ಗುವಾಹಟಿ/ ನವದೆಹಲಿ(ಏ.15): ಇಡೀ ದೇಶ ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಪರದಾಡುತ್ತಿರುವಾಗ ಈಶಾನ್ಯದ ಏಳು ರಾಜ್ಯಗಳು ಮಾತ್ರ ಬಹುತೇಕ ನಿಶ್ಚಿಂತವಾಗಿವೆ. ದೇಶದ 3.6ರಷ್ಟುಜನಸಂಖ್ಯೆ ಹೊಂದಿರುವ ಈ ರಾಜ್ಯಗಳಲ್ಲಿ ಇಲ್ಲಿಯವರೆಗೆ ಕೊರೋನಾ ಸೋಂಕು ತಗಲಿರುವವರ ಸಂಖ್ಯೆ ಒಟ್ಟು 35 ಮಾತ್ರ. ಮೇಲಾಗಿ, ಇಲ್ಲಿನ ಜನರಿಗೆ ಸೋಂಕು ಹರಡುವ ಪ್ರಮಾಣ ಕೂಡ ನಗಣ್ಯ ಎಂಬಷ್ಟಿದೆ. ಇದಕ್ಕೆ ಕಾರಣವೇನು ಎಂಬುದು ವಿಜ್ಞಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಬಹುಶಃ ಇಲ್ಲಿನ ಜನರ ದೇಹದಲ್ಲಿ ಕೊರೋನಾ ವೈರಸ್ ವಿರುದ್ಧದ ರೋಗನಿರೋಧಕ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿರಬಹುದು ಎಂದು ಅಸ್ಸಾಂನ ರಾಷ್ಟ್ರೀಯ ಹೆಲ್ತ್ ಮಿಷನ್ ನಿರ್ದೇಶಕರು ಹೇಳಿದ್ದಾರೆ. ಸೋಂಕಿತ 35 ಜನರ ಪೈಕಿ 31 ಜನರ ಜೊತೆ ಸಂಪರ್ಕಕ್ಕೆ ಬಂದ ಸುಮಾರು 2000 ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರೆಲ್ಲರ ವರದಿ ನೆಗೆಟಿವ್ ಬಂದಿದೆ. ಅಸ್ಸಾಂನಲ್ಲಿರುವ ಎಲ್ಲಾ 28 ಕೊರೋನಾ ಪಾಸಿಟಿವ್ ಪ್ರಕರಣಗಳು ತಬ್ಲೀಘಿ ಜಮಾತ್ ಜೊತೆಗಿನ ಸಂಪರ್ಕದ ಪ್ರಕರಣಗಳೇ ಆಗಿವೆ.
3 ಲಕ್ಷ ಜನರ ಮೇಲೆ ಮೋದಿ ಕಣ್ಣು, 2 ನೇ ಹಂತದ ಲಾಕ್‌ಡೌನ್ ಹಿಂದಿನ ರಹಸ್ಯ!
ಇವರ ಜೊತೆಗೆ ಸಂಪರ್ಕಕ್ಕೆ ಬಂದ ಸ್ಥಳೀಯ 1200-1300 ಜನರಲ್ಲಿ ಯಾರೊಬ್ಬರಿಗೂ ಸೋಂಕು ತಗಲಿಲ್ಲ. ಅದೇ ರೀತಿ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಹಾಗೂ ಬ್ರಹ್ಮಪುತ್ರಾ ನದಿಯಲ್ಲಿ ವಾರಗಟ್ಟಲೆ ಸಂಚರಿಸಿದ ಅಮೆರಿಕದ ಕೊರೋನಾ ಸೋಂಕಿತ ಪ್ರಜೆಯ ಜೊತೆ ಸಂಪರ್ಕಕ್ಕೆ ಬಂದವರಿಗೂ ಸೋಂಕು ತಗಲಿಲ್ಲ. ಮಣಿಪುರ, ತ್ರಿಪುರಾದಲ್ಲಿ ವಿದೇಶದಿಂದ ಬಂದ ಬೆರಳೆಣಿಕೆಯ ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಅವರ ಸಂಪರ್ಕಕ್ಕೆ ಬಂದ ಸ್ಥಳೀಯರಾರಿಗೂ ಸೋಂಕು ಹರಡಿಲ್ಲ.
ಈಶಾನ್ಯ ರಾಜ್ಯಗಳಲ್ಲಿ ಮಲೇರಿಯಾ ಜ್ವರ ಯಾವಾಗಲೂ ಕಾಣಿಸಿಕೊಳ್ಳುತ್ತಿರುತ್ತದೆ. ಹೀಗಾಗಿ ಜನರಿಗೆ ಸಣ್ಣಪುಟ್ಟಜ್ವರ ಬಂದರೂ ಮಲೇರಿಯಾಕ್ಕೆ ನೀಡುವ ಹೈಡ್ರೋಕ್ಸೈಕ್ಲೋರೋಕೀನ್ ಮಾತ್ರೆಯನ್ನು ವೈದ್ಯರು ನೀಡುತ್ತಾರೆ. ಈ ಮಾತ್ರೆಯಿಂದಾಗಿ ಇಲ್ಲಿನ ಜನರಲ್ಲಿ ಕೊರೋನಾ ವಿರುದ್ಧದ ರೋಗನಿರೋಧಕ ಶಕ್ತಿ ಹೆಚ್ಚಿರಬಹುದು ಎಂದು ತಜ್ಞರು ಶಂಕಿಸಿದ್ದಾರೆ.