Covid-19 Crisis: ಭಾರತದಲ್ಲೀಗ ಒಟ್ಟಿಗೆ ಎರಡು ಪ್ರತ್ಯೇಕ ಕೋವಿಡ್‌ ಅಲೆ

Kannadaprabha News   | Asianet News
Published : Jan 17, 2022, 02:45 AM IST
Covid-19 Crisis: ಭಾರತದಲ್ಲೀಗ ಒಟ್ಟಿಗೆ ಎರಡು ಪ್ರತ್ಯೇಕ ಕೋವಿಡ್‌ ಅಲೆ

ಸಾರಾಂಶ

ಒಮಿಕ್ರೋನ್‌ ರೂಪಾಂತರಿ ಕೊರೋನಾ ವೈರಸ್‌ನ ಗುಣಲಕ್ಷಣಗಳು, ಸೋಂಕಿನ ಲಕ್ಷಣಗಳ ಬಗ್ಗೆ ವಿಜ್ಞಾನಿಗಳು ಕುತೂಹಲ ಹೊಂದಿರುವ ಹೊತ್ತಿನಲ್ಲೇ, ಇದುವರೆಗೆ ಪತ್ತೆಯಾದ ಯಾವುದೇ ರೂಪಾಂತರಿ ಜೊತೆಗೂ ಒಮಿಕ್ರೋನ್‌ಗೆ ನಂಟಿಲ್ಲ. ಇದೊಂದು ಪ್ರತ್ಯೇಕ ಪ್ರಭೇದ. 

ನವದೆಹಲಿ (ಜ. 17): ಒಮಿಕ್ರೋನ್‌ (Omicron) ರೂಪಾಂತರಿ ಕೊರೋನಾ ವೈರಸ್‌ನ (Coronavirus) ಗುಣಲಕ್ಷಣಗಳು, ಸೋಂಕಿನ ಲಕ್ಷಣಗಳ ಬಗ್ಗೆ ವಿಜ್ಞಾನಿಗಳು ಕುತೂಹಲ ಹೊಂದಿರುವ ಹೊತ್ತಿನಲ್ಲೇ, ಇದುವರೆಗೆ ಪತ್ತೆಯಾದ ಯಾವುದೇ ರೂಪಾಂತರಿ ಜೊತೆಗೂ ಒಮಿಕ್ರೋನ್‌ಗೆ ನಂಟಿಲ್ಲ. ಇದೊಂದು ಪ್ರತ್ಯೇಕ ಪ್ರಭೇದ. ಹೀಗಾಗಿ ಭಾರತದಲ್ಲೀಗ ಸಮಾನಾಂತರಾವಾಗಿ ಎರಡು ಕೋವಿಡ್‌ ಅಲೆ ಕಾಣಿಸಿಕೊಂಡಿದೆ ಎಂದು ಹಿರಿಯ ವೈದ್ಯರೊಬ್ಬರು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮಾಜಿ ಮುಖ್ಯಸ್ಥ, ಹಿರಿಯ ವೈರಾಣು ತಜ್ಞ ಡಾ. ಟಿ.ಜಾಕೋಬ್‌ ಜಾನ್‌ (T Jacob John) ಮಾತನಾಡಿ, ‘ವುಹಾನ್‌ನಲ್ಲಿ ಮೊತ್ತ ಮೊದಲಿಗೆ ಸೋಂಕಿಗೆ ಕಾರಣವಾದ ವುಹಾನ್‌-ಡಿ614ಜಿ, ನಂತರ ಕಾಣಿಸಿಕೊಂಡ ಆಲ್ಪಾ, ಬೀಟಾ, ಗಾಮಾ, ಡೆಲ್ಟಾ, ಕಪ್ಪಾ, ಮು ಸೇರಿದಂತೆ ಯಾವುದೇ ರೂಪಾಂತರಿ ಜೊತೆಗೂ ಒಮಿಕ್ರೋನ್‌ ಸಂಬಂಧ ಹೊಂದಿಲ್ಲ. ಇದು ಸಂಪೂರ್ಣವಾಗಿ ಬೇರೆ ಮೂಲದಿಂದ ಉಗಮವಾಗಿರುವ ವೈರಸ್‌’ ಎಂದು ಹೇಳಿದ್ದಾರೆ.

‘ಕೋವಿಡ್‌ ಸಾಂಕ್ರಾಮಿಕದ ಬೆಳವಣಿಗೆಯ ಹಾದಿಯಲ್ಲಿ ಕಂಡುಬಂದ ಯಾವುದೇ ವೈರಸ್‌ ಜೊತೆಗೆ ಇದು ನಂಟು ಹೊಂದಿಲ್ಲ. ಹೀಗಾಗಿ ನಾವೀಗ ಭಾರತದಲ್ಲಿ ಡೆಲ್ಟಾಮತ್ತು ಒಮಿಕ್ರೋನ್‌ ಎಂಬ ಎರಡು ಪ್ರತ್ಯೇಕ ಕೋವಿಡ್‌ ಅಲೆಯನ್ನು ಎದುರಿಸುತ್ತಿದ್ದೇವೆ ಎಂಬ ಚಿಂತನೆಯತ್ತ ಸಾಗಬೇಕಿದೆ’ ಎಂದು ಜಾನ್‌ ಹೇಳಿದ್ದಾರೆ.

