ಕೋವಿಡ್‌ ಅನಾಹುತಕ್ಕೆ ಮೂಕ ಪ್ರೇಕ್ಷಕ ಆಗೋದಿಲ್ಲ: ಸುಪ್ರೀಂ!

By Kannadaprabha News  |  First Published Apr 28, 2021, 9:47 AM IST

ಕೋವಿಡ್‌ ಅನಾಹುತಕ್ಕೆ ಮೂಕ ಪ್ರೇಕ್ಷಕ ಆಗೋದಿಲ್ಲ: ಸುಪ್ರೀಂ| ರಾಷ್ಟ್ರೀಯ ನೀತಿ ರೂಪಿಸಲು ಹೇಳಿದ್ದು ಹೈಕೋರ್ಟ್‌ಗಳಿಗೆ ಕಡಿವಾಣ ಹಾಕೋದಕ್ಕಲ್ಲ


ನವದೆಹಲಿ(ಏ.28): ಶದಲ್ಲಿ ಕೈಮೀರಿ ಹೋಗುತ್ತಿರುವ ಕೊರೋನಾ ಪರಿಸ್ಥಿತಿಯು ರಾಷ್ಟ್ರೀಯ ವಿಪತ್ತಾಗಿದ್ದು, ಇದನ್ನು ನೋಡಿಕೊಂಡು ತಾನು ಮೂಕಪ್ರೇಕ್ಷಕನಾಗಿ ಕುಳಿತುಕೊಳ್ಳುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಕಠಿಣ ಮಾತುಗಳಲ್ಲಿ ಹೇಳಿದೆ. ಅಲ್ಲದೆ, ಕೊರೋನಾ ನಿಯಂತ್ರಣಕ್ಕೆ ರಾಷ್ಟ್ರೀಯ ನೀತಿ ರೂಪಿಸಬೇಕು ಎಂದು ತಾನು ಕೆಲ ದಿನಗಳ ಹಿಂದೆ ಹೇಳಿರುವುದು ಹೈಕೋರ್ಟ್‌ಗಳ ಅಧಿಕಾರ ಮೊಟಕುಗೊಳಿಸುವುದಕ್ಕೆ ಅಲ್ಲ ಎಂದೂ ಮತ್ತೊಮ್ಮೆ ಸ್ಪಷ್ಟನೆ ನೀಡಿದೆ.

ಕೊರೋನಾ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಹಾಗೂ ಅದರಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಸುಪ್ರೀಂಕೋರ್ಟ್‌ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಇದೇ ವೇಳೆ, ರಾಜ್ಯಗಳ ಹೈಕೋರ್ಟ್‌ಗಳು ಕೂಡ ಕೊರೋನಾ ನಿಯಂತ್ರಣದ ಸಂಬಂಧ ಬೇರೆ ಬೇರೆ ರೀತಿಯ ಆದೇಶಗಳನ್ನು ಹೊರಡಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕಳೆದ ವಾರ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್‌, ಕೊರೋನಾ ನಿಯಂತ್ರಣಕ್ಕೆ ರಾಷ್ಟ್ರೀಯ ನೀತಿ ರೂಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಅದು ಹೈಕೋರ್ಟ್‌ಗಳ ಅಧಿಕಾರ ವ್ಯಾಪ್ತಿಯನ್ನು ಮೊಟಕುಗೊಳಿಸುವ ಯತ್ನ ಎಂದು ಕೆಲ ಹಿರಿಯ ವಕೀಲರು ಹೇಳಿದ್ದರು. ಮರುದಿನವೇ ಆ ಬಗ್ಗೆ ಸ್ಪಷ್ಟನೆ ನೀಡಿದ್ದ ಅಂದಿನ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ, ನಮ್ಮ ಆದೇಶವನ್ನು ಓದದೆಯೇ ಟೀಕಿಸಬಾರದು ಎಂದು ಕಿಡಿಕಾರಿದ್ದರು. ಈ ಕುರಿತು ಮಂಗಳವಾರದ ವಿಚಾರಣೆಯ ವೇಳೆ ನ್ಯಾ

