ಓಣಂ ಹಬ್ಬದ ವೇಳೆಯಲ್ಲಿ ತೋರಿದ ನಿರ್ಲಕ್ಷ್ಯ| ಕೇರಳದಲ್ಲಿ ನಿಯಂತ್ರಣ ತಪ್ಪಿದ ಕೊರೋನಾ| ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಾಹಿತಿ
ನವದೆಹಲಿ(ಅ.19): ಕೇರಳದಲ್ಲಿ ಕೊರೋನಾ ನಿಯಂತ್ರಣ ತಪ್ಪಲು ಓಣಂ ಹಬ್ಬದ ವೇಳೆಯಲ್ಲಿ ತೋರಿದ ನಿರ್ಲಕ್ಷ್ಯವೇ ಕಾರಣ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಓಣಂ ವೇಳೆ ವ್ಯಾಪಾರ ವಹಿವಾಟು, ಪ್ರವಾಸ ಸೇರಿದಂತೆ ಎಲ್ಲ ನಿರ್ಬಂಧಗಳನ್ನೂ ಸಡಿಲಿಸಿ ನಿರ್ಲಕ್ಷ್ಯ ತೋರಿದ್ದ ಪರಿಣಾಮ ಕೇರಳ ಸದ್ಯ ಬಹುದೊಡ್ಡ ಬೆಲೆ ತೆರುತ್ತಿದೆ. ಕೇರಳ ಮಾಡಿದ ತಪ್ಪು ಎಲ್ಲಾ ರಾಜ್ಯ ಸರ್ಕಾರಗಳಿಗೆ ತಕ್ಕ ಪಾಠ. ಹಾಗಾಗಿ ಹಬ್ಬ ಹರಿದಿನಗಳನ್ನು ಎಲ್ಲರೂ ಮನೆಯಲ್ಲಿಯೇ ಆಚರಿಸೋಣ ಎಂದು ಕರೆಕೊಟ್ಟಿದ್ದಾರೆ.
ಓಣಂಗೂ ಮೊದಲು ಕೇರಳದಲ್ಲಿ 54,000 ಪ್ರಕರಣ ಇದ್ದರೇ, ಇದೀಗ ಅದು 3.3ಲಕ್ಷಕ್ಕೆ ಏರಿಕೆಯಾಗಿದೆ.
ಸಮುದಾಯಕ್ಕೆ ಹಬ್ಬಿದ ಕೊರೋನಾ: ಮೊದಲ ಬಾರಿ ಒಪ್ಪಿಕೊಂಡ ಕೇಂದ್ರ
ದೇಶದಲ್ಲಿ ಕೊರೋನಾ ವೈರಸ್ ಸಮುದಾಯಕ್ಕೆ ಹರಡಿದೆ ಎಂದು ತಜ್ಞರು ಕೆಲ ತಿಂಗಳ ಹಿಂದಿನಿಂದಲೇ ಹೇಳುತ್ತಾ ಬಂದಿದ್ದರೂ ನಿರಾಕರಿಸುತ್ತಿದ್ದ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಅದನ್ನು ಒಪ್ಪಿಕೊಂಡಿದೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಮಾತ್ರ ವೈರಸ್ ಸಮುದಾಯಕ್ಕೆ ಹರಡಿದೆ ಎಂದು ಹೇಳಿದೆ.
‘ದೇಶದ ವಿವಿಧ ರಾಜ್ಯಗಳ ಕೆಲವು ಭಾಗಗಳಲ್ಲಿ ಕೊರೋನಾ ವೈರಸ್ ಸಮುದಾಯಕ್ಕೆ ಹರಡಿರುವುದು ವರದಿಯಾಗಿದೆ. ಆದರೆ ಇದು ದೇಶಾದ್ಯಂತ ಆಗುತ್ತಿಲ್ಲ. ಕೆಲವು ಜಿಲ್ಲೆಗಳಿಗಷ್ಟೇ ಸೀಮಿತವಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್ ಹೇಳಿದ್ದಾರೆ. ಭಾನುವಾರ ಅವರು ನಡೆಸಿದ ‘ಸಂವಾದ’ ವೆಬಿನಾರ್‌ನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದಲ್ಲಿ ಕೊರೋನಾ ಸಮುದಾಯಕ್ಕೆ ಹರಡಿದೆ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.