Coronavirus: ಒಮಿಕ್ರೋನ್‌, ಡೆಲ್ಟಾಗೆ  ಕೋವ್ಯಾಕ್ಸಿನ್‌ ಬೂಸ್ಟರ್ ಡೋಸ್‌ ಭರ್ಜರಿ ಮದ್ದು!

‘ಸಾಂಪ್ರದಾಯಿಕ ಕೋವಿಡ್‌ ವೈರಸ್‌ಗಳಿಗೆ ಹೋಲಿಸಿದರೆ ಒಮಿಕ್ರೋನ್‌ ಸಾಕಷ್ಟುಭಿನ್ನವಾಗಿದೆ. ಹೀಗಾಗಿಯೇ ಒಮಿಕ್ರೋನ್‌ ಅನ್ನು ಕೇವಲ ಜಿನೋಮ್‌ ಸೀಕ್ವೆನ್ಸಿಂಗ್‌ ಮೂಲಕ ಮಾತ್ರವೇ ಪತ್ತೆ ಹಚ್ಚಬಹುದು. ಇತರೆ ವೈರಸ್‌ ಶ್ವಾಸಕೋಶಕ್ಕೆ ತೊಂದರೆ ಮೂಡಿಸಿದರೆ, ಒಮಿಕ್ರೋನ್‌ ಕೇವಲ ಗಂಟಲು ಭಾಗದಲ್ಲಿ ಇರುತ್ತದೆ’ ಎಂದು ಜಾನ್‌ ಹೇಳಿದ್ದಾರೆ.

ಕೋವಿಡ್‌ನ ಮತ್ತೊಂದು ರೂಪಾಂತರಿ ಪತ್ತೆ:  ಜಗತ್ತು ಡೆಲ್ಟಾ ಹಾಗೂ ಒಮಿಕ್ರೋನ್‌ ಕೋವಿಡ್‌ ತಳಿಗಳ ಹಾವಳಿಯಿಂದ ತತ್ತರಿಸುತ್ತಿರುವಾಗಲೇ ಕೊರೋನಾ ವೈರಸ್‌ನ ಮತ್ತೊಂದು ರೂಪಾಂತರಿ ತಳಿ ‘ಡೆಲ್ಟಾಕ್ರೋನ್‌’(Deltacron) ಪತ್ತೆಯಾಗಿದೆ. ಯುರೋಪ್‌ (Europe) ಖಂಡದ ದ್ವೀಪ ದೇಶ ಸೈಪ್ರಸ್‌ ವಿಜ್ಞಾನಿಗಳು ಈ ಹೊಸ ತಳಿ ಪತ್ತೆ ಹಚ್ಚಿದ್ದಾರೆ. ಈ ವೈರಸ್‌ನಲ್ಲಿ ಡೆಲ್ಟಾಮತ್ತು ಒಮಿಕ್ರೋನ್‌ ಎರಡೂ ತಳಿಗಳ ಕೆಲ ಗುಣಗಳಿವೆ.

ಸೈಪ್ರಸ್‌ನಲ್ಲಿ ಕೋವಿಡ್‌ ದೃಢಪಟ್ಟ 25 ರೋಗಿಗಳ ಜೀನೋಮಿಕ್‌ ಸೀಕ್ವೆನ್ಸಿಂಗ್‌ ನಡೆಸಿದಾಗ ಅವರ ಪೈಕಿ ಕೆಲವರಲ್ಲಿ ಡೆಲ್ಟಾಮತ್ತು ಒಮಿಕ್ರೋನ್‌ ರೂಪಾಂತರಿ ತಳಿಗಳ ಒಂದಷ್ಟು ಗುಣಗಳ ಮಿಶ್ರಣವಿರುವ ವೈರಸ್‌ ಪತ್ತೆಯಾಗಿದೆ. ಇದಕ್ಕೆ ‘ಡೆಲ್ಟಾಕ್ರೋನ್‌’ ಎಂದು ವಿಜ್ಞಾನಿಗಳು ಕರೆದಿದ್ದಾರಾದರೂ, ಅಧಿಕೃತವಾಗಿ ಇನ್ನೂ ಹೆಸರು ಇಟ್ಟಿಲ್ಲ. ಇನ್ನು, ತಕ್ಷಣಕ್ಕೆ ಈ ರೂಪಾಂತರಿ ತಳಿಯ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಈ ಕುರಿತು ಅಧ್ಯಯನ ನಡೆಸಿದ ಸೈಪ್ರಸ್‌ ವಿಶ್ವವಿದ್ಯಾಲಯದ ತಜ್ಞರು ಹೇಳಿದ್ದಾರೆ.

Corona Crisis: ಪರಿಸ್ಥಿತಿ ಬದಲಾಗಬಹುದು, ಆಸ್ಪತ್ರೆ ದಾಖಲು ದರ ಏರಿಕೆ?: ಕೇಂದ್ರ

ಹೊಸ ರೂಪಾಂತರಿ ತಳಿಯಲ್ಲಿ ಡೆಲ್ಟಾ ತಳಿಯ ಕೆಲ ಜೆನೆಟಿಕ್‌ ಗುಣಗಳು ಹಾಗೂ ಒಮಿಕ್ರೋನ್‌ ತಳಿಯ ಕೆಲ ಜೆನೆಟಿಕ್‌ ಗುಣಗಳು ಮಿಶ್ರಿತವಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸದ್ಯಕ್ಕೆ ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದೂ ಹೇಳಿದ್ದಾರೆ’ ಎಂದು ಸೈಪ್ರಸ್‌ನ ಆರೋಗ್ಯ ಸಚಿವರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