Latest Videos

undefined

ಡಿ.ವೈ.ಚಂದ್ರಚೂಡ ಅವರ ಪೀಠ ಮತ್ತೊಮ್ಮೆ ಅದನ್ನೇ ಸ್ಪಷ್ಟಪಡಿಸಿದ್ದು, ಸ್ಥಳೀಯವಾಗಿ ಕೊರೋನಾ ಪರಿಸ್ಥಿತಿ ನಿಯಂತ್ರಿಸುವ ಸಂಬಂಧ ಆದೇಶ ಹೊರಡಿಸಲು ನಮಗಿಂತ ಹೈಕೋರ್ಟ್‌ಗಳೇ ಹೆಚ್ಚು ಸಮರ್ಥವಾಗಿವೆ ಎಂದು ಹೇಳಿದೆ. ಆದರೆ, ಕೆಲವೊಮ್ಮೆ ಅಂತರ್‌ರಾಜ್ಯ ಸಂಬಂಧಿ ವಿಚಾರಗಳಿದ್ದರೆ ನಾವು ನೆರವಿಗೆ ಬರುತ್ತೇವೆ. ಒಟ್ಟಿನಲ್ಲಿ ಕೊರೋನಾ ಬಿಕ್ಕಟ್ಟನ್ನು ನೋಡಿಕೊಂಡು ಮೂಕಪ್ರೇಕ್ಷಕನಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಲಸಿಕೆ ದರದ ಬಗ್ಗೆ ಸ್ಪಷ್ಟನೆ ಕೊಡಿ:

ಇದೇ ವೇಳೆ, ಕೊರೋನಾ ಲಸಿಕೆ ಉತ್ಪಾದಿಸುವ ಕಂಪನಿಗಳು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಬೇರೆ ಬೇರೆ ದರ ನಿಗದಿಪಡಿಸಿರುವ ಬಗ್ಗೆ ತನಗೆ ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸೂಚಿಸಿದೆ. ಅಲ್ಲದೆ, 18 ವರ್ಷ ಮೇಲ್ಪಟ್ಟಎಲ್ಲರಿಗೂ ಲಸಿಕೆ ವಿತರಿಸಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಏನು ಸಿದ್ಧತೆ ಮಾಡಿಕೊಂಡಿದ್ದೀರಿ ಎಂದು ರಾಜ್ಯ ಸರ್ಕಾರಗಳನ್ನು ಕೇಳಿರುವ ನ್ಯಾಯಪೀಠ, ಲಸಿಕೆಗೆ ದಿಢೀರ್‌ ಬೇಡಿಕೆ ಹೆಚ್ಚುವುದರಿಂದ ಹೇಗೆ ನಿಭಾಯಿಸುತ್ತೀರಿ ಎಂದು ಪ್ರಶ್ನಿಸಿದೆ.

ಅಲ್ಲದೆ, ದೇಶದಲ್ಲಿ ಆಕ್ಸಿಜನ್‌ಗೆ ಹಾಹಾಕಾರ ಎದ್ದಿರುವ ಹಿನ್ನೆಲೆಯಲ್ಲಿ ಪೂರೈಕೆ ಸುಗಮಗೊಳಿಸಲು ಏನು ಮಾಡುತ್ತೀರಿ ಎಂದು ಕೇಂದ್ರ ಸರ್ಕಾರದಿಂದ ಮಾಹಿತಿ ಕೋರಿದೆ. ಈ ಮಧ್ಯೆ, ಕೊರೋನಾ ಪ್ರಕರಣದಲ್ಲಿ ತನಗೆ ನೆರವು ನೀಡಲು ಹಿರಿಯ ವಕೀಲರಾದ ಜೈದೀಪ್‌ ಗುಪ್ತಾ ಹಾಗೂ ಮೀನಾಕ್ಷಿ ಅರೋರಾ ಅವರನ್ನು ಅಮಿಕಸ್‌ ಕ್ಯೂರಿಯಾಗಿ ನೇಮಕ ಮಾಡಿದೆ. ಕಳೆದ ವಾರ ನೇಮಕಗೊಂಡಿದ್ದ ಹರೀಶ್‌ ಸಾಳ್ವೆ ಮರುದಿನವೇ ಹಿಂದೆ ಸರಿದಿದ್ದರು.

click me!