ಹೊಟೇಲ್ ಉದ್ಯಮಕ್ಕೆ ಫೈವ್ ಸ್ಟಾರ್ ಆಯಾಮ ನೀಡಿದ ಪಿಆರ್‌ಎಸ್ ಒಬೇರಾಯ್

By Anusha Kb  |  First Published Nov 14, 2023, 1:17 PM IST

ಪ್ರತಿಷ್ಠಿತ ಪಂಚತಾರಾ ಒಬೇರಾಯ್ ಹೊಟೇಲ್‌ಗಳ ಸ್ಥಾಪಕ ಪಿಆರ್‌ಎಸ್ ಒಬೇರಾಯ್ ಅವರು ನಿಧನರಾಗಿದ್ದು, ಅವರಿಗೆ 94 ವರ್ಷ ವಯಸ್ಸಾಗಿತ್ತು


ನವದೆಹಲಿ: ಪ್ರತಿಷ್ಠಿತ ಪಂಚತಾರಾ ಒಬೇರಾಯ್ ಹೊಟೇಲ್‌ಗಳ ಸ್ಥಾಪಕ ಪಿಆರ್‌ಎಸ್ ಒಬೇರಾಯ್ ಅವರು ನಿಧನರಾಗಿದ್ದು, ಅವರಿಗೆ 94 ವರ್ಷ ವಯಸ್ಸಾಗಿತ್ತು. ಇಂದು ಮುಂಜಾನೆ ಒಬೇರಾಯ್ ಅವರು ನಿಧನರಾಗಿದ್ದಾರೆ ಎಂದು ಒಬೇರಾಯ್ ಗ್ರೂಪ್ಸ್‌ನ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. 1929ರಲ್ಲಿ ನವದೆಹಲಿಯಲ್ಲಿ ಜನಿಸಿದ ಒಬೇರಾಯ್ ಅವರು ಭಾರತದಲ್ಲಿ ಹೊಟೇಲ್ ಉದ್ಯಮಕ್ಕೆ ಬೇರೆಯದೇ ಆಯಾಮವನ್ನು ನೀಡಿದ್ದರು. 

ಪಿಆರ್‌ಎಸ್‌ ಒಬೇರಾಯ್ ಅವರು ಒಬೇರಾಯ್ ಗ್ರೂಪ್‌ನ ಮುಂಚೂಣಿ ಸಂಸ್ಥೆಯಾದ EIH ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದರು. ನಮ್ಮ ಪ್ರೀತಿಯ ಮುಖ್ಯಸ್ಥರಾದ ಪಿಆರ್‌ಎಸ್ ಅವರು ನಿಧನರಾದ ಬಗ್ಗೆ ತಿಳಿಸುವುದಕ್ಕೆ ಬಹಳ ಬೇಸರ ವಿಷಾದವಾಗುತ್ತಿದೆ. ಎಮಿರಿಟರ್ಸ್ ಅಧ್ಯಕ್ಷರಾಗಿದ್ದ ಒಬೇರಾಯ್ ಅವರು ಒಬೇರಾಯ್‌ ಗ್ರೂಪ್ ಮೂಲಕ ಭಾರತ ಹಾಗೂ ವಿದೇಶಗಳಲ್ಲಿ ಅತಿಥ್ಯ ಹಾಗೂ ಹೊಟೇಲ್ ಉದ್ಯಮಕ್ಕೆ ಅವರದ್ದೇ ಆದ ಕೊಡುಗೆ ನೀಡಿದ್ದು, ಅವರ ನಿಧನದಿಂದ ಉದ್ಯಮಕ್ಕೆ ಭಾರಿ ನಷ್ ಆಗಿದೆ ಎಂದು ಪಿಆರ್‌ಎಸ್ ಒಬೇರಾಯ್ ಅವರ ಪುತ್ರರಾದ ವಿಕ್ರಮ್ ಮತ್ತು ಅರ್ಜುನ್ ಒಬೆರಾಯ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tap to resize

