಲ್ಲಿ ಗ್ರಾಹಕನಿಗೆ ಒಂದು ಲಕ್ಷ ದಂಡ ನೀಡುವಂತೆ ಐಟಿಸಿ ಸಂಸ್ಥೆಗೆ ಕೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