
ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಮಹಿಳೆಯೊಬ್ಬರು 20 ಅಡಿ ಆಳಕ್ಕೆ ಬಿದ್ದಂತಹ ಭಯಾನಕ ಘಟನೆ ನೋಯ್ಡಾದ ವಸತಿ ಸಂಕೀರ್ಣವೊಂದರ ಬಳಿ ನಡೆದಿದ್ದು, ಈ ಭಯಾನಕ ದೃಶ್ಯಾವಳಿಯ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿವ ವೈರಲ್ ಆಗಿದೆ. ವೆಸ್ಟ್ ಗ್ರೇಟರ್ ನೋಯ್ಡಾದ ಇಕೋ ವಿಲೇಜ್ -1 ಸೊಸೈಟಿ ಸಮೀಪ ಈ ಘಟನೆ ನಡೆದಿದೆ. ಘಟನೆಯಲ್ಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ವಾಕಿಂಗ್ ಕರೆದುಕೊಂಡು ಬಂದ ನಾಯಿಯೊಂದು ಮಾಲೀಕನನ್ನು ಎಳೆದುಕೊಂಡು ತಮ್ಮತ್ತ ಬರುತ್ತಿದ್ದಿದ್ದರಿಂದ ಅದು ದಾಳಿ ಮಾಡಬಹುದು ಎಂದು ಭಯಗೊಂಡ 37 ವರ್ಷದ ಮಹಿಳೆ ಅಕ್ಕಪಕ್ಕ ಏನಿದೆ ಎಂಬುದನ್ನು ಕೂಡ ಗಮನಿಸದೇ ಪಕ್ಕಕ್ಕೆ ಕಾಲಿಟಿದ್ದಾರೆ. ಪರಿಣಾಮ ಅವರು 20 ಅಡಿ ಆಳಕ್ಕೆ ಬಿದ್ದಿದ್ದಾರೆ. ಅಷ್ಟು ಎತ್ತರದಿಂದ ಕೆಳಗೆ ಬಿದ್ದಿದ್ದರಿಂದ ಅವರ ಬೆನ್ನು ಮೂಳೆಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ವ್ಯಕ್ತಿಯೊಬ್ಬರು ತಮ್ಮ ನಾಯಿಯೊಂದಿಗೆ ವಾಕಿಂಗ್ ಬರುತ್ತಿದ್ದಾರೆ. ಈ ವೇಳೆ ಮಹಿಳೆಯನ್ನು ನೋಡಿದ ನಾಯಿ ಮಾಲೀಕ ಹಿಡಿದುಕೊಂಡಿದ್ದರೂ ಎಳೆದುಕೊಂಡು ಮಹಿಳೆಯತ್ತ ಹೋಗಲು ನೋಡುತ್ತಿದೆ. ಈ ವೇಳೆ ಭಯಗೊಂಡ ಮಹಿಳೆ ಈ ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಗಲಿಬಿಲಿಯಾಗಿ ಪಕ್ಕಕ್ಕೆ ಕಾಲಿಟ್ಟಿದ್ದಾರೆ. ಪರಿಣಾಮ 20 ಅಡಿ ಆಳಕ್ಕೆ ಬಿದ್ದಿದ್ದಾರೆ. ಅವರು ಬೀಳುತ್ತಿದ್ದಂತೆ ವ್ಯಕ್ತಿಯೊಬ್ಬರು ಓಡಿ ಹೋಗಿ ಅವರ ಸಹಾಯಕ್ಕೆ ಧಾವಿಸಿದ್ದಾರೆ. ಈ ಎಲ್ಲಾ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
ಕೆಳಗೆ ಬಿದ್ದ ಮಹಿಳೆಯನ್ನೂ ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಅವರ ಬೆನ್ನುಹುರಿಗೆ ಗಾಯವಾಗಿದ್ದು, ಅವರನ್ನು ಕೂಡಲೇ ಆಪರೇಷನ್ ಥಿಯೇಟರ್‌ಗೆ ಶಿಫ್ಟ್ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಪತಿ ಮಾತನಾಡಿದ್ದು, ಮುಂಜಾನೆ 9 ಗಂಟೆಗೆ ಘಟನೆ ನಡೆದಿದೆ. ಆಕೆ ಮುಂಜಾನೆ ವಾಕ್ ಮಾಡುವುದಕ್ಕೆ ಹೋಗಿದ್ದರು. ಇದೇ ವೇಳೆ ವ್ಯಕ್ತಿಯೊಬ್ಬರು ತಮ್ಮ ನಾಯಿಯನ್ನು ಕರೆದುಕೊಂಡು ವಾಕ್ ಬಂದಿದ್ದರು. ಇದೇ ವೇಳೆ ತಮ್ಮ ಪತ್ನಿಯನ್ನು ನೋಡಿ ನಾಯಿ ದಾಳಿ ಮಾಡಿದ್ದು, ನಾಯಿಯಿಂದ ತಪ್ಪಿಸಿಕೊಳ್ಳಲು ಹೋಗಿ ಭಯಗೊಂಡು ಅವರು ಕೆಳಗೆ ಬಿದ್ದಿದ್ದಾರೆ ಎಂದು ಹೇಳಿದ್ದಾರೆ. ಈ ಮಹಿಳೆಗೆ ನಾಲ್ಕು ತಿಂಗಳ ಹೆಣ್ಣು ಮಗುವೂ ಇದೆ ಎಂದು ವರದಿಯಾಗಿದೆ.
ಆ ಭಯಾನಕ ವೀಡಿಯೋ ಇಲ್ಲಿದೆ ನೋಡಿ
ಮುದ್ದು ಮಾಡ್ತಿದ್ದವನಿಗೆ ಸಿಟ್ಟಿಗೆದ್ದು ಕಚ್ಚೇ ಬಿಟ್ಟ ಬೀದಿ ನಾಯಿ: ಭಯಾನಕ ವೀಡಿಯೋ ವೈರಲ್
ಪ್ರಾಣಿಗಳ ಕೆಲ ನಡವಳಿಕೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ, ಮದವೇರಿದ ವೇಳೆ ಆನೆಗಳು ತಮ್ಮನ್ನು ಸಾಕಿ ಸಲಹಿದ ಮಾಲೀಕರನ್ನೇ ಸಾಯಿಸಿವೆ. ಅದೇ ರೀತಿ ಇಲ್ಲೊಂದು ಕಡೆ ಬೀದಿ ನಾಯಿಯೊಂದು ತನ್ನನ್ನು ಮುದ್ದಾಡುತ್ತಿದ್ದ ವ್ಯಕ್ತಿಯ ಮೇಲೆಯೇ ಎರಗಿ ಆತನನ್ನು ಗಾಯಗೊಳಿಸಿದೆ. ಈ ಭಯಾನಕ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ವೀಡಿಯೋದಲ್ಲಿ ಕಾಣಿಸುವಂತೆ ವ್ಯಕ್ತಿಯೊಬ್ಬರು ರಸ್ತೆ ಬದಿ ಪಾರ್ಕ್ ಮಾಡಿರುವ ಕಾರುಗಳ ಸಮೀಪದಲ್ಲಿ ನಿಂತು ಕೊಂಡಿದ್ದಾರೆ. ಈ ವೇಳೆ ಅಲ್ಲಿಗೆ ಬೀದಿನಾಯಿಯೊಂದು ಬಂದಿದೆ. ಈ ಬೀದಿನಾಯಿ ನಿಧಾನವಾಗಿ ಅಲ್ಲಿ ನಿಂತಿದ ವ್ಯಕ್ತಿಯ ಬಳಿ ಬಂದಿದ್ದು, ಪರಿಚಯವಿರುವಂತೆ ಬಾಲ ಅಲ್ಲಾಡಿಸಿದೆ. ಹೀಗಾಗಿ ಅಲ್ಲಿ ನಿಂತಿದ್ದ ವ್ಯಕ್ತಿಯೂ ಕೂಡ ಸಮಾಧಾನದಿಂದ ಹಾಗೂ ಧೈರ್ಯವಾಗಿ ನಾಯಿಯ ಮೈದಡವಿ ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ನಾಯಿಯ ಬೆನ್ನು ಸವರಿ ಮುದ್ದಾಡಿದ್ದಾರೆ. ಸರಿಸುಮಾರು ನಿಮಿಷದವರೆಗೂ ಅವರು ನಾಯಿಯ ತಲೆ ಮುಟ್ಟಿ ಮೈದಡವಿ ಮಾತನಾಡಿಸಿದ್ದಾರೆ.
ಆದರೆ ಇದಾಗಿ ಕೆಲ ಕ್ಷಣಗಳಲ್ಲೇ ನಾಯಿಗೆ ಏನಾಯ್ತೋ ಏನೋ ನಾಯಿ ಆಕ್ರಮಣಕಾರಿಯಾಗಿ ಅವರ ಮೇಲೆ ದಾಳಿ ನಡೆಸಲು ಮುಂದಾಗಿದೆ. ಮುದ್ದಾಡುತ್ತಿದ್ದವನ ಮೇಲೆಯೇ ಎಗರಿ ಬಿದ್ದ ನಾಯಿ ಆತನ ಮೇಲೆ ದಾಳಿ ನಡೆಸಿ ಆತನ ಕೈಗೆ ಕಚ್ಚಿದೆ. ಈ ಅನಿರೀಕ್ಷಿತ ದಾಳಿಯಿಂದ ಆತನಿಗೂ ಗಾಯಗಳಾಗಿದ್ದಲ್ಲದೇ ಆತ ಭಯಗೊಂಡಿದ್ದಾರೆ. ಈ ವೇಳೆ ಅಲ್ಲದೇ ಕಾರು ವಾಶ್ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಓಡಿ ಬಂದು ನಾಯಿಯನ್ನು ಅಲ್ಲಿಂದ ಓಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