Latest Videos

ಒಬೇರಾಯ್ ಅವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆ ವೇಳೆಗೆ ದೆಹಲಿಯ ಕಪಶೇರಾ ಬಳಿಯ ಭಗ್ವಂತಿ ಒಬೇರಾಯ್ ಚಾರಿಟೇಬಲ್ ಟ್ರಸ್ಟ್‌ನ ಒಬೇರಾಯ್‌ ಫಾರ್ಮ್‌ನಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪಿ.ಆರ್.ಎಸ್. ಒಬೆರಾಯ್ ಒಬ್ಬ ದೂರದೃಷ್ಟಿಯ ನಾಯಕರಾಗಿದ್ದು, ಅವರ ಅಚಲವಾದ ಸಮರ್ಪಣೆ ಮತ್ತು ಉತ್ಕೃಷ್ಟತೆಯ ಉತ್ಸಾಹದಿಂದಾಗಿ ಒಬೆರಾಯ್ ಗ್ರೂಪ್ ಮತ್ತು ನಮ್ಮ ಹೋಟೆಲ್‌ಗಳು ಜಾಗತಿಕವಾಗಿ ಅತ್ಯುತ್ತಮವಾಗಿ ಗುರುತಿಸುವಂತೆ ಮಾಡಿತ್ತು. ಅವರ ಪರಂಪರೆಯು ನಮ್ಮ ಸಂಸ್ಥೆಯನ್ನು ಮೀರಿ ವಿಸ್ತರಿಸಿದೆ, ಭಾರತದಲ್ಲಿ ಮತ್ತು ಜಗತ್ತಿನಾದ್ಯಂತ ಅವರು ಸ್ಥಾಪಿಸಿದ ಈ ಹೊಟೇಲ್ ಉದ್ಯಮ ಪ್ರಭಾವ ಬೀರುತ್ತದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ

ಪಿಆರ್‌ಎಸ್ ಒಬೇರಾಯ್ ಬಗ್ಗೆ ಒಂದಿಷ್ಟು..

1929ರಲ್ಲಿ ಜನಿಸಿದ ಪೃಥ್ವಿ ರಾಜ್ ಸಿಂಗ್ ಒಬೇರಾಯ್ ಪಿಆರ್‌ಎಸ್‌ ಒಬೇರಾಯ್ ಎಂದೇ ಖ್ಯಾತಿ ಗಳಿಸಿದ್ದು, ಇಟಿಹೆಚ್‌ ಲಿಮಿಟೆಡ್‌ನ ಎಕ್ಸಿಕ್ಯುಟಿವ್ ಚೇರ್‌ಮ್ಯಾನ್ ಆಗಿದ್ದರು. ಇದರ ಜೊತೆಗೆ ಒಬೇರಾಯ್ ಹೊಟೇಲ್‌ ಪ್ರೈವೇಟ್ ಲಿಮಿಟೆಡ್‌ನ ಚೇರ್‌ಮ್ಯಾನ್ ಕೂಡ ಆಗಿದ್ದರು. ಇವರು ಒಬೇರಾಯ್‌ ಗ್ರೂಪ್‌ನ ಸ್ಥಾಪಕರಾಗಿದ್ದ ರಾಯ್ ಬಹದೂರ್ ಒಬೇರಾಯ್ ಅವರ ಪುತ್ರ. ಇವರು ಭಾರತ, ಯುಕೆ ಹಾಗೂ ಸ್ವಿಟ್ಚರ್ಲೆಂಡ್‌ನಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ ಇವರು ಒಬೇರಾಯ್ ಹೊಟೇಲ್‌ಗಳು ಜಾಗತಿಕ ಮಟ್ಟದಲ್ಲಿ ಹೆಸರಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರಿಗೆ ಹೊಟೇಲ್ ಉದ್ಯಮದಲ್ಲಿ ಮಾಡಿದ ಸಾಧನೆಗಾಗಿ 2008ರಲ್ಲಿ ಭಾರತದ 2ನೇ ಅತ್ಯುನ್ನತ ನಾಗರಿಕ ಪುರಸ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.  ಹಾಗೆಯೇ 2012ರಲ್ಲಿ ಇಂಟರ್‌ನ್ಯಾಷನಲ್ ಲಕ್ಸುರಿ ಟ್ರಾವೆಲ್ ಮಾರ್ಕೆಟ್‌ ಐಟಿಎಂಎಲ್‌ನಿಂದ ಜೀವಮಾನದ ಸಾಧನೆ ಪುರಸ್ಕಾರ ಲಭ್ಯವಾಗಿದೆ.

click me!